ವಚನಯಾನ | ಶೈವ-ವೀರಶೈವಗಳನ್ನು ನಿರಾಕರಿಸಿದ ಶರಣರು

Date:

Advertisements

ವಿಷ್ಣುವಿಗೆ ಕಂಕಾಳವನಿಕ್ಕಿ ಸಮುದ್ರ ಮಂಥನದಲ್ಲಿ ವಿಷ ಎದ್ದು ಬಂದಾಗ ಅದನ್ನು ಕುಡಿದು ನೀಲಕಂಠನೆಂದು ಪ್ರಸಿದ್ಧನಾದ ಪುರಾಣದ ಶಿವನೆಂಬ ಗಣೇಶ್ವರನ ಕುರಿತು ಅಲ್ಲಮರು ಪ್ರಸ್ತಾಪಿಸಿದ್ದಾರೆ. ಹೀಗೆ ಶಿವನ್ನನ್ನೂ ಒಳಗೊಂಡಂತೆ ಆತನ ಅಸಂಖ್ಯಾತ ಗಣಗಳು ಗುಹೇಶ್ವರನೆಂಬ ಸೃಷ್ಟಿ ಚೈತನ್ಯ ಶಕ್ತಿಯ ಅಂಶವನ್ನು ಹೊಂದಿರುವವರು ಎಂದು ಅಲ್ಲಮರು ತಮ್ಮ ವಚನವನ್ನು ಮುಗಿಸುತ್ತಾರೆ. ಇಡೀ ವಚನದಲ್ಲಿ ವೈದಿಕರು ಸೃಷ್ಟಿಸಿರುವ ಶಿವ ಹಾಗು ಪುರಾಣಗಳಲ್ಲಿ ವರ್ಣಿಸಲಾಗಿರುವ ಪುರಾಣದ ಕಾಲ್ಪನಿಕ ಶಿವನನ್ನು ಅಲ್ಲಮರು ನಗಣ್ಯಗೊಳಿಸುತ್ತಾರೆ.

ಲಿಂಗಾಯತ ದರ್ಶನವು ಪ್ರಾಚೀನ ಶೈವ ಹಾಗೂ ಇತ್ತೀಚಿನ ವೀರಶೈವ ಮುಂತಾದ ಶೈವ ಪ್ರಭೇದಗಳಿಗೆ ಹೊರತಾದ ಅವೈದಿಕ ದರ್ಶನವಾಗಿದೆ. 15-16 ನೇ ಶತಮಾನದಲ್ಲಿ ಆಂಧ್ರದಿಂದ ಲಿಂಗಾಯತಕ್ಕೆ ವಲಸೆ ಬಂದ ಆರಾಧ್ಯ ಬ್ರಾಹ್ಮಣರು ನಂತರ ಲಿಂಗಾಯತ ಧರ್ಮದೊಳಗೆ ವೀರಶೈವವೆಂಬ ಒಂದು ಉಪವರ್ಗವನ್ನು