ಜಿಲ್ಲೆಯಾದ್ಯಂತ ಬಂದ ನಿರಂತರ ಮಳೆ ಮತ್ತು ಪ್ರವಾಹದಿಂದ ಅಪಾರ ಬೆಳೆ ನಷ್ಟ, ರೈತರ ಆರ್ಥಿಕ ಸಂಕಷ್ಟ ಹಾಗೂ ಸರ್ಕಾರದ ನಿರ್ಲಕ್ಷ್ಯ ವಿರುದ್ಧವಾಗಿ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಎಐಕೆಕೆಎಂಎಸ್ ಹಾಗೂ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಎಸ್‌ಯುಸಿಐ (ಸಿ) ಸಂಘಟನೆಗಳು ಜಂಟಿಯಾಗಿ ಶನಿವಾರ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯ ವಿಸ್ತೃತ ಸಮಿತಿ ಸದಸ್ಯ ಕೆ. ಸೋಮಶೇಖರ್ ಮಾತನಾಡಿ, ಕಳೆದ ಮೂರು ತಿಂಗಳಿಂದ ಸುರಿದ ನಿರಂತರ ಮಳೆ ಮತ್ತು ಭೀಮನದಿ ಪ್ರವಾಹದಿಂದ ಜಿಲ್ಲೆಯಾದ್ಯಂತ ರೈತರ ಬೆಳೆಗಳು ನಾಶವಾಗಿವೆ. ರೈತರ ದುಸ್ಥಿತಿಗೆ ಸರ್ಕಾರಗಳು ಕಣ್ಣಮುಚ್ಚಿಕೊಂಡಿರುವುದು ಖಂಡನೀಯವಾಗಿದೆ. ರೈತರು ಬೆಳೆಗಾಗಿ ಖರ್ಚು ಮಾಡಿರುವ ಅನುಗುಣವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಯಾದಗಿರಿ: ಲಂಚಕ್ಕೆ ಬೇಡಿಕೆ; ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್
ಜನಪ್ರತಿನಿಧಿಗಳು ಪ್ರವಾಹ ಸಂತ್ರಸ್ತರ ನೆರವಿಗೆ ಬರುವ ಬದಲು ರಾಜಕೀಯ ಲಾಭಕ್ಕಾಗಿ ಪ್ರವಾಹದ ಸಂದರ್ಭವನ್ನೇ ಉಪಯೋಗಿಸುತ್ತಿರುವುದು ದುಃಖಕರವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಕ್ರಮ ಕೈಗೊಂಡು ಯಾದಗಿರಿಯನ್ನು ಹಸಿಬರ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮುಖಂಡ ಶರಣಗೌಡ ಗೂಗಲ್ ಅವರು ಮಾತನಾಡಿ, ಸರ್ಕಾರಗಳು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡದೆ, ಖರೀದಿ ಕೇಂದ್ರಗಳನ್ನು ತಡವಾಗಿ ತೆರೆಯುತ್ತಿರುವುದು ರೈತ ವಿರೋಧಿ ಕ್ರಮವಾಗಿದೆ. ಸರ್ಕಾರವು ರೈತರ ಹಿತವನ್ನು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರತಿಭಟನಾ ಸ್ಥಳದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಶೇಕಡಾ 70 ರಷ್ಟು ಬೆಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಪೂರ್ಣ ಸಮೀಕ್ಷೆಯ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಿ, ಸಂತ್ರಸ್ತರಿಗೆ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಡಿ. ಉಮಾದೇವಿ, ಜಮಾಲ್ ಸಾಬ್, ರಾಮಲಿಂಗಪ್ಪ ಬಿ.ಎನ್, ಭೀಮರೆಡ್ಡಿ ಹಿರೇಬಾನರ್, ಶಿಲ್ಪಾ ಬಿ.ಕೆ, ಸುಭಾಷ್ ಚಂದ್ರ ಬಾವನೋರ, ಸಿದ್ದಣ್ಣ ಗೂಗಲ್, ಮರೆಪ್ಪ, ರಾಜು, ರಮೇಶ್, ಅಮರೇಶ್ ದಣಿ, ರಾಮರೆಡ್ಡಿ, ಭೀಮರಾಯ, ಮಲ್ಲಮ್ಮ, ಶಿವಬಸಮ್ಮ, ಸುಮಂಗಲ ಸೇರಿದಂತೆ ಹಲವಾರು ರೈತರು ಭಾಗವಹಿಸಿದರು.
ಮುಖ್ಯ ಬೇಡಿಕೆಗಳು: ಜಿಲ್ಲೆಯನ್ನು ಹಸಿಬರ ಪೀಡಿತ ಜಿಲ್ಲೆ ಎಂದು ಘೋಷಿಸುವುದು. ಪ್ರತಿ ಎಕರೆಗೆ ಕನಿಷ್ಠ ರೂ.25 ಸಾವಿರ ಪರಿಹಾರ ನೀಡಬೇಕು, ರೈತರ ಸಾಲಮನ್ನಾ ಹಾಗೂ ಉಚಿತ ಬೀಜ, ರಸಗೊಬ್ಬರ ಪೂರೈಸುವುದು, ಪ್ರವಾಹ ಪೀಡಿತರಿಗೆ ತಕ್ಷಣ ಪರಿಹಾರ, ಆರೋಗ್ಯ ಶಿಬಿರ ಹಾಗೂ ಆಹಾರ ಕಿಟ್ ವಿತರಿಸುವುದು, ಹಾನಿಗೊಳಗಾದ ಮನೆಗಳು, ಶಾಲೆಗಳು, ರಸ್ತೆ, ಸೇತುವೆಗಳನ್ನು ಪುನರ್ ನಿರ್ಮಿಸುವುದು ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.