ಮಧ್ಯ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಈವರೆಗೆ 72 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಭೂಕಂಪದಲ್ಲಿ ಸುಮಾರು 300 ಜನರು ಗಾಯಗೊಂಡಿದ್ದಾರೆ. 20,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದು, ನಿರಾಶ್ರಿತ ತಾಣಗಳಲ್ಲಿ ಆಶ್ರಯ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಬುಧವಾರ ರಾತ್ರಿ, ಫಿಲಿಪೈನ್‌ನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ಬೊಗೊ ನಗರದಲ್ಲಿ ಹೋಟೆಲ್ ಕುಸಿದಿದ್ದು, ಅವಶೇಷಗಳ ಅಡಿಯಲ್ಲಿ ಹಲವಾರು ಮಂದಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸೆಬು ದ್ವೀಪದ ಉತ್ತರ ಭಾಗದಲ್ಲಿ ಸುಮಾರು 600 ಮನೆಗಳು ಧ್ವಂಸಗೊಂಡಿವೆ. ಆ ಪ್ರದೇಶದಲ್ಲಿ ಸಾವಿರಾರು ಸಂತ್ರಸ್ತ ಜನರಿಗೆ ಕುಡಿಯುವ ನೀರು, ಆಹಾರ, ಬಟ್ಟೆ ಮತ್ತು ತಾತ್ಕಾಲಿಕ ವಸತಿ ಹಾಗೂ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಸೆಬು ಪ್ರಾಂತೀಯ ಗವರ್ನರ್ ಪಮೇಲಾ ಬಾರಿಕುಯಾಟ್ರೊ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ
“ಅನೇಕ ಮನೆಗಳು ನಾಶವಾಗಿವೆ. ಅನೇಕ ಕುಟುಂಬಗಳಿಗೆ ಸಹಾಯದ ಅಗತ್ಯವಿದೆ… ಅವರಿಗೆ ನಮ್ಮ ಸಹಾಯ, ಪ್ರಾರ್ಥನೆ ಮತ್ತು ಬೆಂಬಲ ಬೇಕು. ಸಾಧ್ಯ ಇರುವವರು ನೆರವಿಗೆ ಧಾವಿಸಬಹುದು” ಎಂದು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫಿಲಿಪೈನ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಗುರುವಾರ ಹಿರಿಯ ಅಧಿಕಾರಿಗಳೊಂದಿಗೆ ಸೆಬು ನಗರಕ್ಕೆ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.
“ಅನೇಕ ಪ್ರದೇಶಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಭೂಕಂಪದಿಂದ ಪ್ರಭಾವಿತವಾದ 42 ಪ್ರದೇಶಗಳ 1,10,000ಕ್ಕೂ ಹೆಚ್ಚು ಜನರಿಗೆ ತಮ್ಮ ಮನೆಗಳನ್ನು ಪುನರ್ನಿರ್ಮಿಸಲು ಮತ್ತು ಅವರ ಜೀವನೋಪಾಯವನ್ನು ಪುನಃಸ್ಥಾಪಿಸಲು ನೆರವಿನ ಅಗತ್ಯವಿದೆ” ಎಂದು ಪ್ರಾದೇಶಿಕ ನಾಗರಿಕ ರಕ್ಷಣಾ ಕಚೇರಿ ತಿಳಿಸಿದೆ.