ಪರಿಶಿಷ್ಟ ಜಾತಿ-ಪಂಗಡದವರಿಗೆ ಇರುವಂತೆ ಚುನಾವಣೆಗಳಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ದೊರೆಯಬೇಕು. ಆ ಮೂಲಕ ಈ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದು ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ನಗರದ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಏರ್ಪಡಿಸಿದ್ದ ಕೇಂದ್ರ, ರಾಜ್ಯ ಹಾಗೂ ಸಹಕಾರ ಕ್ಷೇತ್ರದ ವಿವಿಧ ಸ್ಥಾನಗಳಿಗೆ ನಿಯುಕ್ತಿಗೊಂಡವರನ್ನು ಅಭಿನಂದಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೆ.ಎನ್.ರಾಜಣ್ಣ, ರಾಜಕೀಯ ಅಧಿಕಾರ ಇಲ್ಲದಿದ್ದರೆ ಸಮಸ್ಯೆಗಳನ್ನು ಪ್ರಸ್ತಾಪ ಮಾಡಲು ಅವಕಾಶ ಸಿಗುವುದಿಲ್ಲ. ರಾಜಕೀಯ ಅಧಿಕಾರ ಇಲ್ಲದ ಸಮುದಾಯಗಳು ರಾಜಕೀಯ ಅಧಿಕಾರ ಹೊಂದಿರುವ ಸಮುದಾಯಗಳ ಮೇಲೆ ಅವಲಂಬಿತವಾಗುವಂತಹ ಪರಿಸ್ಥಿತಿ ಬರುತ್ತದೆ ಎಂದರು.
ಸಮಾಜಕ್ಕೆ ಕೊಡುಗೆ ಕೊಟ್ಟಿರುವ ಎಲ್ಲಾ ದಾರ್ಶನಿಕರ ಜಯಂತಿಯನ್ನು ಒಂದೇ ದಿನ, ಒಂದೇ ವೇದಿಕೆಯಲ್ಲಿ ಆಚರಿಸುವ ಹೊಸ ಸಂಪ್ರದಾಯ ಆರಂಭಿಸಬೇಕು ಎಂದರು
ರಾಜಕಾರಣದಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡಬೇಕು. ರಾಜಕೀಯ ಅಧಿಕಾರ ಪಡೆಯಲು ಸಮುದಾಯಗಳು ಸಂಘಟಿತರಾಗಬೇಕು. ಅಧಿಕಾರ ಪಡೆದ ನಂತರ ಧ್ವನಿ ಇಲ್ಲದವರು, ಅಸಹಾಯಕರು, ಎಲ್ಲಾ ಜಾತಿಯ ಬಡವರಿಗೆ ಸಹಾಯ ಮಾಡಿ ಅವರಿಗೆ ನ್ಯಾಯ ದೊರಕಿಸಬೇಕು. ಇಂದು ಎಷ್ಟೋ ಸಣ್ಣ ಸಮುದಾಯಗಳಿಗೆ ರಾಜಕೀಯ ಅಧಿಕಾರವೇ ಇಲ್ಲ, ಅವರು ಚುನಾವಣೆಗಳ ಮೂಲಕ ಅಧಿಕಾರ ಪಡೆಯಲು ಸಾಧ್ಯವೂ ಇಲ್ಲ. ಇಂತಹ ಸಮಾಜದವರಲ್ಲಿ ರಾಜಕೀಯ ಶಕ್ತಿ ತುಂಬಲು ಮೀಸಲಾತಿ ಸೌಲಭ್ಯದ ಅಗತ್ಯವಿದೆ ಎಂದರು.

