ಕಸಾಪ ಅಧ್ಯಕ್ಷರ ಎಡವಟ್ಟು; ಡಿಸೆಂಬರ್‌ನಲ್ಲಿ ಸಮ್ಮೇಳನ ನಡೆಯುವುದೇ ಅನುಮಾನ!

Date:

Advertisements

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ವಿರುದ್ಧ ಸಹಕಾರ ಇಲಾಖೆ ಈಗಾಗಲೇ ಮಧ್ಯಂತರ ವರದಿ ಸಿದ್ಧಪಡಿಸಿದ್ದು ಸದ್ಯದಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಿದೆ. ಆ ನಂತರ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡುವ ಬಗ್ಗೆ ತೀರ್ಮಾನಿಸಲಿದೆ. ಈ ಎಲ್ಲ ಎಡವಟ್ಟುಗಳಿಂದಾಗಿ ಡಿಸೆಂಬರ್‌ಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ

ಅಕ್ಟೋಬರ್ 5ರಂದು ಜಮಖಂಡಿಯ ಕಲ್ಲಹಳ್ಳಿಯ ಹಿರಿಯ ಸಾಹಿತಿ ಸತ್ಯಕಾಮರ ಮನೆ ʼಸುಮ್ಮನೆʼಯಲ್ಲಿ 2024-25ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ 108ನೇ ವಾರ್ಷಿಕ ಸಾಮಾನ್ಯ ಸಭೆ ಜರುಗಲಿದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಪ್ರಕಟಿಸಿದ್ದಾರೆ. ಕಳೆದ ಭಾನುವಾರ ಜಮಖಂಡಿಯ ರಮಾನಿವಾಸ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಕೂಡ್ಲಿಗಿಯಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆ ಕೆಲವರ ಕುತಂತ್ರಗಳಿಂದ ಆಧಾರ ರಹಿತ ಮತ್ತು ಸುಳ್ಳು ಮಾಹಿತಿಗಳನ್ನು ನೀಡಿ ರದ್ದಾಗುವಂತೆ ಮಾಡಿದ ಜಾಣಗೆರೆ ವೆಂಕಟರಾಮಯ್ಯ ಮತ್ತು ಡಾ.ವಸುಂಧರಾ ಭೂಪತಿ ಅವರ ಸದಸ್ಯತ್ವವನ್ನು ವಿಚಾರಣೆಗೆ ಕಾಯ್ದಿರಿಸಿ, ಅಮಾನತ್ತಿನಲ್ಲಿ ಇರಿಸಲಾಗಿದೆ” ಎಂದು ಘೋಷಣೆ ಮಾಡಿದರು. ಅದೀಗ ವಿವಾದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಕಸಾಪ ಅಧ್ಯಕ್ಷರ ನಡವಳಿಕೆ, ಏಕಾಧಿಪತ್ಯದ ಧೋರಣೆಯ ವಿರುದ್ಧ ಬೂದಿ ಮುಚ್ಚಿದ ಕೆಂಡದಂತಿದ್ದ ಆಕ್ರೋಶ ಮತ್ತೆ ಮುನ್ನೆಲೆಗೆ ಬಂದಿದೆ. ಮಹೇಶ್‌ ಜೋಶಿ ಅವರು ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡು ಇನ್ನಷ್ಟು ಗೊಂದಲ ಸೃಷ್ಟಿಸಿದ್ದಾರೆ.

ಅದೇ ಪತ್ರಿಕಾಗೋಷ್ಠಿಯಲ್ಲಿ ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ನಾಲಿಗೆ ಹರಿಬಿಟ್ಟಿದ್ದು, ಥೇಟ್‌ ಗೂಂಡಾ ರೀತಿಯಲ್ಲಿ ವರ್ತಿಸಿದ್ದಾರೆ. “ಡಾ ವಸುಂಧರಾ ಭೂಪತಿ ಮತ್ತು ಜಾಣಗೆರೆ ವೆಂಕಟರಾಮಯ್ಯ ಅವರ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟಿದ್ದು, ಅವರು ಸಭೆಗೆ ಬಂದರೆ ಕತ್ತು ಹಿಡಿದು ಹೊರ ದಬ್ಬುತ್ತೇವೆ” ಎಂದು ಹೇಳಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಕಸಾಪಕ್ಕೆ ಆಡಳಿತಾಧಿಕಾರಿ ನೇಮಕವಾಗಬೇಕು ಎಂಬ ಕೂಗಿಗೆ ಕಾವು ಕೊಟ್ಟಂತಾಗಿದೆ. ಸರ್ಕಾರ ತಕ್ಷಣವೇ ಆಡಳಿತಾಧಿಕಾರಿ ನೇಮಕ ಮಾಡಲಿದೆ ಎಂಬ ಮಾಹಿತಿ ಸಿಕ್ಕಿದೆ.

