- ಮೊದಲ ಹಂತದ ಎತ್ತಿನಹೊಳೆ ಯೋಜನೆಗೆ ನೀರು ಹರಿಸಲಾಗುವುದು
- ‘ಯೋಜನೆಯ ಸಂಬಂಧ ಈಗಾಗಲೇ 114 ಸಾವಿರ ಕೋಟಿ ವೆಚ್ಚವಾಗಿದೆ’
100 ದಿನದಲ್ಲಿ 42 ಕಿ.ಮೀ ವರೆಗಿನ ಮೊದಲ ಹಂತದ ಎತ್ತಿನಹೊಳೆ ಯೋಜನೆಗೆ ನೀರು ಹರಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೊದಲ ಹಂತದ ಯೋಜನೆ ಸಾಗುವ ಜಾಗದಲ್ಲಿ 10 ಸಾವಿರ ಅಡಿ ಭೂಮಿ ಸಂಬಂಧ ವ್ಯಾಜ್ಯ ನಡೆಯುತ್ತಿದ್ದು ಇದಕ್ಕಾಗಿ ಮೂರು ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಬಗ್ಗೆಯೂ ಗಮನ ಹರಿಸುವಂತೆ ಹಾಗೂ ಕೂಡಲೇ ಪರಿಹಾರ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಹೇಳಿದರು.
“ಎತ್ತಿನಹೊಳೆ ಯೋಜನೆಯ ಸಂಬಂಧ ಈಗಾಗಲೇ 114 ಸಾವಿರ ಕೋಟಿ ವೆಚ್ಚವಾಗಿದೆ. ಮೊದಲ ಹಂತದ ನೀರು ಹರಿಸಲು ಅರಣ್ಯ ಇಲಾಖೆ, ಕಂದಾಯ ಮತ್ತು ವಿದ್ಯುತ್ ಸರಬರಾಜು ಇಲಾಖೆ ಸಮನ್ವಯದಿಂದ ಕೆಲಸ ಮಾಡುವ ಮೂಲಕ ಯೋಜನೆ ಸಾಕಾರಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ” ಎಂದು ತಿಳಿಸಿದರು.
“ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾದಲ್ಲಿ, ಪರ್ಯಾಯ ವ್ಯವಸ್ಥೆ ಬಗ್ಗೆಯೂ ಚಿಂತನೆ ನಡೆದಿದ್ದು, ಮುಂದಿನ ಹಂತದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರನ್ನು ಎತ್ತುವಳಿ ಮಾಡುವುದು ಪ್ರಥಮ ಆದ್ಯತೆಯಾಗಿದ್ದು, ನಂತರ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಅವರೇ ಪಾದಯಾತ್ರೆ ಮಾಡಿ, ಅವರೇ ನೀರು ಬಿಟ್ಟಿದ್ದಾರೆ, ಡಿಕೆ ಶಿವಕುಮಾರ್‌ದು ನವರಂಗಿ ಆಟ: ಸಿಟಿ ರವಿ ಕಿಡಿ
ಮಂಡ್ಯ ಪ್ರತಿಭಟನೆ ರಾಜಕೀಯ ಪ್ರೇರಿತ
”ತಮಿಳುನಾಡಿಗೆ 32 ಟಿಎಂಸಿ ನೀರು ಬಿಡಬೇಕು. ಈಗಾಗಲೇ 24 ಟಿಎಂಸಿ ನೀರು ಬಿಡಲಾಗಿದೆ. ಆದರೆ, ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ” ಎಂದು ದೂರಿದರು.
“ಉಳಿದ ಎಂಟು ಟಿಎಂಸಿ ನೀರು ಬಿಡಲು ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಈ ಬಗ್ಗೆ ಪ್ರತಿಪಕ್ಷಗಳ ಸಭೆಯನ್ನು ಕರೆಯಲಾಗಿದ್ದು, ರೈತರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದರು.