ಹಲವಾರು ವರ್ಷಗಳಿಂದ ‘ಡೇಟಿಂಗ್’ ಮಾಡುತ್ತಿದ್ದಾರೆ ಎಂಬ ವದಂತಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತೆರೆ ಎಳೆದಿದ್ದಾರೆ. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಗೆ ಸಿದ್ದತೆ ನಡೆಸುತ್ತಿದ್ದಾರೆ. 2026ರ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ, ತಮ್ಮ ನಿಶ್ಚಿತಾರ್ಥವನ್ನು ನಟ-ನಟಿಯ ಆಪ್ತ ತಂಡವು ದೃಢಪಡಿಸಿದೆ. ಇಬ್ಬರು, 2026ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿಸಿರುವುದಾಗಿ ‘ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಆದಾಗ್ಯೂ, ಈವರೆಗೆ ರಶ್ಮಿಕಾ ಅಥವಾ ವಿಜಯ್ – ಇಬ್ಬರೂ ತಮ್ಮ ನಿಶ್ಚಿತಾರ್ಥದ ಬಗ್ಗೆ ಯಾವುದೇ ಪೋಸ್ಟ್‌ಅನ್ನು ಹಂಚಿಕೊಂಡಿಲ್ಲ. ಮಾತ್ರವಲ್ಲದೆ, ಅಧಿಕೃತವಾಗಿ ಘೋಷಿಸಿಲ್ಲ.
ರಶ್ಮಿಕಾ ಮತ್ತು ವಿಜಯ್ 2018ರಲ್ಲಿ ಬಿಡುಗಡೆಯಾದ ʼಗೀತಾ ಗೋವಿಂದಂʼ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಆ ನಂತರ, 2019ರ ʼಡಿಯರ್ ಕಾಮ್ರೇಡ್ʼ ಸಿನಿಮಾದಲ್ಲಿಯೂ ಕಾಣಿಸಿಕೊಂಡರು. ಆ ಸಮಯದಿಂದಲೂ ಅವರು ‘ಡೇಟಿಂಗ್’ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡಲಾರಂಭಿಸಿದ್ದವು.
ವಿಜಯ್ ಮತ್ತು ರಶ್ಮಿಕಾ ಆಗಾಗ್ಗೆ ಒಟ್ಟಿಗೆ ಸಮಯ ಕಳೆಯುತ್ತಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದವು. 2024ರಲ್ಲಿ, ತಾವು ‘ಸಿಂಗಲ್’ ಅಲ್ಲವೆಂದು ರಶ್ಮಿಕಾ ಹೇಳಿಕೊಂಡಿದ್ದರು. ಆದರೆ, ತಮ್ಮ ಪ್ರೇಮಿ ಯಾರು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಇದೀಗ, ರಶ್ಮಿಕಾ-ವಿಜಯ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಗುಮಾನಿಗೆ ಸ್ಪಷ್ಟನೆ ನೀಡಿದ್ದಾರೆ.