ಮಂಡ್ಯ ಸಮ್ಮೇಳನದ ಖರ್ಚು ವೆಚ್ಚಗಳ ಸರಿಯಾದ ಲೆಕ್ಕ ನೀಡದಿರುವ ಆರೋಪದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಮೇಲೆ ನೋಟಿಸ್‌ ಕೊಟ್ಟರೂ ಹಾಜರಾಗದ ಮಹೇಶ್‌ ಜೋಶಿ, ಕೋರ್ಟ್‌ಗೆ ಹೋಗಿ ತಡೆ ತರಲು ಯತ್ನಿಸಿ ವಿಫಲರಾಗಿದ್ದಾರೆ. “ನಿಮ್ಮನ್ನು ಅಮಾನತುಗೊಳಿಸಿ ಆಡಳಿತಾಧಿಕಾರಿಯನ್ನು ಯಾಕೆ ನೇಮಕ ಮಾಡಬಾರದು” ಎಂದು ಸಹಕಾರ ಇಲಾಖೆ ನೋಟಿಸ್‌ನಲ್ಲಿ ತಿಳಿಸಿತ್ತು. ಸೆಪ್ಟಂಬರ್‌ 17 ಮತ್ತು 22ಕ್ಕೆ ಎರಡು ಬಾರಿ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದೇ ಕೋರ್ಟಿನಿಂದ ವಿಚಾರಣೆಗೆ ತಡೆ ತರಲು ಯತ್ನಿಸಿದ್ದಾರೆ. ಕೋರ್ಟ್‌ ವಾರ್ಷಿಕ ಸಭೆ ನಡೆಸಲು ಅನುಮತಿ ಕೊಟ್ಟಿದೆ, ಅದರ ಜೊತೆಗೆ ವಿಚಾರಣೆಗೆ ಹಾಜರಾಗಬೇಕು ಎಂದಿದೆ. ಸಭೆಗೆ ಅನುಮತಿ ಸಿಕ್ಕಿದ್ದೇ ತಡ, ತಕ್ಷಣವೇ ಜಮಖಂಡಿಯ ಕಲ್ಲಹಳ್ಳಿ ಎಂಬ ಕುಗ್ರಾಮದಲ್ಲಿ ಸರ್ವ ಸದಸ್ಯರ ಸಭೆ ನಡೆಸುವ ತೀರ್ಮಾನ ಪ್ರಕಟಿಸಿದ್ದಾರೆ.

ಹಿಂದೆ 2025ರ ಏಪ್ರಿಲ್ 27ರಂದು ಸಂಡೂರು ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ವಿಜಯನಗರ ಶ್ರೀಕೃಷ್ಣದೇವರಾಯ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 108ನೇ ವಾರ್ಷಿಕ ಸಾಮಾನ್ಯ ಸಭೆ ಆಯೋಜನೆಗೊಂಡಿತ್ತು. ಕೊನೆಯ ಕ್ಷಣದಲ್ಲಿ, ಹಿರಿಯ ಸದಸ್ಯರ ಭಾರೀ ವಿರೋಧದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ವಸುಂಧರಾ 1

ಈ ಬಗ್ಗೆ ಈದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿರುವ ಡಾ ವಸುಂಧರಾ ಭೂಪತಿ, “ಈ ಬಗ್ಗೆ ಈಗಾಗಲೇ ಕೋರ್ಟ್‌ ಮೆಟ್ಟಿಲೇರಿದ್ದೇವೆ. ಕೋರ್ಟ್‌ ರಜೆ ಇರುವ ಕಾರಣ ಅ. 3ರಂದು ಅರ್ಜಿ ವಿಚಾರಣೆಗೆ ಬರಲಿದೆ. ಕೋರ್ಟಿನಲ್ಲಿ ತೀರ್ಮಾನವಾಗದಿದ್ದರೂ ಸಭೆಗೆ ಹೋಗಿಯೇ ಹೋಗುತ್ತೇವೆ. ಸ್ಥಳೀಯ ಪೊಲೀಸರ ರಕ್ಷಣೆ ಪಡೆಯುತ್ತೇವೆ. ಕತ್ತು ಹಿಡಿದು ಹೊರ ದಬ್ಬುವ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಮಹಿಳಾ ಆಯೋಗಕ್ಕೂ ದೂರು ಕೊಟ್ಟಿದ್ದೇನೆ. ಈ ಮಧ್ಯೆ ಹಾಗೆ ಬೆದರಿಕೆ ಹಾಕಿದ ವ್ಯಕ್ತಿ ಕರೆ ಮಾಡಿ, ತಾನು ಆ ರೀತಿ ಹೇಳಿಲ್ಲ. ಪತ್ರಿಕೆಯವರು ಸುಳ್ಳು ಬರೆದಿದ್ದಾರೆ ಎಂದು ಹೇಳಿದ್ದಾರೆ. ಈ ಮಾತನ್ನು ಪತ್ರಿಕಾಗೋಷ್ಠಿ ಕರೆದು ಅಲ್ಲಿಯೇ ಹೇಳಬೇಕು. ಇಲ್ಲದಿದ್ದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದಿದ್ದೇನೆ. ಕಸಾಪ ಅಧ್ಯಕ್ಷರ ಈ ದಬ್ಬಾಳಿಕೆಗೆ ಕಡಿವಾಣ ಹಾಕಲೇಬೇಕು. ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕಸಾಪಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಒತ್ತಾಯಿಸಲಾಗುವುದು” ಎಂದು ತಿಳಿಸಿದರು.

