ಪ್ರಾಣೇಶ್‌ v/s ಗಾಯತ್ರಿ ಪ್ರಕರಣ | ಮರುಎಣಿಕೆ ನಡೆದು 7 ತಿಂಗಳು! ಲಕೋಟೆಯಲ್ಲೇ ಇದೆ ಫಲಿತಾಂಶ

Date:

ಚುನಾವಣಾ ಫಲಿತಾಂಶದ ಕುರಿತು ತಕರಾರು ಎತ್ತಿರುವ ಬಹುತೇಕ ಪ್ರಕರಣಗಳು ಕೋರ್ಟ್‌ನಲ್ಲಿ ಇತ್ಯರ್ಥವಾಗುವಾಗ ಅವಧಿಯೇ ಮುಗಿದಿರುತ್ತದೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆದು ನಾಲ್ಕು ವರ್ಷ ಪೂರೈಸಿದೆ. ಮರು ಮತಎಣಿಕೆ ನಡೆದು ಏಳು ತಿಂಗಳು ಸಂದಿದೆ. ಇನ್ನೂ ಫಲಿತಾಂಶ ಘೋಷಣೆ ಆಗಿಲ್ಲ. ಸೌಮ್ಯಾ ರೆಡ್ಡಿ V/S ರಾಮಮೂರ್ತಿ ಪ್ರಕರಣ ಕೂಡಾ ಇನ್ನೂ ಇತ್ಯರ್ಥವಾಗಿಲ್ಲ.

- Advertisement -

ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ವಿರಾಟ್‌ ರೂಪವನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ದೇಶದ ಮುಂದಿಟ್ಟ ನಂತರ ಬಿಹಾರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅಕ್ರಮವನ್ನೂ ಬಯಲಿಗೆಳೆದಿದ್ದಾರೆ. ಹದಿನೈದು ದಿನಗಳ ಕಾಲ ಬಿಹಾರದಲ್ಲಿ ವೋಟ್‌ ಚೋರಿ ಗದ್ದಿ ಚೋಡ್‌ (Vote choti Gaddi chhod) ಸಾರ್ವಜನಿಕ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಬಿಹಾರ ಚುನಾವಣೆಯ ಮೇಲೆ ಇದು ಪ್ರಭಾವ ಬೀರುವ ಲಕ್ಷಣ ನಿಚ್ಚಳವಾಗಿ ಕಾಣಿಸುತ್ತಿದೆ. ಈ ಮಧ್ಯೆ ರಾಹುಲ್‌ ಗಾಂಧಿ ಅವರು ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್‌ ಮತದಾರರನ್ನೇ ಗುರಿಯಾಗಿಸಿ ಯಾರೋ ಕೊಟ್ಟ ಅರ್ಜಿಯನ್ನು ಪರಿಗಣಿಸಿ ಪಟ್ಟಿಯಿಂದ ಡಿಲಿಟ್‌ ಮಾಡಿಸುವ ಚುನಾವಣಾ ಆಯೋಗದ ಕುತಂತ್ರವನ್ನು ಬಹಿರಂಗಗೊಳಿಸಿದ್ದಾರೆ. ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಆರು ಸಾವಿರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲು ನಡೆಸಿದ ಷಡ್ಯಂತ್ರ, ಅದರಲ್ಲಿ ಚುನಾವಣಾ ಆಯೋಗದ ಪಾತ್ರದ ಬಗ್ಗೆ ರಾಹುಲ್‌ ಗಾಂಧಿ ದೇಶದ ಮುಂದೆ ದಾಖಲೆಗಳನ್ನು ಇಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಈ ಮಧ್ಯೆ ಕರ್ನಾಟಕದಲ್ಲಿ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ ವೈ ನಂಜೇಗೌಡರ ಆಯ್ಕೆ ಅಸಿಂಧು ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಒಂದು ತಿಂಗಳಲ್ಲಿ ಮರು ಮತ ಎಣಿಕೆ ನಡೆಸಬೇಕು ಎಂದು ಹೇಳಿದೆ. ಈ ಪ್ರಕರಣವನ್ನು ಕಾಂಗ್ರೆಸ್‌ನ ಮತಗಳ್ಳತನ ಎಂದು ಲಿಂಕ್‌ ಮಾಡಿ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ.

