ಕನ್ನಡ ಪತ್ರಕರ್ತರ ಪಾಲಿಗೆ "ನಡೆದಾಡುವ ನಿಘಂಟು"ವೇ ಆಗಿದ್ದ ಜಿ.ವೆಂಕಸುಬ್ಬಯ್ಯನವರ ಹೆಸರಿನ ಈ ಪ್ರಶಸ್ತಿ ಕಲಾವಿದ, ಪತ್ರಕರ್ತ ಪಂಜುವಿನ ಸಾಧನೆಗೆ ಅರ್ಹವಾಗಿಯೇ ಸಂದಿದೆ. ಪ್ರಶಸ್ತಿ ಸಿಕ್ಕಿರುವುದು ಆತನ ಕಾರ್ಟೂನಿನ ಸಾಧನೆಗಲ್ಲ. ಆತ ಪ್ರಧಾನ ಸಂಪಾದಕನಾಗಿ ಹೊರ ತಂದಿರುವ "ಕುಂದಾಪ್ರ ಕನ್ನಡ ನಿಘಂಟಿ"ಗೆ.
ಗೆಳೆಯ ಪಂಜು ಗಂಗೊಳ್ಳಿಗೆ ಪ್ರತಿಷ್ಠಿತ 2023ರ “ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ” ಪ್ರಶಸ್ತಿ ಸಿಕ್ಕಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಒರಟು ಗೆರೆ ಮತ್ತು ಮೊನಚು ವ್ಯಂಗ್ಯದ ಮೂಲಕ ತನ್ನದೇ ಆದ ಪ್ರಭಾವ ಬೀರಿರುವ ಪಂಜು ರಾಜಕೀಯ ವಿಶ್ಲೇಷಕನೂ ಹೌದು. ಆತನ ಕಾರ್ಟೂನ್ ಗಳು ಸದಾ ಕಾಲ ರಾಜಕಾರಣಿಗಳ ನಡೆಗಳನ್ನು ಪ್ರೌಢ ನಿಕಷಕ್ಕೆ ಒಡ್ಡುತ್ತವೆ. ನಗು ಉಕ್ಕಿಸುವುದು ಮಾತ್ರವಲ್ಲ ನಮ್ಮಲ್ಲಿ ಹೊಸ ರಾಜಕೀಯ ಒಳನೋಟಗಳನ್ನೂ ಮೂಡಿಸುತ್ತವೆ.
ಕಾರ್ಟೂನಿಸ್ಟ್ ಗಳಿಗೆ ಸಾಮಾನ್ಯವಾಗಿ ಹೆಚ್ಚು ಬರೆಯುವ ಪ್ರಮೇಯ ಬರುವುದಿಲ್ಲ. ಅವರಿಗೆ ಕ್ಯಾಪ್ಷನ್ ಗಿಂತ ಗೆರೆಗಳೇ ಮುಖ್ಯ. ಕಾರ್ಟೂನ್ ಲೋಕದ ಈ ಬಹುಮುಖ್ಯ ಸಂವಿಧಾನವನ್ನು ಚಾಚೂತಪ್ಪದೆ ಪಾಲಿಸುವುದು ಪಂಜು ವಿಶೇಷ. ಹಾಗೆಂದು ಆತ ಭಯಂಕರ ಗಂಭೀರ ಮನುಷ್ಯನೇನೂ ಅಲ್ಲ. ಮೂರ್ನಾಲ್ಕು ವರ್ಷಗಳ ಕಾಲ ಅವನ ಜೊತೆ ಒಂದೇ ಮನೆಯಲ್ಲಿ ವಾಸಿಸಿದ ನನಗೆ ಎಂತಹ ಗಂಭೀರ ಸಂದರ್ಭದಲ್ಲೂ ನಗೆ ಉಕ್ಕಿಸುವ ಅವನ ಹಾಸ್ಯಪ್ರಜ್ಞೆಯ ಅನುಭವ ಚೆನ್ನಾಗಿದೆ.