WhatsApp Image 2025 10 02 at 5.51.59 PM

ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರು ಸಭೆಗೆ ಹೋಗಲು ತಯಾರಿ ನಡೆಸಿರುವುದಾಗಿ ತಿಳಿಸಿದರು. “ಮಂಡ್ಯ, ಶಿವಮೊಗ್ಗ, ಬೆಂಗಳೂರು, ರಾಮನಗರದಿಂದ ಕಸಾಪ ಸದಸ್ಯರು ಸಭೆಗೆ ಹೋಗುತ್ತಿದ್ದೇವೆ. ಯಾವುದಾದರೂ ಜಿಲ್ಲಾ ಕೇಂದ್ರದಲ್ಲಿ ಸರ್ವ ಸದಸ್ಯರ ಸಭೆ ಕರೆಯುವುದು ವಾಡಿಕೆ. ಹೆಚ್ಚು ಸದಸ್ಯರು ಬರಬಾರದು ಎಂಬ ಉದ್ದೇಶದಿಂದ ಈ ಬಾರಿ ಕಲ್ಲಹಳ್ಳಿಯಲ್ಲಿ ಸಭೆ ಆಯೋಜನೆ ಮಾಡಲಾಗಿದೆ. ಕಸಾಪದ ಅಧ್ಯಕ್ಷರ ದುಡಾಡಳಿತದ ವಿರುದ್ಧ ಧ್ವನಿ ಎತ್ತಿದವರ ಸದಸ್ಯತ್ವವನ್ನು ಅಮಾನತಿನಲ್ಲಿಡುವುದು ದುರಹಂಕಾರದ ನಡೆ. ನಾಳೆ(ಅ.3) ಕೋರ್ಟ್‌ ಏನು ಹೇಳುತ್ತದೆ ನೋಡಬೇಕು” ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಮುಂದಿನ ಡಿಸೆಂಬರ್‌ನಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಸಮ್ಮೇಳನದ ಅಧ್ಯಕ್ಷರನ್ನಾಗಿ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮಧ್ಯೆ ಕಸಾಪ ಅಧ್ಯಕ್ಷರ ನೂರೆಂಟು ಎಡವಟ್ಟುಗಳಿಂದಾಗಿ ಕಸಾಪ ಗೊಂದಲದ ಗೂಡಾಗಿದೆ.

ಇನ್ನುಳಿದ ಎರಡು ತಿಂಗಳಲ್ಲಿ ಸಮ್ಮೇಳನ ತಯಾರಿ ಸಾಧ್ಯವೇ ಎಂಬ ಪ್ರಶ್ನೆಗೆ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಉತ್ತರಿಸಿ, “ಈಗಾಗಲೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೂರು ಜಾಗ ಗುರುತಿಸಲಾಗಿದೆ. ಆ ಪೈಕಿ ಒಂದು ಜಾಗ ಅಂತಿಮಗೊಳಿಸಲಾಗುವುದು. ಶೀಘ್ರವೇ ಸ್ವಾಗತ ಸಮಿತಿ ರಚನೆ ಮಾಡಲಾಗುವುದು. ಆದಷ್ಟು ಡಿಸೆoಬರ್‌ನಲ್ಲೆ ಸಮ್ಮೇಳನ ನಡೆಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ” ಎಂದು ʼಈದಿನʼಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ ಲೇಖಕಿಯರ ಸಂಘ | ಪದಾಧಿಕಾರಿಗಳ ರಾಜೀನಾಮೆಗೆ ಕಾರಣವೇನು? ಅಧ್ಯಕ್ಷರು ಏನಂತಾರೆ?

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

Download Eedina App Android / iOS

X