ಚುನಾವಣಾ ಅಕ್ರಮದ ಬಗ್ಗೆ, ತಮ್ಮ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಭ್ಯರ್ಥಿಗಳು ಕೋರ್ಟ್‌ ಮೊರೆ ಹೋಗುವುದು ಸಾಮಾನ್ಯ. ಆದರೆ, ವಿಚಾರಣೆ ನಡೆದು ತೀರ್ಪು ಬರುವಾಗ ಸಾಂವಿಧಾನಿಕ ಸ್ಥಾನದ ಅವಧಿಯೇ ಮುಗಿದಿರುತ್ತದೆ. ಇದಕ್ಕೆ ಅನೇಕ ಪ್ರಕರಣಗಳ ಉದಾಹರಣೆ ಸಿಗುತ್ತದೆ. ಐದು ವರ್ಷದ ಅವಧಿ ಮುಗಿದ ನಂತರ ಅನರ್ಹ ಎಂಬ ತೀರ್ಪು ಬಂದ ಉದಾಹರಣೆಗಳೂ ಇವೆ.

ಕೆ ವೈ ನಂಜೇಗೌಡ v/s ಮಂಜುನಾಥ್‌ ಗೌಡ

ಮಾಲೂರು ಶಾಸಕ ಕೆ ವೈ ನಂಜೇಗೌಡರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದ್ದು, ಮರು ಮತ ಎಣಿಕೆಗೆ ಆದೇಶಿಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಕೆ ವೈ ನಂಜೇಗೌಡ 248 ಮತಗಳ ಅಂತರದಿಂದ ಜಯ ಗಳಿಸಿದ್ದರು. ಈ ಬಗ್ಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ ಎಸ್ ಮಂಜುನಾಥ ಗೌಡ ಅನುಮಾನ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿಯೇ ಮತ ಎಣಿಕೆಯಲ್ಲಿ ಲೋಪವಾಗಿದ್ದು, ಮರುಎಣಿಕೆಗೆ ಆದೇಶ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಎರಡೂ ಕಾಲು ವರ್ಷಗಳ ನಂತರ ಈ ಆದೇಶ ಹೊರಬಿದ್ದಿದೆ. ಅಷ್ಟೇ ಅಲ್ಲ ಶಾಸಕ ಸ್ಥಾನ ಅಸಿಂಧುಗೊಳಿಸುವ ಆದೇಶಕ್ಕೆ ಮುವ್ವತ್ತು ದಿನಗಳ ತಡೆ ನೀಡಿದೆ. ಈ ಅವಧಿಯಲ್ಲಿ ನಂಜೇಗೌಡರು ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

malur mla
ಮಾಲೂರು ಶಾಸಕ ಕೆ.ವೈ. ನಂಜೇಗೌಡ

ಮತ ಎಣಿಕೆಯ ವೇಳೆ 70 ಸಿ ಫಾರಂಗಳಿಗೆ ನಮ್ಮ ಏಜೆಂಟರ ಸಹಿಯನ್ನು ಪಡೆದುಕೊಂಡಿಲ್ಲ. 206 ಮತಗಳನ್ನು ಅಸಿಂಧುಗೊಳಿಸಲು ಕಾರಣವೇನು ಎನ್ನುವುದನ್ನು ತಿಳಿಸಿಲ್ಲ. ಮತ ಎಣಿಕೆಯ ವಿಡಿಯೋ ಇರುವ ಹಾರ್ಡ್‌ಡಿಸ್ಕ್‌ ನೀಡುತ್ತಿಲ್ಲ. ಮರು ಎಣಿಕೆಗೆ ಮನವಿ ಮಾಡಿದರೂ ಚುನಾವಣಾಧಿಕಾರಿಗಳು ಎಣಿಕೆ ಮಾಡಿರಲಿಲ್ಲ. ಈ ಕಾರಣದಿಂದಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ನಮಗೆ ಜಯವಾಗಿದೆ ಎಂದು ಮಂಜುನಾಥ ಗೌಡ ಹೇಳಿದ್ದಾರೆ.

ಮಂಜುನಾಥ ಗೌಡರ ಪ್ರಕರಣವೇನೋ ಎರಡು ವರ್ಷಗಳಲ್ಲಿ ಮರು ಎಣಿಕೆಗೆ ಆದೇಶವಾಗಿದೆ. ಆದರೆ, ಇದೇ ತರಹದ ಕೆಲವು ಪ್ರಕರಣಗಳು ಅವಧಿ ಮುಗಿದರೂ ತೀರ್ಮಾನವೇ ಆಗದಿರುವ ಉದಾಹರಣೆಯಿದೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಬಿಜೆಪಿಯ ಪ್ರಾಣೇಶ್‌ ಅವರ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್‌ ಮೆಟ್ಟಿಲೇರಿ ನಾಲ್ಕು ವರ್ಷ ಸಂದಿದೆ.