ಹುಟ್ಟುಹಾಕಿದರು. ನಾಗಾರ್ಜುನನೆಂಬ ಬ್ರಾಹ್ಮಣ ಬೌದ್ಧ ಧರ್ಮದಲ್ಲಿ ಸೇರಿ ಮಹಾಯಾನ ಪಂಥ ಹುಟ್ಟುಹಾಕಿ ಬುದ್ಧನ ವಿಗ್ರಹ ಆರಾಧನೆ ಆರಂಭಿಸಿದಂತೆ, ಈ ವೀರಶೈವ ಆರಾಧ್ಯರು ಲಿಂಗಾಯತ ಧರ್ಮದೊಳಗೆ ಶರಣರ ಸಿದ್ಧಾಂತಗಳಿಗೆ ವಿರುದ್ಧವಾಗಿರುವ ಆಚರಣೆಗಳನ್ನು ಸೇರಿಸಿ ಲಿಂಗಾಯತಮನ್ನು ಮಲೀನಗೊಳಿಸಿದರು. ಲಿಂಗಾಯತ ದರ್ಶನದ ಮೂಲ ಆಶಯಗಳನ್ನು ನಾಶಮಾಡಲೆಂದೆ ವೀರಶೈವ ಆರಾಧ್ಯ ಬ್ರಾಹ್ಮಣರು ಲಿಂಗಾಯತ ಧರ್ಮವನ್ನು ಪ್ರವೇಶಿಸಿದಂತೆ ಕಾಣುತ್ತದೆ. ಇಂದು ಈ ವೀರಶೈವರು ಲಿಂಗಾಯತ ಮತ್ತು ವೀರಶೈವ ಎರಡೂ ಒಂದೆ ಎನ್ನುವ ವಿತಂಡವಾದವನ್ನು ಮಾಡುತ್ತಿದ್ದಾರೆ. ವಿಜಯನಗರದ ಅರಸ ಪ್ರೌಢದೇವರಾಯನ ಆಳ್ವಿಕೆಯಲ್ಲಿ ನಡೆದ ವಚನಗಳ ಸಂಪಾದನೆಯ ನೆಪದಲ್ಲಿ ಈ ಆರಾಧ್ಯರು ಮಾಡಿದ ಕರಸೇವೆಯಿಂದ ವಚನಗಳ ಒಳಗೆ ಸಂಸ್ಕೃತ ಶ್ಲೋಕಗಳು ಹಾಗು ವೀರಶೈವ ಪದ ಒಳನುಸುಳಿದವು. ಶರಣರು ಸ್ಪಷ್ಟವಾಗಿ ಎಲ್ಲಾ ಬಗೆಯ ಶೈವ ಪ್ರಭೇದಗಳನ್ನು ನಿರಾಕರಿಸಿದರೂ ಶೂನ್ಯ ಸಂಪಾದನಾಕಾರರು ವಚನಗಳೊಂದಿಗೆ ಶೈವವನ್ನು ಸಂಕರಗೊಳಿಸಿದರು.

