ವಿದೇಶಿ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಬಾರದು. ‘ಸ್ವದೇಶಿ’ ಅಥವಾ ಸ್ಥಳೀಯ ಉತ್ಪಾದನೆಗೆ ಹೆಚ್ಚು ಒತ್ತುಕೊಡಬೇಕು. ಸಮುದಾಯಗಳ ನಡುವೆ ‘ನಾವು’ vs ‘ಅವರು’ ಮನಸ್ಥಿತಿ ಇರಬಾರದು. ನಮ್ಮದು ವೈವಿದ್ಯತೆಯ ದೇಶ. ಇಲ್ಲಿ ಸಮುದಾಯಗಳನ್ನು ಪ್ರಚೋದಿಸುವುದು ಸ್ವೀಕಾರಾರ್ಹವಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್‌ಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ನಡೆದ ವಿಜಯ ದಶಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಅಮೆರಿಕ ಜಾರಿಗೆ ತಂದ ಹೊಸ ಸುಂಕ ನೀತಿಯು ಅಮೆರಿಕದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಗಿದೆ. ಆದರೆ, ಪ್ರತಿಯೊಬ್ಬರೂ ಅವರಿಂದ ಪ್ರಭಾವಿತರಾಗಿದ್ದಾರೆ… ಜಗತ್ತು ಪರಸ್ಪರ ಅವಲಂಬನೆಯೊಂದಿಗೆ ಕಾರ್ಯನಿರ್ವಹಿಸುತ್ತದೆ… ಯಾವುದೇ ದೇಶವು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲ. ಈ ಅವಲಂಬನೆಯು ಕಡ್ಡಾಯವಾಗಬಾರದು… ನಾವು ಸ್ವದೇಶಿಯನ್ನು ಅವಲಂಬಿಸಬೇಕು ಮತ್ತು ಸ್ವಾವಲಂಬನೆಯ ಮೇಲೆ ಗಮನಹರಿಸಬೇಕು. ಆದರೆ ನಮ್ಮ ಎಲ್ಲ ಸ್ನೇಹಪರ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು” ಎಂದಿದ್ದಾರೆ.
“ನೇಪಾಳದಲ್ಲಿ ಭುಗಿಲೆದ್ದಿರುವ ಅಶಾಂತಿ ಒಳ್ಳೆಯ ಸಂಕೇತವಲ್ಲ. ಸಾರ್ವಜನಿಕ ಕೋಪವು ಹಿಂಸೆಗೆ ತಿರುಗಿದ್ದರಿಂದ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಆಡಳಿತ ಬದಲಾವಣೆ ನಡೆದಿರುವುದು ಕಳವಳಕಾರಿಯಾಗಿದೆ. ಭಾರತದಲ್ಲಿ ಅಂತಹ ಅಶಾಂತಿಯನ್ನು ಸೃಷ್ಟಿಸಲು ಬಯಸುವ ಶಕ್ತಿಗಳು ನಮ್ಮ ದೇಶದ ಒಳಗೆ ಮತ್ತು ಹೊರಗೆ ಸಕ್ರಿಯವಾಗಿವೆ” ಎಂದು ಭಾಗವತ್ ಹೇಳಿದ್ದಾರೆ.
“ವೈವಿಧ್ಯತೆಯು ಭಾರತದ ಸಂಪ್ರದಾಯವಾಗಿದೆ. ನಾವು ನಮ್ಮ ವೈವಿದ್ಯಯತೆಯನ್ನು ಅಳವಡಿಸಿಕೊಳ್ಳಬೇಕು. ಕೆಲವು ಭಿನ್ನಾಭಿಪ್ರಾಯಗಳು ಅಶಾಂತಿಗೆ ಕಾರಣವಾಗಬಹುದು. ಕಾನೂನಿನ ವ್ಯಾಪ್ತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು. ಸಮುದಾಯಗಳನ್ನು ಕೆರಳಿಸುವುದು ಸ್ವೀಕಾರಾರ್ಹವಲ್ಲ. ಆಡಳಿತವು ನ್ಯಾಯಯುತವಾಗಿ ವರ್ತಿಸಬೇಕು. ಆದರೆ, ಯುವಕರು ಜಾಗರೂಕರಾಗಿರಬೇಕು ಮತ್ತು ಅಗತ್ಯವಿದ್ದರೆ ಮಧ್ಯಪ್ರವೇಶಿಸಬೇಕು. ‘ನಾವು’ vs ‘ಅವರು’ ಎಂಬ ಮನಸ್ಥಿತಿ ಸ್ವೀಕಾರಾರ್ಹವಲ್ಲ” ಎಂದು ಹೇಳಿದರು.