ರಾಮ ರಾಜ್ಯವನ್ನು ನಿರ್ಮಾಣ ಮಾಡುತ್ತೇವೆಂದು ಅಧಿಕಾರದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದಲ್ಲಿ ವರದಕ್ಷಿಣೆ ದೌರ್ಜನ್ಯದ ಘಟನೆ ವರದಿಯಾಗಿದೆ. ಗರ್ಭಿಣಿಯೊಬ್ಬರನ್ನು ಆಕೆಯ ಪತಿ ಮತ್ತು ಅತ್ತೆ-ಮಾವ ಹೊಡೆದು ಹೊಂದಿದ್ದಾರೆ.
ಉತ್ತರ ಪ್ರದೇಶದ ಮೈನ್ಪುರಿಯ ಗೋಪಾಲ್ಪುರ ಗ್ರಾಮದಲ್ಲಿ ಘಟನೆ ನಡೆದಿದೆ. ರಜನಿ ಕುಮಾರಿ (21) ಎಂಬವರನ್ನು ವರದಕ್ಷಿಣೆಗಾಗಿ ಆಕೆಯ ಪತಿ ಸಚಿನ್ ಮತ್ತು ಆತನ ಕುಟುಂಬಸ್ಥರು ಹೊಡೆದು ಕೊಲೆ ಮಾಡಿದ್ದಾರೆ.
ರಜನಿ ಕುಮಾರಿ ಮತ್ತು ಸಚಿನ್ ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ವಿವಾಹವಾಗಿದ್ದರು. ರಜನಿ ಅವರಿಗೆ ಆಕೆಯ ಪತಿ ಸಚಿನ್, ಸಹೋದರರಾದ ಪ್ರಾಂಶು ಮತ್ತು ಸಹಬಾಗ್, ಸಂಬಂಧಿಗಳಾದ ರಾಮ್ ನಾಥ್, ದಿವ್ಯಾ ಹಾಗೂ ಟೀನಾ ಅವರು ಟೆಂಟ್ ಹೌಸ್ ತೆರೆಯಲು 5 ಲಕ್ಷ ರೂ. ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಡ ಹೇರಿದ್ದರು ಎಂದು ಮೈನ್ಪುರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಹುಲ್ ಮಿಥಾಸ್ ತಿಳಿಸಿದ್ದಾರೆ.
“ಸಚಿನ್ ಮತ್ತು ಆತನ ಕುಟುಂಬಸ್ಥರ ಬೇಡಿಕೆಯಂತೆ ರಜನಿ ಅವರು ಹಣ ತರದೇ ಇದ್ದಾಗ, ಆಕೆಗೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದಾರೆ. ಶುಕ್ರವಾರ, ರಜನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಂದಿದ್ದಾರೆ. ಸಾಕ್ಷ್ಯಗಳನ್ನು ನಾಶಮಾಡಲು ತಮ್ಮ ಹೊಲದಲ್ಲಿಯೇ ಆಕೆಯ ಮೃತದೇಹವನ್ನು ಮುಚ್ಚಿಹಾಕಿದ್ದಾರೆ” ಎಂದು ವಿವರಿಸಿದ್ದಾರೆ.
ಘಟನೆಯ ಬಗ್ಗೆ ತಿಳಿದ ನಂತರ, ರಜನಿ ಅವರ ತಾಯಿ ಸುನೀತಾ ದೇವಿ ಅವರು ಸಚಿನ್ ಮತ್ತು ಆತನ ಆರು ಮಂದಿ ಕುಟುಂಬಸ್ಥರ ವಿರುದ್ಧ ಒಂಚಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ ಎಂದು ಮಿಥಾಸ್ ತಿಳಿಸಿದ್ದಾರೆ.