ಕನ್ನಡ ಮಾಧ್ಯಮಗಳು ಸೃಷ್ಟಿಸಿರುವ ತುಚ್ಛ ಶಬ್ದ ’ಅನ್ಯಕೋಮು’: ರಹಮತ್ ತರೀಕೆರೆ ವಿಷಾದ

Date:

Advertisements

“ಕನ್ನಡ ಮಾಧ್ಯಮಗಳು ಸೃಷ್ಟಿಸಿರುವ ಹೇಯ ಮತ್ತು ತುಚ್ಛ ಪದ ಅನ್ಯಕೋಮು, ಅನ್ಯಧರ್ಮೀಯ” ಎಂದು ಸಂಸ್ಕೃತಿ ಚಿಂತಕರಾದ ಪ್ರೊ.ರಹಮತ್‌ ತರೀಕೆರೆ ವಿಷಾದಿಸಿದರು.

‘ಜಾಗೃತ ಕರ್ನಾಟಕ’ ವತಿಯಿಂದ ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ’ನಮ್ಮ ಕರ್ನಾಟಕ ನಮ್ಮ ಮಾದರಿ- ಚಿಂತನಾ ಸಮಾವೇಶ’ದಲ್ಲಿ ’ತನ್ನಂತೆ ಪರರ ಬಗೆವ ನಾಡು’ ವಿಷಯ ಕುರಿತು ಅವರು ಮಾತನಾಡಿದರು.

ವರ್ಗ, ಜಾತಿ, ಧರ್ಮದ ಹೆಸರಲ್ಲಿ ಅನ್ಯ (ಅವರು) ಮತ್ತು ನಾವು ಎಂದು ಬಳಸಲಾಗುತ್ತಿದೆ. ಅನ್ಯಧರ್ಮೀಯ ಯುವಕರು, ಅನ್ಯಕೋಮಿನ ಹುಡುಗರು ಎಂದು ಮಾಧ್ಯಮಗಳು ಬಳಸುತ್ತಿವೆ. ರಾಜಕೀಯ ಧ್ರುವೀಕರಣಕ್ಕೆ, ಆಕ್ರಮಣಕ್ಕೆ ಮುನ್ನುಡಿಯಾಗಿ ಅದು ಬಳಕೆಯಾಗುತ್ತಿದೆ. ನಾವು ಮತ್ತು ಅವರು ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Advertisements

“ಅನ್ಯ ಎಂಬ ಪದವನ್ನು ಎರಡು ಅರ್ಥದಲ್ಲಿ ಬಳಸುತ್ತಿದ್ದೇವೆ. ಬೇರೆಯವರಿಗಿಂತ ಹೇಗೆ ಭಿನ್ನ ಎಂಬುದನ್ನು ಹೇಳುವುದಕ್ಕೆ ಹಾಗೂ ದ್ವೇಷವನ್ನು ಬಿತ್ತುವುದಕ್ಕೆ. ನಮ್ಮ ರಾಜ್ಯ ಇತರ ರಾಜ್ಯಗಳಿಗಿಂತ ಭಿನ್ನ ಎನ್ನುವಾಗ ಅನ್ಯ ಎಂದು ಬಳಸುತ್ತೇವೆ. ಬೇರೆಯವರ ಜೊತೆ ತುಲನೆ ಅನಿವಾರ್ಯ. ಗಂಡು ಹೆಣ್ಣಿನ ವಿಚಾರ ಬರುವಾಗ, ಬೇರೆ ಧರ್ಮಗಳ ವೈವಿಧ್ಯತೆಯನ್ನು ಹೇಳುವಾಗ ಅನ್ಯ ಪದ ಬರಬಹುದು. ನಮ್ಮನ್ನು ನಾವು ಕಂಡುಕೊಳ್ಳಲು ಬಳಸುತ್ತೇವೆ. ಆದರೆ ಅನ್ಯ ಎಂಬುದು ಬೇರೆಯವರನ್ನು ದ್ವೇಷಿಸುವುದಕ್ಕೆ ಮತ್ತು ದೂಷಿಸುವುದಕ್ಕೆ ಬಳಕೆಯಾಗುತ್ತಿದೆ. ಈ ನೆಲೆಗಟ್ಟಿನ ಅನ್ಯ ಪದದ ಬಳಕೆಗೆ ವಿರೋಧವಿದೆ” ಎಂದು ತಿಳಿಸಿದರು.