ಪ್ರಾಣೇಶ್‌ v/s ಗಾಯತ್ರಿ ಶಾಂತೇಗೌಡ ಪ್ರಕರಣ

ಕರ್ನಾಟಕದಲ್ಲಿ 2021ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಉಪಸಭಾಪತಿ ಪ್ರಾಣೇಶ್, ಕಾಂಗ್ರೆಸ್ಸಿನಿಂದ ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿದ್ದರು. 6 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದರು. ನಾಮನಿರ್ದೇಶಿತ 12 ಮತಗಳ ಎಣಿಕೆ ಮಾಡಬಾರದೆಂದು ಪರಾಜಿತ ಅಭ್ಯರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ನಾಮನಿರ್ದೇಶಿತರ ಮತಗಳನ್ನ ಬಿಟ್ಟು ಎಣಿಕೆ ಮಾಡುವಂತೆ ಸೂಚಿಸಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ 2021ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಮರು ಮತಎಣಿಕೆ ಕಾರ್ಯ 2025ರ ಫೆಬ್ರುವರಿ 28ರಂದು ನಡೆದಿತ್ತು. ಫಲಿತಾಂಶ ಏನು ಎಂಬುದು ಬಹಿರಂಗಗೊಂಡಿಲ್ಲ. ಸುಪ್ರೀಂ ಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ. ಅದಾಗಿ ಏಳು ತಿಂಗಳುಗಳು ಕಳೆದಿವೆ. ಇದುವರೆಗೂ ಫಲಿತಾಂಶ ಪ್ರಕಟಿಸಲಿಲ್ಲ ಎಂಬುದು ನಿಜಕ್ಕೂ ನಿರಾಶಾದಾಯಕ. ಅಷ್ಟೇ ಅಲ್ಲ ಪ್ರಾಣೇಶ್‌ ಅವರ ಶಾಸಕತ್ವವನ್ನು ಅಮಾನತಿನಲ್ಲಿಟ್ಟಿಲ್ಲ. ಈಗಲೂ ವಿಧಾನ ಪರಿಷತ್ತಿನ ಉಪ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಬಗ್ಗೆ ಈ ದಿನ.ಕಾಂಗೆ ಪ್ರತಿಕ್ರಿಯೆ ನೀಡಿದ ಗಾಯತ್ರಿ ಶಾಂತೇಗೌಡ, “ಮರು ಮತ ಎಣಿಕೆ ನಡೆಸಿ ಜಿಲ್ಲಾಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ತೆರೆದಿದೆ. ಅಕ್ಟೋಬರ್‌ 28ರಂದು ಫಲಿತಾಂಶ ಪ್ರಕಟಿಸುವುದಾಗಿ ಕೋರ್ಟ್‌ ಹೇಳಿದೆ. ಫಲಿತಾಂಶ ನನ್ನ ಪರವಾಗಿ ಬರುವ ನಿರೀಕ್ಷೆಯಲ್ಲಿದ್ದೇನೆ. ಕೋರ್ಟ್‌ಗಳು ಒಂದೊಂದು ಪ್ರಕರಣದಲ್ಲಿ ಒಂದೊಂದು ಬಗೆಯಾಗಿ ವರ್ತಿಸುತ್ತಿವೆ. ನಂಜೇಗೌಡ v/s ಮಂಜುನಾಥ್‌ ಗೌಡ ಪ್ರಕರಣದಲ್ಲಿ ಎರಡೇ ವರ್ಷದಲ್ಲಿ ಮರು ಎಣಿಕೆಗೆ ಆದೇಶ ಬಂದಿದೆ. ಅಷ್ಟೇ ಅಲ್ಲ ವಿಜೇತ ಅಭ್ಯರ್ಥಿಯನ್ನು ಅನರ್ಹಗೊಳಿಸಲಾಗಿದೆ. ನನ್ನ ಪ್ರಕರಣದಲ್ಲಿ ಮರು ಎಣಿಕೆ ನಡೆದು ಭರ್ತಿ ಎಂಟು ತಿಂಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ” ಎಂದು ತಿಳಿಸಿದರು.

ಸೌಮ್ಯಾ ರೆಡ್ಡಿ V/S ರಾಮಮೂರ್ತಿ ಪ್ರಕರಣ

2023ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬೆಂಗಳೂರು ಜಯನಗರ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿ ಕೇವಲ 16 ಮತಗಳ ಅಂತರದಿಂದ ಬಿಜೆಪಿಯ ರಾಮಮೂರ್ತಿ ವಿರುದ್ಧ ಸೋತಿದ್ದರು. ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಸೌಮ್ಯಾ ರೆಡ್ಡಿ ಆರೋಪಿಸಿದ್ದರು. ರಾಮಮೂರ್ತಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

“ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆಯಲ್ಲಿ ನಾನು ಮುನ್ನಡೆ ಸಾಧಿಸಿದ್ದೆ. ಆದರೆ ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ. ಒಟ್ಟು 827 ಅಂಚೆ ಮತಗಳಲ್ಲಿ ವ್ಯತ್ಯಾಸವಾಗಿದ್ದು, ಪ್ರತಿ ಬಾರಿ ಮರು ಎಣಿಕೆ ಮಾಡಿದಾಗಲೂ ಪ್ರತ್ಯೇಕ ಅಂಕಿ-ಅಂಶ ಬಂದಿದೆ. ಮತ ಎಣಿಕೆ ಆರಂಭವಾದ ನಂತರವೂ ಅಂಚೆ ಮೂಲಕ ಬಂದಿದ್ದ ಮತ ಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ” ಎಂದು ಸೌಮ್ಯಾರೆಡ್ಡಿ ಆರೋಪಿಸಿದ್ದರು.

soumya reddy 1

ಅವರ ಅರ್ಜಿಯನ್ನು ಆಲಿಸಿದ್ದ ಹೈಕೋರ್ಟ್‌, ಡಿವಿಡಿ ಸೇರಿದಂತೆ 10 ಪ್ರಮುಖ ದಾಖಲೆಗಳನ್ನು ಹಾಜರುಪಡಿಸಲು 2024 ಫೆ.14ರಂದು ಅನುಮತಿ ನೀಡಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ರಾಮಮೂರ್ತಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, “ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ” ಎಂದು ಹೇಳಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸೌಮ್ಯಾ ರೆಡ್ಡಿ “ಸುಪ್ರೀಂ ಕೋರ್ಟ್‌ನಲ್ಲಿ ರಾಮಮೂರ್ತಿ ಅವರು ಅರ್ಜಿ ಸಲ್ಲಿಸಿದ ನಂತರ ಆರು ತಿಂಗಳು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿರಲಿಲ್ಲ. ಈಗ ಪ್ರತಿ ವಾರದಂತೆ ವಿಚಾರಣೆ ನಡೆಯುತ್ತಿದೆ. ಈ ವರ್ಷದಲ್ಲಿ ಪ್ರಕರಣ ಮುಗಿಸುವುದಾಗಿ ಜಡ್ಜ್‌ ಹೇಳಿದ್ದಾರೆ. ಈಗಾಗಲೇ ಎರಡೂಕಾಲು ವರ್ಷ ಮುಗಿದು ಹೋಗಿದೆ. ಇಂತಹ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗದಿದ್ದರೆ ಅರ್ಥವಿಲ್ಲ” ಎಂದು ಹೇಳಿದರು.
***
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗೆ ತನ್ನ ಫಲಿತಾಂಶದ ಬಗ್ಗೆ ಅನುಮಾನವಿದ್ದಲ್ಲಿ ಇಂತಿಷ್ಟು ದಿನಗಳ ಒಳಗಾಗಿ ಮರು ಎಣಿಕೆ ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂಬ ನಿಯಮವಿದೆ. ಆದರೆ, ಪ್ರಕರಣದ ಇತ್ಯರ್ಥ ಕೂಡಾ ನಿಗದಿತ ಸಮಯದೊಳಗೆ ಆದರೆ, ಅನ್ಯಾಯವಾಗಿ ಸೋತವರಿಗೆ ನ್ಯಾಯ ಕೊಟ್ಟಂತಾಗುತ್ತದೆ. ಚುನಾವಣಾ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದಂತಾಗುತ್ತದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ ಕುಸಿಯುತ್ತಿರುವ ವಿಶ್ವಾಸಾರ್ಹತೆ

ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ...

ಸ್ಟಿಂಗ್ ಆಪರೇಷನ್ | ಭ್ರಷ್ಟಾಚಾರ ಬಯಲಿಗೆಳೆಯುವ ಸಾಧನವಾಗಬೇಕೇ ವಿನಾ ರಾಜಕೀಯ ಒತ್ತಡ, ಬ್ಲ್ಯಾಕ್‌ಮೇಲ್‌ನ ಆಯುಧವಾಗಬಾರದು

ಆಡಳಿತ ಪಕ್ಷವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಕರ್ತವ್ಯ. ಆದರೆ, ವಿರೋಧ ಪಕ್ಷಗಳಿಗೂ...

ಬೇಡ್ತಿ ನದಿ ತಿರುವು ಯೋಜನೆಯೂ, ಬೊಮ್ಮಾಯಿ-ಕಾಗೇರಿ ಪೀಕಲಾಟವೂ

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆಯೇ ಬೇಡ್ತಿ-ವರದಾ ಮತ್ತು...