ಹೀಗೆ ಲಿಂಗಾಯತವೆಂಬ ಶುದ್ಧ ಅವೈದಿಕ ದರ್ಶನವೊಂದು ಆಗಮಿಕ ಶೈವರ ಕರಸೇವೆಯಿಂದ ಶೈವೀಕರಣ ಹಾಗು ವೈದಿಕೀರಣಗೊಂಡು ಅಶುದ್ಧಗೊಂಡಿತು. ಆಗಮಿಕ ಶೈವರು ಬಹುತೇಕ ವೈದಿಕರೇ ಆಗಿರುವಾಗ ವೈದಿಕ ಧರ್ಮವನ್ನು ವಿರೋಧಿಸಿ, ಮತ್ತು ಅದನ್ನು ತ್ಯಜಿಸಿ ಆಗಮಿಕ ಶೈವವನ್ನು ಬಸವಣ್ಣನವರಾಗಲಿ, ಉಳಿದ ಶರಣರಾಗಲಿ ಸೇರಿದರು ಎನ್ನುವ ವಾದವೇ ಅತ್ಯಂತ ಬಾಲೀಶ ಹಾಗು ಕೃತಕವಾದದ್ದು. ಶೈವ ಧರ್ಮದ ಪುರಾಣದ ಶಿವನನ್ನು ಶರಣರು ಆರಾಧಿಸುವುದಿಲ್ಲ. ಶರಣರ ಶಿವ ನಿರಾಕಾರ, ನಿರ್ಗುಣನಾದ ಸೃಷ್ಟಿಯ ಚೈತನ್ಯ ಶಕ್ತಿ. ಅದನ್ನು ಶರಣರು ತಾವು ಬರೆದ ವಚನಗಳ ಅಂಕಿತದಲ್ಲಿ ತಮ್ಮ ಪೂರ್ವಾಶ್ರಮದ ಇಷ್ಟ ದೇವರ ಹೆಸರಿನಿಂದ ಕರೆದಿದ್ದಾರೆ. ಶರಣರ ವಚನಗಳ ಅಂಕಿತ ಸ್ಥಾವರಲಿಂಗಗಳನ್ನು ಪ್ರತಿನಿಧಿಸುವುದರಿಂದ ಶರಣರು ಸ್ಥಾವರ ಆರಾಧಕರೆಂದು ವಾದಿಸುವ ಮೂರ್ಖ ಶಿಖಾಮಣಿಗಳೂ ನಮ್ಮ ನಡುವೆ ಇದ್ದಾರೆ. ಇದು ಈ ಮೂರ್ಖರು ಶರಣರ ವಚನಗಳನ್ನು ಸರಿಯಾಗಿ ಓದದ ಕಾರಣದಿಂದ ಉಂಟಾದ ಅಜ್ಞಾನದ ಪರಿಣಾಮದಿಂದ ಈ ಬಗೆಯ ವಾದಗಳು ಹುಟ್ಟಿಕೊಳ್ಳುತ್ತವೆ. ಶೈವರ ಎಲ್ಲಾ ಪ್ರಭೇದಗಳನ್ನು ಶರಣರು ನಿರಾಕರಿಸಿದ್ದಾರೆ. ಒಟ್ಟಾರೆ ಶಿವ ಎನ್ನುವ ಪುರಾಣದ ವ್ಯಕ್ತಿಯನ್ನು ಶರಣರು ಒಪ್ಪುವುದಿಲ್ಲ. ಶಿವ ಎನ್ನುವ ಶಬ್ದಕ್ಕೆ ಮಂಗಳಕರ ಎನ್ನುವ ಅರ್ಥವೂ ಇದೆ. ಹಾಗಾಗಿ, ಶರಣರು ಶಿವ ಶಬ್ದವನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಬಳಸಿದ್ದಾರೆ. ಶರಣರ ಶಿವನಿಗು, ಪುರಾಣದ ಆಗಮಿಕರ ಹಾಗೂ ವೈದಿಕರ ಶಿವನಿಗೂ ಯಾವುದೆ ಸಾಮ್ಯ ಅಥವಾ ಸಂಬಂಧವಿಲ್ಲ.