ಅತಿ ಹೆಚ್ಚಿ ಜನಸಂಖ್ಯೆ ಇರುವ ಹಿಂದುಳಿದ ವರ್ಗದವರಿಗೆ ಜನಸಂಖ್ಯೆಗೆ ತಕ್ಕಂತಹ ರಾಜಕೀಯ ಸ್ಥಾನಮಾನ ದೊರೆಯುತ್ತಿಲ್ಲ. ಇಂತಹ ಪರಿಸ್ಥಿಯಲ್ಲಿ ಮೀಸಲಾತಿ ನೀಡಿ ಅವಕಾಶ ಕೊಡಬೇಕು. ಸಹಕಾರ ಕ್ಷೇತ್ರದಲ್ಲಿ ಅವಕಾಶವಿಲ್ಲದ ಸಮಜದವರಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ಸಹಕಾರ ಸಚಿವರಾಗಿದ್ದಾಗ ಸಹಕಾರ ಸಂಸ್ಥೆಗಳಲ್ಲಿ ಸರ್ಕಾರ ಮೀಸಲಾತಿ ಜಾರಿ ಮಾಡಿದೆ. ಪರಿಶಿಷ್ಟ ಜಾತಿ-ಪಂಗಡದವರಿಗೆ ಲೋಕಸಭೆ ಹಾಗೂ ವಿಧಾನಸಭೆಯ ಕ್ಷೇತ್ರ ಮೀಸಲಾತಿ ನೀಡಿರುವಂತೆ ಹಿಂದುಳಿದ ವರ್ಗದವರಿಗೂ ಮೀಸಲಾತಿ ನೀಡಬೇಕಾದ ಅವಶ್ಯಕತೆ ಇದೆ. ಅವರೂ ಸರ್ಕಾರದಲ್ಲಿ ಧ್ವನಿ ಮಾಡಿ ತಮ್ಮ ಸಮಸ್ಯೆಗಳನ್ನು ಚರ್ಚಿಸಬಹುದು ಎಂದು ಹೇಳಿದರು.
ಅನೇಕ ಮಹನೀಯರು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅವರ ಸ್ಮರಣೆಗಾಗಿ ಅವರ ಜಯಂತಿ ಆಚರಿಸುತ್ತಿದ್ದೇವೆ. ಇವತ್ತಿನ ಪರಿಸ್ಥಿತಿಯಲ್ಲಿ ಅಂತಹ ದಾರ್ಶನಿಕರ ಜಯಂತಿಯನ್ನು ಆವರ ಸಮಾಜದವರು ಆಚರಿಸುತ್ತಿದ್ದಾರೆ. ಆ ಮಹನೀಯರನ್ನು ಒಂದು ಸಮಾಜಕ್ಕೆ ಸೀಮಿತ ಮಾಡಬಾರದು. ಮಹನೀಯರ ಜಯಂತಿಯನ್ನು ಒಂದೊಂದು ದಿನ ಪ್ರತ್ಯೇಕವಾಗಿ ಆಚರಿಸುವ ಬದಲು ವರ್ಷದಲ್ಲಿ ಒಂದು ದಿನ ಒಂದೇ ವೇದಿಕೆಯಲ್ಲಿ ಎಲ್ಲಾ ಸಮಾಜದವರೂ ಸೇರಿ ಎಲ್ಲಾ ಮಹನೀಯರ ಜಯಂತಿ ಆಚರಿಸುವಂತಹ ಸಂಪ್ರದಾಯ ಆರಂಭವಾಗಬೇಕು ಎಂದು ಕೆ.ಎನ್.ರಾಜಣ್ಣ ಆಶಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ರಾಜಕೀಯ ಅಧಿಕಾರವನ್ನು ಯಾರೂ ಕೊಡುವುದಿಲ್ಲ, ನಾವೇ ತೆಗೆದುಕೊಳ್ಳಬೇಕು. ತೆಗೆದುಕೊಳ್ಳಲು ನಾಯಕನ ಬೆನ್ನಿಗೆ ಜನಶಕ್ತಿ ಇರಬೇಕು. ಹೀಗಾಗಿ ಸಂಘಟನೆ ಮುಖ್ಯವಾಗುತ್ತದೆ. ಈಗ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಿಂದುಳಿದ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ಪೂರಕ ಮಾಹಿತಿ ನಮೂದಿಸಬೇಕು. ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ರಮೇಶ್‌ಬಾಬು ಮಾತನಾಡಿ, ಹಿಂದುಳಿದ ವರ್ಗಗಳು ಎಲ್ಲಿಯವರೆಗೆ ರಾಜಕೀಯ ಶಕ್ತಿ ಪಡೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ನ್ಯಾಯ ಸಿಗುವುದಿಲ್ಲ. ಸರ್ಕಾರ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಗ್ಗೆ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ. ಸಮೀಕ್ಷೆಯಿಂದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಜನಸಂಖ್ಯೆಯ ಮಾಹಿತಿ ಸರ್ಕಾರಕ್ಕೆ ದೊರೆಯುತ್ತದೆ. ಅದರ ಆಧಾರದಲ್ಲಿ ಸರ್ಕಾರ ಮೀಸಲಾತಿ, ಮತ್ತಿತರ ಸೌಲಭ್ಯಗಳನ್ನು ಈ ವರ್ಗಗಳಿಗೆ ಹಂಚಲು ಅವಕಾಶವಾಗುತ್ತದೆ. ಸಮೀಕ್ಷೆ ವಿರೋಧಿಸುವವರ ವಿರುದ್ಧ ಹಿಂದುಳಿದ ವರ್ಗದವರು ಗಟ್ಟಿ ಧ್ವನಿಯಲ್ಲಿ ವಿರೋಧಿಸಬೇಕು ಎಂದು ಕರೆ ನೀಡಿದರು.

ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಡಾ.ಎಸ್.ನಾಗಣ್ಣ ಮಾತನಾಡಿ, ಹಿಂದುಳಿದ ವರ್ಗಗಳು ಸಂಘಟಿತರಾಗಬೇಕು, ಎಲ್ಲಾ ಸಮಾಜಗಳಿಗೆ ಒಳ್ಳೆಯದನ್ನೇ ಮಾಡುತ್ತಿರುವ ಕೆ.ಎನ್.ರಾಜಣ್ಣನವರು ಹಿಂದುಳಿದ ವರ್ಗಗಳ ಪರವಾಗಿ ಧ್ವನಿಯಾಗಿ ಶಕ್ತಿ ತುಂಬಿ ಬೆಂಬಲಕ್ಕಿದ್ದಾರೆ. ಅವರ ಬೆಂಬಲದಿAದ ಈ ವರ್ಗದ ಮುಖಂಡರು ರಾಜಕೀಯ ಸ್ಥಾನಮಾನ ಪಡೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.
ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಶಕ್ತಿ ತುಂಬಿದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೇ, ಕೆ.ಎನ್.ರಾಜಣ್ಣನವರು. ದೇವರಾಜ ಅರಸರ ನಂತರ ಶೋಷಿತ ಸಮುದಾಯಗಳ ಪರ ನಿಂತಿರುವ ನಾಯಕರಾಗಿದ್ದಾರೆ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್, ಅಧ್ಯಕ್ಷ ಡಾ.ಧನಿಯಾಕುಮಾರ್, ಉಪಾಧ್ಯಕ್ಷ ಡಿ.ಎಂ.ಸತೀಶ್, ಸಮಿತಾ ಸಮಾಜ ಅಭಿವೃದ್ಧಿ ನಿಗಮ ಅಧ್ಯಕ್ಷ ಮುತ್ತುರಾಜು ಮೊದಲಾದವರು ಮಾತನಾಡಿದರು.
ಬೆಂಗಳೂರು ವಿಭಾಗ ರೈಲ್ವೆ ಮಂಡಳಿ ನಿರ್ದೇಶಕರಾಗಿ ನೇಮಕವಾಗಿರುವ ಡಾ.ಧನಿಯಾಕುಮಾರ್, ಜೆ.ಪಿ.ಮಲ್ಲಸಂದ್ರ ಶಿವಣ್ಣ, ಡಿ.ಎಂ.ಸತೀಶ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಪಿ.ಮೂರ್ತಿ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾರೋಗೆರೆ ಮಹೇಶ್, ಕೇಂದ್ರ ವಿವಿ ಸದಸ್ಯ ಕೆ.ಜೆ.ಪರಶುರಾಮ್, ಸವಿತಾ ಸಮಾಜ ಅಭಿವೃದ್ಧಿ ನಿಗಮ ಅಧ್ಯಕ್ಷ ಮುತ್ತುರಾಜು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮೊದಲಾದವರನ್ನು ಒಕ್ಕೂಟದಿಂದ ಸನ್ಮಾನಿಸಿ ಗೌರವಿಸಲಾಯಿತು.
ಒಕ್ಕೂಟದ ಗೌರವ ಸಲಹೆಗಾರ ಎಂ.ಕೆ.ವೆಂಕಟಸ್ವಾಮಿ, ಉಪಾಧ್ಯಕ್ಷರಾದ ಶಾಂತಕುಮಾರ್, ಮಂಜೇಶ್ ಒಲಂಪಿಕ್, ಪದಾಧಿಕಾರಿಗಳಾದ ಗುರುರಾಘವೇಂದ್ರ, ಡಮರುಗೇಶ್, ಲಕ್ಷ್ಮೀಕಾಂತರಾಜೇ ಅರಸು, ಎಂ.ವಿ.ತೇಜೇಶ್ ಮೊದಲಾದವರು ಭಾಗವಹಿಸಿದ್ದರು.