ಮಣಿಪುರದಲ್ಲಿ ಕುಕ್ಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಇಡೀ ಸಮಾಜವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಇದನ್ನು ತಡೆಯುವಲ್ಲಿ ಬಿಜೆಪಿ ನೇತೃತ್ವದ ಮಣಿಪುರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದಸಂಸ ಪ್ರತಿಭಟನಾಕಾರರು ವಿಜಯನಗರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಮಾತನಾಡಿದರು. “ಕಳೆದ 3 ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೆ ಘರ್ಷಣೆ ನಡೆದಿದ್ದು, ಮೂವರ ಹತ್ಯೆ ನಡೆದಿದೆ. ತಮ್ಮ ನಿವಾಸದಲ್ಲಿ ಮಲಗಿದ್ದ ಮೂವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಬಳಿಕ ಮಾರಕಾಸ್ತ್ರದಿಂದ ಕೊಚ್ಚಿ, ಕ್ರೂರವಾಗಿ ಹತ್ಯೆ ಮಾಡಿರುವುದು ತಿಳಿದುಬಂದಿದೆ” ಎಂದರು.
“ಪೊಲೀಸರು ಮತ್ತು ದುಷ್ಕರ್ಮಿಗಳು ಒಟ್ಟಾಗಿ ಸೇರಿಯೇ ಈ ದುಷ್ಕೃತ್ಯ ಎಸಗಿದ್ದಾರೆ. ರಕ್ಷಣೆ ಕೇಳಿದ ಮಹಿಳೆಯರನ್ನು ಪೊಲೀಸರೇ ಪುಂಡರ ಗುಂಪಿಗೆ ಒಪ್ಪಿಸಿರುವುದು ಇದಕ್ಕೆ ಸಾಕ್ಷಿ. ಮಣಿಪುರ ಪೊಲೀಸರ ತನಿಖೆಯ ಮೇಲೆ ನಮಗೆ ವಿಶ್ವಾಸವಿಲ್ಲ. ಭದ್ರತೆ ದೃಷ್ಟಿಯಿಂದ ಹತ್ತಿರದ ನ್ಯಾಯಾಲಯಗಳಿಗೆ ದಾಖಲಿಸಲು ಅವಕಾಶ ಕಲ್ಪಿಸಬೇಕು” ಎಂದು ಮನವಿ ಮಾಡಿದರು.
“ಸಂತ್ರಸ್ತೆಯರು ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಭಯಬೀತರಾಗಿದ್ದಾರೆ. ಸಿಬಿಐ ಮುಂದೆ ಸತ್ಯ ಹೇಳುತ್ತಾರೆಂಬ ವಿಶ್ವಾಸವಿಲ್ಲ. ಹಾಗಾಗಿ ಮಹಿಳೆಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು ಆಗಷ್ಟೆ ಅವರು ಸತ್ಯ ಹಂಚಿಕೊಳ್ಳಲು ಸಾಧ್ಯ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪೋಷಕರಿಲ್ಲದ ಪ್ರತಿಭಾವಂತೆ ಶಿಕ್ಷಣಕ್ಕೆ ದಾನಿಗಳಿಂದ ₹2.35 ಲಕ್ಷ ಆರ್ಥಿಕ ನೆರವು
ಡಿಜಿಪಿ ದರ್ಜೆಯ ಪೊಲೀಸ್ ಅಧಿಕಾರಿ ನೇತೃತ್ವದ ವಿಶೇಷ ತಂಡದ ಮೂಲಕ ತನಿಖೆ ನಡೆಸಬೇಕು. ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು. ಸೂಕ್ತ ನ್ಯಾಯ ದೊರೆಯಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮರಿಸ್ವಾಮಿ ಕೊಟ್ಟರು, ಎಚ್ ಸೋಮಶೇಖರ್, ಲಕ್ಷ್ಮಣ, ವೈ ಶೇಖರ, ನಾಗಪ್ಪ, ದುರುಗೇಶ್ ಕೂಡ್ಲಿಗಿ, ಅನಿಲ್ ಹುಲಿಕುಂಟೆ ಸೇರಿದಂತೆ ಬಹುತೇಕ ಮುಖಂಡರು, ಕಾರ್ಯಕರ್ತರು ಇದ್ದರು.