ಆರ್ಯ ಬ್ರಾಹ್ಮಣ ಧರ್ಮದ ನಿಜವಾದ ದೇವರು ಯಾರು ಎನ್ನುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಿಗುವುದಿಲ್ಲ. ಹೊಟ್ಟೆಪಾಡಿಗೆ ಬ್ರಾಹ್ಮಣರು ಮಸೀದಿಯೊಳಗಿನ ದೇವರನ್ನು ಸಹ ಆರಾಧಿಸಬಲ್ಲರು, ಆದರೆ ಅವರು ಕೌಟುಂಬಿಕವಾಗಿ, ವ್ಯಕ್ತಿಗತವಾಗಿ ಪೂಜಿಸುವ ಏಕೈಕ ದೇವರು ವಿಷ್ಣು ಮಾತ್ರ. ವೇದ ಪೂರ್ವದಲ್ಲಿ ಆರ್ಯ ಬ್ರಾಹ್ಮಣರು ವಿಷ್ಣುವನ್ನು ಇನ್ನೂ ಕಂಡು ಹಿಡಿದಿರಲಿಲ್ಲ. ಆಗ ಅವರು ಪೂಜಿಸುತ್ತಿದ್ದದ್ದು ಇಂದ್ರ, ವರುಣ, ಮಿತ್ರ, ರುದ್ರ ಹಾಗು ಅಶ್ವಿನಿ ದೇವತೆಗಳನ್ನು ಮಾತ್ರ. ಆನಂತರ ರಷ್ಯಾದ ಸ್ಲಾವಿಕ್ ಆರ್ಯನ್ನರ ವೇದಗಳನ್ನು ನಕಲು ಮಾಡುವಾಗ ಸ್ಲಾವ್ ದೇವತೆಗಳಾದ ವಿಷನ್ ವಿಷ್ಣುವಾಗಿ, ರೋಧ್ ರುದ್ರನಾಗಿ ಬ್ರಾಹ್ಮಣರ ದೇವತೆಗಳ ಪಟ್ಟಿಗೆ ಸೇರಿಕೊಳ್ಳುತ್ತಾರೆ. ಈಗ ಆ ಪಟ್ಟಿಯಲ್ಲಿ 33 ಕೋಟಿ ದೇವತೆಗಳು ಸೇರಿದರೂ ಇನ್ನೂ ಹೊಸ ಹೊಸ ದೇವತೆಗಳ ಹೆಸರು ಹೆಚ್ಚುವರಿ ಪಟ್ಟಿಯಲ್ಲಿ ಸೇರುತ್ತಲೇ ಇವೆ. ಕಾರಣ, ದೇವತೆಗಳ ಸಂಖ್ಯೆ ಎಷ್ಟು ಬೆಳೆಯುತ್ತದೋ ಬ್ರಾಹ್ಮಣರ ಉಪಜೀವನದ ಅವಕಾಶಗಳು ಹೆಚ್ಚುತ್ತಿವೆ, ಭಾರತೀಯರ ಮೌಢ್ಯ ಬಹುಗುಣಗೊಳ್ಳುತ್ತಾ ಹೋದಷ್ಟು ಬ್ರಾಹ್ಮಣರ ಬದುಕು ಸುರಕ್ಷಿತಗೊಳ್ಳುತ್ತದೆ. ಈ ರೋಧ್ ಎನ್ನುವ ರಷ್ಯಾದ ಸ್ಲಾವಿಕ್ ಆರ್ಯನ್ನರ ದೇವತೆಯನ್ನು ಭಾರತೀಯ ಆರ್ಯನ್ನರು ತಮ್ಮ ದೆವರುಗಳ ಪಟ್ಟಿ ಸೇರಿಸಿಕೊಂಡ ಮೇಲೆ, ಇಲ್ಲಿನ ನೆಲಮೂಲದ ಶಿವನೊಡನೆ ರುದ್ರನನ್ನು ಸಮೀಕರಿಸಿದ್ದಾರೆ. ಬ್ರಹ್ಮ, ವಿಷ್ಣುರ ಜೊತೆಗೆ ಶಿವ ಅಥವಾ ರುದ್ರನನ್ನು ಜೋಡಿಸಿ ತ್ರಿಮೂರ್ತಿ ಎನ್ನುವ ಮಿಶ್ರ ದೇವತಾ ಪ್ರಭೇದವನ್ನು ಸಹ ಹುಟ್ಟುಹಾಕಿದ್ದಾರೆ.

