ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ನೀಡಿದ್ದ ಭರವಸೆ ಸುಳ್ಳಾಗಿದ್ದು, ನೂರಕ್ಕೂ ಅಧಿಕ ಮಳಿಗೆಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಬೀದಿಬದಿ ವ್ಯಾಪಾರಸ್ಥರು, ಮಳಿಗೆ ಕಳೆದುಕೊಂಡವರಿಗೆ ಆದ್ಯತೆ ನೀಡುವುದಾಗಿ ನೀಡಿದ್ದ ಭರವಸೆ ಈವರೆಗೂ ಈಡೇರಿಲ್ಲ. ಹಾಗಾಗಿ ಕೂಡಲೇ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಎ ಉರುಕುಂದಪ್ಪ ಒತ್ತಾಯಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ತನ್ವೀರ್ ಸೇಠ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಹಿಂಭಾಗದಲ್ಲಿ ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಿಸುವುದಾಗಿ ಹೇಳಿ ನೂರು ಮಳಿಗೆಗಳನ್ನು ತೆರವುಗೊಳಿಸಿದ್ದರು. ಕಟ್ಟಡ ನಿರ್ಮಾಣದ ಸಮಯದಲ್ಲಿ ಬೂದಿ ಮಣ್ಣು ಬಂದಿದೆ ಎಂದು ಕೆಲಸ ಸ್ಥಗಿತಗೊಳಿಸಿದ್ದರು. ಆದರೆ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ” ಎಂದು ಆರೋಪಿಸಿದರು.
“ಬೀದಿಬದಿ ವ್ಯಾಪರಸ್ಥರಿಂದ 1998 ರಲ್ಲಿ ಶಕೀಲ್ ಅಹ್ಮದ್ ಎಂಬುವವರಿಗೆ ಲೀಸ್ ಆದೇಶ ನೀಡಲಾಗಿತ್ತು. ಅಲ್ಲದೇ ಅಂದಿನ ಗುತ್ತಿಗೆದಾರ ಎನ್ ಕೇಶವರೆಡ್ಡಿಯವರು ಪ್ರತಿ ತಿಂಗಳು ₹300 ಶುಲ್ಕ ವಸೂಲಿ ಮಾಡಿರುವ ರಸೀದಿಗಳಿವೆ. ಆದರೆ ಹೈಟೆಕ್ ಮಾರುಕಟ್ಟೆ ಮಾತ್ರ ನಿರ್ಮಾಣವಾಗಿಲ್ಲ. ಕಳೆದ 25 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವವರಿಗೆ ಅನ್ಯಾಯವಾಗಿದ್ದು, ಕೂಡಲೇ ಸರಿಪಡಿಸಬೇಕು” ಎಂದು ಆಗ್ರಹಿಸಿದರು.
“ಈ ಕುರಿತು ಜಿಲ್ಲಾ ಘಟಕದ ನಿಯೋಗ ಎಪಿಎಂಸಿ, ಕಾರ್ಮಿಕ ಸಚಿವರನ್ನು ಭೇಟಿ ಮಾಡಲಾಗುತ್ತದೆ. ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಅವರಿಗೆ ದೂರು ನೀಡಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಕಲಬೆರಕೆ ವಸ್ತು ಮಾರಾಟಗಾರರ ವಿರುದ್ಧ ಕ್ರಮಕ್ಕೆ ಆಗ್ರಹ
ಭಾಸ್ಕರ ಬಾಬು ಮಾತನಾಡಿ, “ವ್ಯಾಪಾರಸ್ಥರಿಂದ ಶುಲ್ಕ ವಸೂಲಿ ಮಾಡುತ್ತಿರುವ ನಗರಸಭೆ ಹೈಟೆಕ್ ಮಾರುಕಟ್ಟೆ ಇಲ್ಲವೇ ಶೆಡ್ ಸಹ ಹಾಕಿಕೊಟ್ಟಿಲ್ಲ. ನಗರಸಭೆ ವ್ಯಾಪಾರಸ್ಥರ ಹಿತ ಕಾಯುವಲ್ಲಿ ವಿಫಲವಾಗಿದೆ. ಕೂಡಲೇ ಜಿಲ್ಲಾಧಿಕಾರಿಯವರು ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ ಡಿ ಜಮೀಲ್ ಅಹ್ಮದ್, ಬಿ ನರಸಿಂಹಲು, ಎಂ ಡಿ ಸಮೀರ್, ಮಹ್ಮದ ಫಜಲ್, ಮಾಸೂಮ್ ಇದ್ದರು.