ಧಾರಾಕಾರ ಮಳೆಯ ಮಳೆಗಾಲದ ಒಂದು ದಿನ ಪಂಜುವಿಗೆ ಫೋನ್ ಮಾಡಿ ಎಂದಿನ ಕುಂದಾಪ್ರ ಶೈಲಿಯಲ್ಲಿ “ಏನ್ ಗಡಾ.. ಎಂತ ಮಾಡ್ತಿದ್ದೀ” ಎಂದು ಕೇಳಿದ್ದೆ. “ಅಯ್ಯೊ… ಇಲ್ಲಿ ನನ್ ಬನಾನಾ ರಿಪಬ್ಲಿಕ್ ನೀರಲ್ಲಿ ಮುಳುಗಿದೆ ಮಾರಾಯ” ಎಂದ! ಯಾವ banana republic ಅಂತ ತಲೆ ಕೆರೆದುಕೊಂಡೆ. ಕೊನೆಗೆ ಗೊತ್ತಾದದ್ದು- ಆತ ಮುಂಬೈಯಿಂದ ಆಗಾಗ್ಗೆ ಊರಿಗೆ ಬಂದು ಮನೆ ಎದುರಿನ ಗದ್ದೆಯಲ್ಲಿ ಹಾಕಿದ್ದ 100- 200 ಬಾಳೆ ಗಿಡಗಳು ಕತ್ತಿನವರೆಗೆ ಮಳೆ ನೀರಲ್ಲಿ ಮುಳುಗಿ ಕೊಳೆತುಹೋದ ಕಥೆ! ಬಾಳೆ ಕೃಷಿ ಮಾಡಲು ಹೋಗಿ ಹದಿನೈದು ಸಾವಿರ ಕಳೆದುಕೊಂಡದ್ದೂ ಅವನ ಮಾತಿನಲ್ಲಿ ತಮಾಷೆಯೇ!
ಆದರೆ ಈಗ ಜಿ.ವಿ. ಭಾಷಾ ಸಮ್ಮಾನ ಪ್ರಶಸ್ತಿ ಸಿಕ್ಕಿರುವುದು ಆತನ ಕಾರ್ಟೂನಿನ ಸಾಧನೆಗಲ್ಲ. ಆತ ಪ್ರಧಾನ ಸಂಪಾದಕನಾಗಿ ಹೊರ ತಂದಿರುವ “ಕುಂದಾಪ್ರ ಕನ್ನಡ ನಿಘಂಟಿ”ಗೆ. ಕರಾವಳಿ ಕರ್ನಾಟಕದ ವಿಶಿಷ್ಟ ಭಾಷೆಯಾದ ಕುಂದಾಪ್ರ ಕನ್ನಡದಲ್ಲಿರುವ 10 ಸಾವಿರಕ್ಕೂ ಹೆಚ್ಚು ಶಬ್ದಗಳು ಮತ್ತು ಸಾವಿರಾರು ಒಗಟು, ನುಡಿಗಟ್ಟುಗಳು ಮತ್ತು ಹಾಡುಗಳ ಸಂಗ್ರಹವಿದು! ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸವನ್ನು ಪಂಜು ತನ್ನ ಗೆಳೆಯರ (ಸಿ.ಎ.ಪೂಜಾರಿ/ ರಾಮಚಂದ್ರ ಉಪ್ಪುಂದ) ಜೊತೆಗೂಡಿ ಮಾಡಿರುವುದು ನಿಜಕ್ಕೂ ದೊಡ್ಡ ಸಾಹಸವೇ. ಅದೂ 20 ವರ್ಷಗಳ ಕಾಲ ನಡೆಸಿದ ಅವಿರತ ಕ್ಷೇತ್ರ ಕಾರ್ಯದ ಫಲ.

ಕನ್ನಡ ಪತ್ರಕರ್ತರ ಪಾಲಿಗೆ “ನಡೆದಾಡುವ ನಿಘಂಟು”ವೇ ಆಗಿದ್ದ ಜಿ.ವೆಂಕಸುಬ್ಬಯ್ಯನವರ ಹೆಸರಿನ ಈ ಪ್ರಶಸ್ತಿ ಪಂಜುವಿನ ಸಾಧನೆಗೆ ಅರ್ಹವಾಗಿಯೇ ಸಂದಿದೆ. ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ರಾಜಾರಾಂ ತಲ್ಲೂರು ಈ ನಿಘಂಟನ್ನು ಪ್ರಕಾಶಕರಾಗಿ ಅತ್ಯುತ್ತಮವಾಗಿ ಹೊರ ತಂದಿದ್ದಾರೆ.
ಕಳೆದ 25 ವರ್ಷಗಳಿಂದ ದೂರದ ಮುಂಬೈಯಲ್ಲಿ “ಬಿಸಿನೆಸ್ ಇಂಡಿಯಾ”ದ ಕಾರ್ಟೂನಿಸ್ಟ್ ಆಗಿ ದುಡಿಯುತ್ತಿದ್ದರೂ ಪಂಜುವಿನ ಮೂರನೇ ಕಣ್ಣು ಸದಾ ಕರ್ನಾಟಕದ ರಾಜಕಾರಣಿಗಳ ಮೇಲಿರುವುದು ವಿಶೇಷ. ಇತರ ಕೆಲವರಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನುವ ಯಾವ ಫಲಾನುಭವಿ ಹಂಗುಗಳನ್ನೂ ಪಂಜು ಇಟ್ಟುಕೊಂಡಿಲ್ಲ. ಹಾಗೆಂದೇ ಆತ ಕರ್ನಾಟಕದ ರಾಜಕಾರಣಿಗಳ ಕುರಿತು ಲೇಖನಗಳನ್ನೂ, ವಿಡಂಬನೆಗಳನ್ನೂ ಬರೆಯಬಲ್ಲ. ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ ಪಂಜು ಬರೆಯುತ್ತಿರುವ ಕಾಲಂ ವಿಶಿಷ್ಟ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಪರಿಚಯಿಸುತ್ತಾ ಅತ್ಯಂತ ಜನಪ್ರಿಯ ಕಾಲಂ ಆಗಿದೆ.
ಭಾಷೆಯ ಕುರಿತು ಮೋಹ ಇರುವಂತೆಯೇ ಜನರ ದೇಹಭಾಷೆಯ ಕುರಿತ ಚಿಕಿತ್ಸಕ ದೃಷ್ಟಿಯೂ ಪಂಜುವಿನ ವಿಶೇಷಗಳಲ್ಲೊಂದು. ವಾಕಿಂಗ್ ಹೋಗುವಾಗ ಸುತ್ತ ಮುತ್ತ ಓಡಾಡುವ ಜನರ ದೇಹಭಾಷೆಯ ಕುರಿತ ಆತನ ಗ್ರಹಿಕೆ ಎಷ್ಟೋ ಸಲ ನನ್ನನ್ನು ಅಚ್ಚರಿಗೆ ದೂಡಿದ್ದುಂಟು. ಜನರ ನಡೆಯುವ, ಮಾತನಾಡುವ ಶೈಲಿ ಮತ್ತು ಹಾವಭಾವಗಳನ್ನು ಕಣ್ಣಲ್ಲೇ scan ಮಾಡುವ ಪಂಜು ತನ್ನ ರೇಖೆಗಳಲ್ಲಿ ಅವುಗಳಿಗೆ ಜೀವ ತುಂಬುವುದುಂಟು.
ಹಾಗೆ ನೋಡಿದರೆ ಪಂಜು ಕುಂದಾಪುರದ ಭಂಡಾರ್ಕಾರ್ಸ್ ನಲ್ಲಿ ಡಿಗ್ರಿ ಮಾಡಿದ್ದು ಬಿಎಸ್ಸಿ. ಆಸಕ್ತಿಯಿಂದ ಕೃಷಿಕನೋ, ವಿಜ್ಞಾನಿಯೋ ಆಗಬೇಕಿದ್ದ ಆತ ವಡ್ಡರ್ಸೆ ರಘುರಾಮ ಶೆಟ್ಟರ ಕನ್ನಡಕದೊಳಗಿನ ಚಿಕಿತ್ಸಕ ಕಣ್ಣಿಗೆ ಬಿದ್ದು ಕಾರ್ಟೂನಿಸ್ಟ್ ಆಗಿ “ಮುಂಗಾರು” ಪತ್ರಿಕೆ ಸೇರಿದ. ವರ್ಷ ಮುಗಿಯುವುದರೊಳಗೆ ಮುಂಗಾರು ಮಳೆಯಲ್ಲಿ ನೆನೆದು ಶೀತ ಹೆಚ್ಚಾಗಿ ಧಾರವಾಡದಲ್ಲಿ ಚಂದ್ರಶೇಖರ ಪಾಟೀಲರು ಶುರು ಮಾಡಿದ ವಾರಪತ್ರಿಕೆ ಸಂಕ್ರಮಣಕ್ಕೆ ಹೋದ. ಅಲ್ಲಿ ಏಳು ತಿಂಗಳಲ್ಲೇ ಸಂಬಳ ಸಿಂಬಳದಂತಾಗಿ ಉಷ್ಣದ ಉರಿ ಜಾಸ್ತಿಯಾಗಿ ಬೆಂಗಳೂರಿಗೆ ಬಂದು ಲಂಕೇಶ್ ಪತ್ರಿಕೆಯಲ್ಲಿ ತಳವೂರಿದ. ಲಂ.ಪ.ದಲ್ಲಿ ನಾಲ್ಕು ವರ್ಷಗಳ ಧಂ-ಪಥ್ಯ ಚೆನ್ನಾಗಿಯೇ ಇತ್ತು. ಪಂಜು ಕರ್ನಾಟಕದ ಗಮನಾರ್ಹ ಕಾರ್ಟೂನಿಸ್ಟ್ ಆಗಿ ಬೆಳೆದದ್ದು ಅಲ್ಲಿಯೇ.