shaiva

ವೇದಗಳಲ್ಲಿ ರುದ್ರನ ಹೆಸರು ಪ್ರಸ್ತಾಪವಾಗುತ್ತದೆ. ಗಾಳಿ, ಬಿರುಗಾಳಿ, ಮತ್ತು ರಣಬೇಟೆಗೆ ಸಂಬಂಧಿಸಿದ ದೇವತೆಯಾಗಿ ರುದ್ರನು ಋಗ್ವೇದದಲ್ಲಿ ಗುರುತಿಸಿಕೊಂಡಿದ್ದಾನೆ. ಈ ರುದ್ರ ಹೆಸರಿನ ಅರ್ಥವು “ಗರ್ಜಿಸುವವನು” ಎಂದಾಗುತ್ತದೆ. ಋಗ್ವೇದದಲ್ಲಿ ರುದ್ರನನ್ನು “ಪ್ರಬಲರಲ್ಲಿ ಅತ್ಯಂತ ಪ್ರಬಲ” ಎಂದು ಹೊಗಳಲಾಗಿದೆ. ಅಂದರೆ, ರುದ್ರನು ಹಿಂದೂ ಬ್ರಾಹ್ಮಣ ಧರ್ಮದ ಒಬ್ಬ ಪ್ರಾಚೀನ ದೇವತೆಯಾಗಿದ್ದಾನೆ. ಸಾಮಾನ್ಯ ಗುಣಲಕ್ಷಣಗಳ ಪ್ರಕಾರ ರುದ್ರನನ್ನು ಬಿರುಗಾಳಿಗೆ, ಗರ್ಜನೆ, ಮತ್ತು ಯುದ್ಧಕ್ಕೆ ಸಂಬಂಧಿಸಿದವನು ಎಂದು ವರ್ಣಿಸಲಾಗಿದೆ. “ರುದ್ರ” ಎಂದರೆ “ಗರ್ಜಿಸುವವ” ಅಥವಾ “ಕಣ್ಣೀರು ತರಿಸುವವನು” ಎಂದರ್ಥ. ಋಗ್ವೇದದಲ್ಲಿ, ರುದ್ರನಿಗೆ ಪ್ರಬಲ ಮತ್ತು ಗಂಭೀರ ದೇವತೆಯಾಗಿ ಗೌರವ ಸಲ್ಲಿಸಲಾಗುತ್ತದೆ. ರುದ್ರನನ್ನು ವೈದಿಕ ಶೈವ ಸಂಪ್ರದಾಯದಲ್ಲಿ ಶಿವನ ಮತ್ತೊಂದು ರೂಪವಾಗಿ ಪರಿಗಣಿಸಲಾಗಿದೆ. ರುದ್ರನನ್ನು ಶಿವನೊಡನೆ ಹೋಲಿಸುವ ಕಾರ್ಯಗಳು ವೇದೋತ್ತರ ಕಾಲದಲ್ಲಿ ನಡೆದಿವೆ. ದ್ರಾವಿಡ ಶೈವ ಧರ್ಮದ ಸ್ವತಂತ್ರ ಅಸ್ತಿತ್ವ ಮತ್ತು ಶಿವ ಪಾರಮ್ಯವನ್ನು ಗೌಣಗೊಳಿಸಲು ಆರ್ಯ ವೈದಿಕರು ದ್ರಾವಿಡ ಶಿವನನ್ನು ಋಗ್ವೇದದ ರುದ್ರನಿಗೆ ಸಮೀಕರಿಸಿ ಆತನನ್ನು ತ್ರೀ ಮೂರ್ತಿಗಳ ಭಾಗವಾಗಿಸಿದ್ದಾರೆ. ಇದು ಆರ್ಯರ ಪರಂಪರಾಗತ ಕರಸೇವೆಯ ಒಂದು ಮಾದರಿಯಾಗಿದೆ. ಆದರೆ, ಬಸವಾದಿ ಶರಣರು ರುದ್ರ ಅಥವಾ ಶಿವ ಇಬ್ಬರನ್ನೂ ಒಪ್ಪಿಕೊಳ್ಳುವುದಿಲ್ಲ. ಅಲ್ಲಮಪ್ರಭುಗಳು ತಮ್ಮ ಈ ಕೆಳಗಿನ ವಚನದಲ್ಲಿ ಬಹಳ ಸ್ಪಷ್ಟವಾಗಿ ಶೈವ ಪ್ರಭೇದಗಳು ಹಾಗು ಅವುಗಳ ಅಧಿಪತಿ ಶಿವನನ್ನು ನೇರಾನೇರವಾಗಿ ನಿರಾಕರಿಸಿದ್ದಾರೆ:

“ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು.
ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು.
ಪೃಥ್ವಿಯೆ ಪೀಠ ಆಕಾಶವೆ ಲಿಂಗ ಅಂತಹ ಆತನೊಬ್ಬ ಗಣೇಶ್ವರನು. ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಭಿಕ್ಷವ ಬೇಡಿದಾತನೊಬ್ಬ ಗಣೇಶ್ವರನು. ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ ನೀಲಕಂಠನೆಂಬಾತನೊಬ್ಬ ಗಣೇಶ್ವರನು.
ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು”

ಭಾವಾರ್ಥ

“ಶಿವ ಗಣೇಶ್ವರರು” ಎಂದರೆ ಕೈಲಾಸದಲ್ಲಿರುವ ಶಿವನ ಗಣಗಳ ಸಮೂಹ, ಇದರಲ್ಲಿ ಗಣೇಶನೂ ಸೇರುತ್ತಾನೆ. ಶಿವನು ತನ್ನ ಗಣಗಳೊಂದಿಗೆ “ಶಿವ ಗಣೇಶ್ವರರು” ಎಂದು ಕರೆಯಲ್ಪಡುತ್ತಾನೆ, ಗಣೇಶನು ಆ ಗುಣಗಳ ನಾಯಕ ಅಥವಾ ಮುಖ್ಯಸ್ಥ. ಶಿವ ಗಣೇಶ್ವರರು ಎಂದರೆ ಶಿವನ ಪ್ರಮುಖ ಅನುಚರರು ಮತ್ತು ದೇವತೆಗಳ ಸಮೂಹ. ಇವರನ್ನು ಶಿವಗಣಂಗಳು ಎಂದೂ ಸಹ ಕರೆಯುತ್ತಾರೆ. ಈ ಗಣಗಳು ಶಿವನ ರಕ್ಷಣಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತವೆ. ಇವರಲ್ಲಿ ಗಣೇಶ ಪ್ರಮುಖ ಗಣನಾಯಕ. ಉಳಿದ ಶಿಗಣರು ಎಂದರೆ ನಂದಿ, ವೀರಭದ್ರ, ಭೈರವ, ಮಣಿಭದ್ರ, ಚಂಡೀಸ್, ಶೃಂಗಿ, ಭೃಂಗಿ, ಭೃಗಿರಿತಿ, ಶೈಲ್, ಗೋಕರ್ಣ ಮತ್ತು ಘಂಟಾಕರ್ಣ ಮುಂತಾದವರು. ಇವರೆಲ್ಲರು ಶಿವನ ಸೇವಕರು ಮತ್ತು ರಕ್ಷಕರು. ಅಲ್ಲಮಪ್ರಭುಗಳು ಈ ವಚನದಲ್ಲಿ ರುದ್ರ, ಭದ್ರ, ಶಂಕರ, ಮತ್ತು ಶಶಿಧರರೆಂಬ ಗಣೇಶ್ವರರ ಕುರಿತು ಪ್ರಸ್ತಾಪಿಸಿದ್ದಾರೆ. ರುದ್ರನ ನಂತರ ಬರುವ ಭಯಂಕರ ಸಮಪ್ರಳಯ ಕೋಪಾಗ್ನಿ ಎಂದರೆ ವೀರಭದ್ರ. ಆನಂತರ ಶಂಕರ ಹಾಗು ಚಂದ್ರನನ್ನು ತಲೆಯಲ್ಲಿ ಮುಡಿದ ಶಶಿಧರ ಎಂಬ ಗಣೇಶ್ವರರ ಕುರಿತು ಅಲ್ಲಮರು ಪ್ರಸ್ತಾಪಿಸಿದ್ದಾರೆ. ಅದರಂತೆ, ಈ ಭೂಮಿಯನ್ನು ತನ್ನ ಪೀಠ ಮಾಡಿಕೊಂಡು, ಸಂಪೂರ್ಣ ಆಕಾಶವೇ ಲಿಂಗವಾದ ಶಿವನೆಂಬ ಗಣೇಶ್ವರ, ಪುರಾಣಗಳಲ್ಲಿ ಸಿಂಧೂ ಬಲ್ಲಾಳನ ವಧುವನ್ನು ದಾನ ಬೇಡಿದ ಶಿವನೆಂಬ ಗಣೇಶ್ವರ, ಭಕ್ತ ಸಿರಿಯಾಳನ ಮಗನ ತಲೆ ಮಾಂಸದ ಅಡುಗೆಯನ್ನು ಬೇಡಿದ ಶಿವನೆಂಬ ಗಣೇಶ್ವರನ ಕುರಿತು ಅಲ್ಲಮರು ಹೇಳುತ್ತಾರೆ. ಬ್ರಹ್ಮನ ಶಿರವನ್ನು ಹರಿದು ಬ್ರಹ್ಮ ಕಪಾಲ ಮಾಡಿ ಭಿಕ್ಷೆ ಬೇಡಿದ ಶಿವನನ್ನು ಅಲ್ಲಮರು ನೆನೆಸಿದ್ದಾರೆ.

creper lord shiva meditating in snow on mountain centered symmetry painted intricate volumetric lighti 446966241