“ಜ್ಞಾನ ಸೃಷ್ಟಿಯ ಮೂಲದಲ್ಲಿಯೂ ಅನ್ಯೀಕರಣ ಇದೆ. ಎದುರಾಳಿಯ ಪರಿಕಲ್ಪನೆ ಇಲ್ಲದೆಯೇ ತರತಮ ಸಿದ್ಧಾಂತಗಳು ಹುಟ್ಟಿಲ್ಲ. ಇನ್ನೊಬ್ಬರನ್ನು ತಮ್ಮಂತೆ ಭಾವಿಸುವ ಚಿಂತನೆಗಳನ್ನು ನಾವು ಪರಿಭಾವಿಸಬೇಕಾಗಿದೆ. -ತನ್ನಂತೆ ಸರ್ವರ ಜೀವ ಮನ್ನಿಸಿದಾಗ ಇನ್ನೇನು?- ಎನ್ನುವ ಕಡಕೋಳ ಮಡಿವಾಳಪ್ಪನವರ ಪರಂಪರೆ ನಮ್ಮದು. ಇನ್ನೊಬ್ಬರ ತುಚ್ಛೀಕರಣವನ್ನು ಶರಣರು ವಿರೋಧಿಸಿದರು” ಎಂದು ಸ್ಮರಿಸಿದರು.

ತನ್ನಂತೆ ಪರರ ಬಗೆವೊಡೆ ಕೈಲಾಸ ಎಂದು ಸರ್ವಜ್ಞ ಹೇಳುತ್ತಾನೆ. ತನ್ನಂತೆ ಪರರನ್ನು ಬಗೆಯದಿರುವ ಸಮಾಜದಲ್ಲಿ ಹತಾಷೆಯಿಂದ ಹುಟ್ಟಿದ ಮಾತುಗಳಿವು ಎಂಬಂತೆ ಭಾವಿಸಬೇಕು. ಧಾರ್ಮಿಕ ನೆಲೆಯ ಹುಡುಕಾಟದಲ್ಲಿ ನಮ್ಮ ಸಂತರು, ಕವಿಗಳು ಈ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ವಿವರಿಸಿದರು.

ವೇದಗಳನ್ನೇ ನಿರಾಕರಿಸುವ ಫಿಲಾಸಫಿಯನ್ನು ಬಸವಣ್ಣ ಹೇಳಿದರು. ಸಂಬಂಜ ದೊಡ್ಡದು ಅನ್ನೋ ಫಿಲಾಸಫಿಯೂ ಇದೆ, ಬೇರೆ ಬೇರೆಯಾಗಿ ನೋಡುವ ಧಾರೆಗಳು ಬಂದಿವೆ ಎಂಬುದನ್ನು ಮರೆಯಬಾರದು. ಇನ್ನೊಬ್ಬರ ನೋವು ನಮ್ಮದು ಎಂಬಂತೆ ಭಾವಿಸಿದ ಪರಂಪರೆ ಇಲ್ಲಿದೆ. ಮಂಡೇಲಾ ಕುರಿತ ಬಂದ ಸಾಹಿತ್ಯವೇ ಇದಕ್ಕೆ ಉದಾಹರಣೆ ಎಂದು ಹೇಳಿದರು.

ಸಿದ್ಧಾರೂಢರ ಚರಿತ್ರೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, “ಹತ್ತೊಬ್ಬನೇ ಶತಮಾನದಲ್ಲಿ ತೆಗೆದ ಒಂದು ಫೋಟೋ ಇದೆ. ಅದರಲ್ಲಿ ಬೇರೆ ಬೇರೆ ವಿಚಾರಧಾರೆಯ ಸಂತರನ್ನು ನೋಡಬಹುದು. ಸಂವಾದ ಪರಂಪರೆಗೆ ಇದೊಂದು ಉದಾಹರಣೆ. ಸಾಮಾಜಿಕ, ರಾಜಕೀಯ ದೃಷ್ಟಿಕೋನಗಳು ನಮ್ಮ ಸಂತರಿಗಿದ್ದವು ಎಂದು ಶ್ಲಾಘಿಸಿದರು.

ಪಂಡಿತ ತಾರಾನಾಥರ ಆಶ್ರಮದ ಪರಂಪರೆಯೂ ದೊಡ್ಡದು. 1921, 1922, 1923 ಈ ಕಾಲಘಟ್ಟ ಪ್ರಮುಖವಾದದ್ದು. ಮಿಲ್ಲರ್‌ ಆಯೋಗ, ಪಂಡಿತ ತಾರಾನಾಥರ ಆಶ್ರಮದ ಹುಟ್ಟು, ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ, ಬಾಬಾ ಸಾಹೇಬರು ಅಮೆರಿಕಾದಿಂದ ಬಂದು ಇಂಗ್ಲೆಡ್‌ಗೆ ಹೊರಟಿದ್ದು, ಶಾಹೂ ಮಹಾರಾಜರು ತೀರಿಕೊಂಡಿದ್ದು, ಜನಗಣಮನ, ಭಾರತ ಜನನಿಯ ತನುಜಾನೆಗಳ ರಚನೆ ಈ ಅವಧಿಯಲ್ಲೇ ಆದವು. ಆರ್‌ಎಸ್‌ಎಸ್ ರೂಪುಗೊಂಡಿದ್ದು ಈ ಅವಧಿಯಲ್ಲೇ. ಕರ್ನಾಟಕ ಮತ್ತು ಭಾರತದ ಗತಿಯನ್ನು ಬದಲಿಸಿದ ವಿದ್ಯಮಾನಗಳು ಶುರುವಾಗಿದ್ದವು. ಪ್ರೇಮಾಯಾತನವನ್ನು ಪಂಡಿತ ತಾರಾನಾಥರು ಬೆಳೆಸಿದರು. ಸಹಾನುಭೂತಿಯ ಪರಂಪರೆಯನ್ನು ರೂಪಿಸಿದರು. ತಮ್ಮ ಶಾಲೆಯಲ್ಲಿ ಎಲ್ಲ ಜಾತಿ, ಧರ್ಮದ ಮಕ್ಕಳು ಇರಬೇಕೆಂಬ ನಿಯಮಗಳನ್ನು ತಂದರು. ಕರ್ನಾಟಕವು ಪ್ರಯೋಗಗಳ ಭೂಮಿಯಾಗಿತ್ತು ಎಂದು ಉಲ್ಲೇಖಿಸಿದರು.

ಇದನ್ನೂ ಓದಿರಿ: ಮಹಿಳಾ ರಾಜಕೀಯ ಪ್ರಾತಿನಿಧ್ಯ ಬೇಕು: ಡಾ.ಸಬೀಹಾ ಭೂಮಿಗೌಡ

ಅಂದಿನ ಎಲ್ಲ ಪ್ರಯೋಗಗಳು ಬಹುತ್ವವನ್ನು ಸಾರಿದವು. ಆದರೆ, ಇಂದು ಏಕರೂಪಿ ನಾಗರಿಕ ಚಿಂತನೆಗಳನ್ನು ವಿರೋಧಿಸುವ ಎಲ್ಲ ಧಾರೆಗಳು ದೇಶದ್ರೋಹಿ ಎಂಬಂತಾಗಿವೆ ಎಂದು ಟೀಕಿಸಿದರು.

ಕರ್ನಾಟಕವನ್ನು ಕಟ್ಟುವ ಪ್ರಯೋಗಗಳನ್ನು ನಮ್ಮ ಸಂತರು ಮಾಡಿದ್ದಾರೆ. ಕರ್ನಾಟಕದ ಯಾವುದೇ ಅಧ್ಯಾತ್ಮ ಚಳವಳಿಯನ್ನು ತೆಗೆದುಕೊಂಡರೂ ಜಾತಿ, ವರ್ಣ ತಾರತಮ್ಯವನ್ನು ಅವುಗಳು ವಿರೋಧಿಸಿವೆ. ಕೂಡು ಬಾಳುವ ತತ್ವದ ಹಿಂದೆ ಅರ್ಥ ವ್ಯವಸ್ಥೆ ಇದೆ ಎಂದು ಅಭಿಪ್ರಾಯಪಟ್ಟರು.

ಮೊಹರಂ ಹಾಡುಗಳಲ್ಲಿ ಎಲ್ಲ ದುರಂತಗಳ ಬಗ್ಗೆಯೂ ನೋವನ್ನು ವ್ಯಕ್ತಪಡಿಸಲಾಗುತ್ತದೆ. ಚರಿತ್ರೆಯ ಮತ್ತು ಸಮಕಾಲೀನತೆಯ ಕುರಿತು ಹಾಡುತ್ತಾರೆ. ವ್ಯಾಪಾರ ವಹಿವಾಟುಗಳು ಧಾರ್ಮಿಕ ಸಾಮರಸ್ಯವಷ್ಟೇ ಅಲ್ಲ ವ್ಯಾಪಾರಿ ಸಂಬಂಧ ಮತ್ತು ಆಳವಾದ ಸಾಮಾಜಿಕ ಸಂಬಂಧಗಳನ್ನು ಹೇಳುತ್ತಿವೆ. ಕರ್ನಾಟಕ ಮಾದರಿ ಎಂಬುದು ಈ ಕ್ಷಣದಲ್ಲಿ ಹುಟ್ಟಲು ಸಾಧ್ಯವಿಲ್ಲ. ಚರ್ಚೆ, ಜಗಳದಿಂದ ಹುಡುಕಾಟ ನಡೆಯಬೇಕಾಗಿದೆ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X