ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿನ ಸರ್ವೇ ನಂ.39ರಲ್ಲಿ 10.37 ಎಕರೆ, ಸರ್ವೇ ನಂ.34ರಲ್ಲಿ 14.32 ಎಕರೆ ಗೈರಾಣ ಜಮೀನು ಮತ್ತು ಸರ್ವೇ ನಂ.43ರಲ್ಲಿ 23.9 ಎಕರೆ ಅರಣ್ಯ ಇಲಾಖೆಯ ಜಮೀನು ಸೇರಿ ಒಟ್ಟು 48 ಎಕರೆ ಭೂಮಿ ಇದೆ. ಇದರ ಪೈಕಿ ಬಹುತೇಕ ಜಮೀನು ಒತ್ತುವರಿಯಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.
“ಈ ಜಮೀನಿನ ಮೇಲೆ ಕೆಲವರು ಕಣ್ಣು ಹಾಕಿ ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದೆ. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಆದರೆ, ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೂ, ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಒತ್ತುವರಿಯನ್ನು ತೆರುವಗೊಳಿಸುವಂತೆ ಸುಮಾರು ವರ್ಷಗಳಿಂದ ರೈತರು, ಕುರಿಗಾಹಿಗಳು, ದನಕಾಯಿವವರು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ, ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ವಡಗೇರಾ ತಹಸೀಲ್ದಾರರು, ಜಿಲ್ಲಾಧಿಕಾರಿಗಳು, ಸರ್ವೇ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ತೆರಳಿ ಪರಿಶೀಲನೆ ನಡೆಸಬೇಕು. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಸರ್ಕಾರಿ ಜಾಗಾದಲ್ಲಿ ಪಶುಗಳಿಗೆ ದನಕರುಗಳಿಗೆ, ಕುರಿಗಳಿಗೆ, ಮೇಯಲು ಗಡಿ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಆಂಜಿನೇಯ ನಾಯ್ಕೋಡಿ ಬೆಳಗೇರಿ. ನಿಂಗಪ್ಪ, ದೇವಪ್ಪ, ಹೊನ್ನಪ್ಪ, ಭೀಮಣ್ಣ, ನಿಂಗ ಸೇರಿದಂತೆ ಅನೇಕರು ಇದ್ದರು.