ವಿಷ್ಣುವಿಗೆ ಕಂಕಾಳವನಿಕ್ಕಿ ಸಮುದ್ರ ಮಂಥನದಲ್ಲಿ ವಿಷ ಎದ್ದು ಬಂದಾಗ ಅದನ್ನು ಕುಡಿದು ನೀಲಕಂಠನೆಂದು ಪ್ರಸಿದ್ಧನಾದ ಪುರಾಣದ ಶಿವನೆಂಬ ಗಣೇಶ್ವರನ ಕುರಿತು ಅಲ್ಲಮರು ಪ್ರಸ್ತಾಪಿಸಿದ್ದಾರೆ. ಹೀಗೆ ಶಿವನ್ನನ್ನೂ ಒಳಗೊಂಡಂತೆ ಆತನ ಅಸಂಖ್ಯಾತ ಗಣಗಳು ಗುಹೇಶ್ವರನೆಂಬ ಸೃಷ್ಟಿ ಚೈತನ್ಯ ಶಕ್ತಿಯ ಅಂಶವನ್ನು ಹೊಂದಿರುವವರು ಎಂದು ಅಲ್ಲಮರು ತಮ್ಮ ವಚನವನ್ನು ಮುಗಿಸುತ್ತಾರೆ. ಇಡೀ ವಚನದಲ್ಲಿ ವೈದಿಕರು ಸೃಷ್ಟಿಸಿರುವ ಶಿವ ಹಾಗು ಪುರಾಣಗಳಲ್ಲಿ ವರ್ಣಿಸಲಾಗಿರುವ ಪುರಾಣದ ಕಾಲ್ಪನಿಕ ಶಿವನನ್ನು ಅಲ್ಲಮರು ನಗಣ್ಯಗೊಳಿಸುತ್ತಾರೆ. ಶಿವನ ಎಲ್ಲಾ ಅವತಾರಗಳು, ಪವಾಡಗಳು, ಮಹಿಮೆಗಳನ್ನು ವರ್ಣಿಸುತ್ತಾ ಆತ ಕೂಡ ಈ ಸೃಷ್ಟಿಯ ಚೈತನ್ಯಾತ್ಮಕ ಶಕ್ತಿಯಾಗಿರಕವ ನಿರಾಕಾರ, ನಿರ್ಗುಣ ಶಿವನ ಸಂಕೇತವಾಗಿರುವ ಗುಹೇಶ್ವರನ ಅಂಶ ಹೊಂದಿದ ಸಾಮಾನ್ಯ ಪುರುಷ ಎನ್ನುತ್ತಾರೆ ಅಲ್ಲಮರು. ಮೇಲಿನ ವಚನ ಬಹಳ ಸ್ಪಷ್ಟವಾಗಿ ಪುರಾಣದ ಶಿವ ಲಿಂಗಾಯತ ಶರಣರು ಆರಾಧಿಸುವ ಶಿವನಲ್ಲ ಎನ್ನುವುದನ್ನು ಹೇಳುತ್ತದೆ. ಶಿವ ಎನ್ನುವ ಶಬ್ದವನ್ನು ಮುಂದಿಟ್ಟುಕೊಂಡು, ವಚನಗಳನ್ನು ಆಳವಾಗಿ ಓದದೆ, ಬಸವಣ್ಣನವರು, ಮತ್ತು ಶರಣರು ಹಿಂದೂ ಬ್ರಾಹ್ಮಣ ಧರ್ಮದ ಶಿವನನ್ನು ಆರಾಧಿಸುತ್ತಾರೆ ಎಂದು ಅರೆ ಬೆಂದ ಮಡಿಕೆಗಳು ಸದ್ದು ಮಾಡುತ್ತಿವೆ. ಪುರಾಣದ ಶಿವನನ್ನು ನಿರಾಕರಿಸುವ ಇನ್ನೂ ಅನೇಕ ವಚನಗಳಿವೆ. ಶರಣರು ಲಿಂಗಾಯತ ಸಿದ್ಧಾಂತ ಸಂಪೂರ್ಣವಾಗಿ ರೂಪುಗೊಳ್ಳುವ ಮೊದಲು ಪುರಾಣದ ಶಿವನನ್ನು ಒಪ್ಪಿರುವ ಬೆರಳೆಣಿಕೆಯ ವಚನಗಳಿವೆ. ಲಿಂಗಾಯತ ಧರ್ಮದ ತಾತ್ವಿಕ ನೆಲೆಗಟ್ಟು ರೂಪುಗೊಳ್ಳುತ್ತಿದ್ದಂತೆ ಶರಣರು ಸ್ಪಷ್ಟವಾಗಿ ಪುರಾಣದ ವೈದಿಕ ಹಾಗು ಆಗಮಿಕ ಶಿವನನ್ನು ನಿರಾಕರಿಸಿದ್ದಾರೆ.