ಇದನ್ನು ಓದಿದ್ದೀರಾ?: ಏರುತ್ತಿರುವ ರಾಹುಲ್ ಜನಪ್ರಿಯತೆಗೆ ಮೋದಿ ಆತಂಕಗೊಂಡಿದ್ದಾರೆಯೇ? ಅಂಕಿ-ಅಂಶ ಏನು ಹೇಳುತ್ತದೆ?
ಆದರೆ ಅದ್ಯಾಕೋ ಬಸವನಗುಡಿಯ ಗ್ರಹಗತಿಗಳ ಚಲನೆ ವಕ್ರವಾಗಿ, ಮೇಷ್ಟ್ರ ಕಚೇರಿಯ ಮುಂದೆಯೇ ಸತ್ಯ, ಗುಬ್ಬಿ, ವಿಜಯಮ್ಮ ಮತ್ತಿತರರ ಜೊತೆಗೆ ಎರಡು ದಿನ ಶಾಮಿಯಾನದ ಪ್ರತಿಭಟನೆ ನಡೆದು ಬರಖತ್ತಾಗದೆ, ಪಂಜು ಜಿಗಿದದ್ದು ದೂರದ ಮುಂಬೈಗೆ.
ಇಂಗ್ಲಿಷ್ ಪತ್ರಿಕೋದ್ಯಮದ ಮೊದಲ ತಾಣ – ದಿ ಸಂಡೇ ಅಬ್ಸರ್ವರ್. ಮುಂಬೈಗೆ ಹೋದಾಗ ಹೆಸರಲ್ಲಿದ್ದ ಗಂಗೊಳ್ಳಿಯನ್ನು ಇಂಗ್ಲಿಷ್ ನಲ್ಲಿ ಗಂಗೂಲಿ ಎಂದಾಗಿಸಿ ಅಲ್ಲಿದ್ದ ಬಂಗಾಲಿಗಳಿಗೆ ಬೆಪ್ಪು ಹಿಡಿಸಿದ್ದೂ ಉಂಟು! ಅಬ್ಸರ್ವರ್ ಬಿಟ್ಟು ಹೋದದ್ದು “ಬಿಸಿನೆಸ್ ಇಂಡಿಯಾ”ಗೆ. ಅಲ್ಲೀಗ ವೃತ್ತಿಯ ಬೆಳ್ಳಿಹಬ್ಬದ ಸಂಭ್ರಮ ದಾಟಿದೆ.
ಮೃದು ಮಾತು, ಸಣ್ಣದೊಂದು ತುಂಟ ನಗು, ಮನುಷ್ಯಪ್ರೀತಿಯ ನಡವಳಿಕೆ ಪಂಜುವಿಗೆ ಅಪಾರ ಸ್ನೇಹಬಳಗವನ್ನು ಒದಗಿಸಿದೆ. ಈಗ ಮಾಗಿ ಮಾಗುವ ಹೊತ್ತಿಗೆ ಪ್ರಶಸ್ತಿಗಳೂ ಸರದಿಯಲ್ಲಿ ಹುಡುಕಿಕೊಂಡು ಬರುತ್ತಿವೆ.
ಗಂಗೊಳ್ಳಿಯೆಂಬ ಸಣ್ಣ ಊರಿನಿಂದ ಹೊರಟು ಕನ್ನಡ- ಇಂಗ್ಲಿಷ್ ಪತ್ರಿಕೆಗಳಲ್ಲಿ ದೊಡ್ಡ ಸಾಧನೆ ಮಾಡಿರುವ ಪಂಜು, ಉನ್ನತ ವಿದ್ಯಾಭ್ಯಾಸಕ್ಕೆ ಪ್ಯಾರಿಸ್ ಗೆ ಹೊರಟ ಮಗನನ್ನು ಮುಂಬೈಯಲ್ಲಿ ವಿಮಾನ ಹತ್ತಿಸಿ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಾಗಿದೆ. ಇಂದು (ಆಗಸ್ಟ್ 23) ಸಂಜೆ ಜಯನಗರದ ಜಿವಿ ಶತಾಬ್ಧಿ ಸ್ಮಾರಕ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ. ಅ.ರಾ.ಮಿತ್ರ, ನಾಗೇಶ ಹೆಗಡೆ ಮತ್ತು ಕಥೆ ಕೂಟದ ಜೋಗಿ ಮತ್ತಿತರರೂ ಇರುತ್ತಾರೆ. ಗೆಳೆಯನ ಸಂಭ್ರಮ ನನ್ನದೂ ಹೌದು.

ಬಿ ಎಂ ಹನೀಫ್
ಹಿರಿಯ ಪತ್ರಕರ್ತ, ಲೇಖಕ