ಟಿಪ್ಪಣಿ

ವಚನಗಳನ್ನು ವಚನ ವಿರೋಧಿಗಳು ಯಾವುದೇ ಭಾಗದಿಂದ ನೋಡಿದರೂ ಅವು ಹೇಳುವುದು ಸ್ಪಷ್ಟವಾಗಿ ಹಿಂದೂ ಬ್ರಾಹ್ಮಣ ಧರ್ಮದ ನಿರಾಕರಣೆ, ಅದರ ವಸ್ತುನಿಷ್ಟ ವಿಮರ್ಶೆ, ಮತ್ತು ಅವೈದಿಕ ಲಿಂಗಾಯತ ದರ್ಶನದ ಪ್ರತಿಪಾದನೆ. ಎಲ್ಲೊ ಒಂದಷ್ಟು ಖೊಟ್ಟಿ ವಚನಗಳು ಹಾಗು ಶರಣ ಧರ್ಮದ ಸಿದ್ಧಾಂತ ರೂಪುಗೊಳ್ಳುವ ಮೊದಲಿನ ಬೆರಳೆಣಿಕೆಯ ವಚನಗಳನ್ನು ಇಟ್ಟುಕೊಂಡು ವಚನ ವಿರೋಧಿಗಳು ಲಿಂಗಾಯತ ದರ್ಶನವನ್ನು ಸಂಕುಚಿತ ಹಿಂದೂ ಬ್ರಾಹ್ಮಣ ಧರ್ಮದ ವ್ಯಾಪ್ತಿಗೆ ಸೇರಿಸಲು ಮಾಡುತ್ತಿರುವ ಪ್ರಯತ್ನ ಅದೊಂದು ವ್ಯರ್ಥ ಕಸರತ್ತು. ಲಿಂಗಾಯತರನ್ನು ಹಿಂದೂಗಳೆಂದು ಕರೆಯುವುದು ಅದೊಂದು ಅರಣ್ಯರೋಧನವಷ್ಟೆ. ಕಲ್ಯಾಣದಲ್ಲಿ ನಡೆದ ವಚನ ಚಳುವಳಿಗೆ ಹೆದರಿ, ಶರಣರ ಹತ್ಯೆ ಹಾಗು ವಚನಗಳ ನಾಶಕ್ಕೆ ಪ್ರಯತ್ನಿಸಿದ ವೈದಿಕ ಶಕ್ತಿಗಳ ಹತಾಶ ಕೃತ್ಯದಿಂದ ಅಪಾರ ಪ್ರಮಾಣದ ವಚನಗಳು ನಾಶವಾಗಿವೆ. ವಿಜಯನಗರ ಅರಸರ ಕಾಲದ 15-16 ನೇ ಶತಮಾನದಲ್ಲಿ ಆಂಧ್ರ ಆರಾಧ್ಯ ಬ್ರಾಹ್ಮಣರ ಕೈಗೆ ಸಿಕ್ಕ ವಚನಗಳ ಸಂಖ್ಯೆ ಕೇವಲ ಅಂದಾಜು ಒಂದು ಸಾವಿರದ ಆಸುಪಾಸು. ಅವುಗಳನ್ನು ಶೈವದ ನೆಲೆಯಲ್ಲಿ ಭ್ರಮಿಸಿ ಅಪವ್ಯಾಖ್ಯಾನಿಸಿದ ಆರಾಧ್ಯರು ಶರಣರ ಮೂಲ ಆಶಯಗಳಿಗೆ ದ್ರೋಹನನ್ನು ಬಗೆದಿದ್ದಾರೆ. ಈಗ ಡಾ. ಫ.ಗು. ಹಳಕಟ್ಟಿಯವರ ಶ್ರಮದಿಂದ ಅಂದಾಜು 23ಸಾವಿರ ವಚನಗಳು ನಮಗೆ ಸಿಕ್ಕಿವೆ. ಇಡೀ ವಚನ ಚಳವಳಿ ಪ್ರತಿಪಾದಿಸಿದ ಸಿದ್ಧಾಂತ ಅದೊಂದು ಪರಿಶುದ್ಧ ಅವೈದಿಕ ಲಿಂಗಾಯತ ದರ್ಶನ ಎನ್ನುವುದು ವಚನಗಳಿಂದ ಸಿದ್ಧವಾಗಿದೆ. ಇನ್ನಾದರೂ ವಚನವಿರೋಧಿಗಳು ತಮ್ಮ ಕೈಚಳಕ, ಕರಸೇವೆಯನ್ನು ನಿಲ್ಲಿಸುವುದು ಒಳ್ಳೆಯದು.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಿರ್ಣಯವನರಿಯದ ಮನ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಸುತ್ತಾಟ | ಆಸ್ಟ್ರೇಲಿಯಾದ ಕೋಸಿಯಸ್ಕೋ ಪರ್ವತ ಚಾರಣ

ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು,...

Download Eedina App Android / iOS

X