ಕಳೆದ ಎರಡು ತಿಂಗಳಿನಿಂದ ಭಾರೀ ಏರಿಕೆ ಕಂಡಿದ್ದ ಟೊಮೆಟೊ ಬೆಲೆ ಈಗ ಕುಸಿತ ಕಂಡಿದೆ. ಜುಲೈ ತಿಂಗಳಿನಲ್ಲಿ 2,000 ರೂಗೆ. ಮಾರಾಟವಾಗಿದ್ದ 15 ಕೆ.ಜಿಯ ಟೊಮೆಟೊ ಬಾಕ್ಸ್, ಈಗ 150 ರಿಂದ 500 ರೂ.ವರೆಗೆ ಮಾರಾಟವಾಗುತ್ತಿದೆ. ಟೊಮೆಟೊ ಬೆಲೆ ಇಳಿಕೆ ಕಂಡಿರುವುದು ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೆ, ಹೊಸದಾಗಿ ಟೊಮೆಟೊ ಬಿತ್ತನೆ ಮಾಡಿರುವ ರೈತರು ಕಂಗಾಲಾಗಿದ್ದಾರೆ.
ದೇಶಾದ್ಯಂತ ಟೊಮೆಟೊ ಪೂರೈಕೆ ಕಡಿಮೆಯಾಗಿದ್ದರಿಂದ ಬೆಲೆ ಏರಿಕೆಯಾಗಿತ್ತು. ಕೋಲಾರ ಎಪಿಎಂಸಿಯಿಂದ ದೇಶದ ನಾನಾ ರಾಜ್ಯಗಳಿಗೆ ಟೊಮೆಟೊ ಪೂರೈಕೆಯಾಗುತ್ತಿತ್ತು. ಪರಿಣಾಮವಾಗಿ ಕೆ.ಜಿ ಟೊಮೆಟೊ ಬೆಲೆ 200 ರೂ. ಗಡಿ ದಾಟಿತ್ತು. ಈ ನಡುವೆ, ನೇಪಾಳದಿಂದಲೂ ಟೊಮೆಟೊ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಲ್ಲದೆ, ಹಲವಾರು ರೈತರು ಟೊಮೆಟೊ ಬೆಳೆದಿದ್ದರು. ಇದೆಲ್ಲದರ ಪರಿಣಾಮ ಟೊಮೆಟೊ ಧಾರಣೆ ಹೆಚ್ಚಾಗಿದ್ದು, ಬೆಲೆ ನಿಯಂತ್ರಣಕ್ಕೆ ಬಂದಿದೆ.
ಅಡುಗೆಯಲ್ಲಿ ಟೊಮೆಟೊ ಬಳೆಸುವುದೇ ಸವಾಲೆಂಬಂತೆ ಭಾವಿಸಿದ್ದ ಗ್ರಾಮಕರು ಟೊಮೆಟೊ ಖರೀದಿಗೆ ಮುಂದಾಗಿದ್ದಾರೆ. “ನಾವು ತಿಂಗಳಿಗೆ 12,000 ರೂ. ಸಂಪಾದಿಸುತ್ತೇವೆ. ಆ ಹಣದಲ್ಲಿಯೇ ಎಲ್ಲವನ್ನೂ ನಿಭಾಯಿಸಬೇಕು. ಹೀಗಾಗಿ, ಕೆ.ಜಿ ಟೊಮೆಟೊಗೆ 200 ರೂ. ಭರಿಸಲಾಗದೆ, ಟೊಮೆಟೊ ಬಳಕೆಯನ್ನೇ ನಿಲ್ಲಿಸಿದ್ದೆವು. ಇದೀಗ,30 ರೂ.ಗೆ ಕೆ.ಜಿ ಟೊಮೆಟೊ ದೊರೆಯುತ್ತಿದೆ. ಮತ್ತೆ ಟೊಮೆಟೊ ಬಳಸಲು ಆರಂಭಿಸಿದ್ದೇವೆ” ಎಂದು ಮೈಸೂರಿನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಶ್ರೀರಂಗಪಟ್ಟಣದ ಇಂದ್ರಮ್ಮ ಅವರು ಈದಿನ.ಕಾಮ್‌ಗೆ ತಿಳಿಸಿದ್ದಾರೆ.
“ಶ್ರಾವಣ ಮಾಸದಲ್ಲಿ ಮಗಳ ಮದುವೆ ಮಾಡಬೇಕೆಂದು ನಿರ್ಧರಿಸಿದ್ದೆವು. ಆದರೆ, ಕಳೆದ ತಿಂಗಳು ಟೊಮೆಟೊ ಬೆಲೆ ಏರಿಕೆಯಾಗಿದ್ದನ್ನು ಕಂಡು, ಮದುವೆಯ ಅಡುಗೆಗಾಗಿ ನಾವು ಅಂದುಕೊಂಡಿದ್ದ ಅಡುಗೆ ಬಜೆಟ್‌ನಲ್ಲಿ ಹೆಚ್ಚು ಹಣ ಟೊಮೆಟೊಗೆ ಖರ್ಚಾಗಿಬಿಡುತ್ತದೆ ಎಂಬ ಆತಂಕ ಉಂಟಾಗಿತ್ತು. ಇದೀಗ, ಟೊಮೆಟೊ ದರ ಇಳಿದಿರುವುದು ಕೊಂಚ ಸಮಾಧಾನ ತಂದಿದೆ” ಎಂದು ಚನ್ನರಾಯಪಟ್ಟಣದಲ್ಲಿ ಬಡಗಿ ಕೆಲಸ ಮಾಡುವ ನಾಗರಾಜ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಎತ್ತಿನಹೊಳೆ | 100 ದಿನದಲ್ಲಿ 42 ಕಿ.ಮೀ ವರೆಗೆ ನೀರು ಹರಿಯಲಿದೆ: ಡಿಕೆ ಶಿವಕುಮಾರ್
ಆದರೆ, ಕೃಷಿಯಲ್ಲಿ ಎಂದಿಗೂ ನಿರೀಕ್ಷಿತ ಲಾಭ ಕಾಣದಿದ್ದ ರೈತರು, ಟೊಮೆಟೊ ಬೆಲೆ ಏರಿಕೆಯಾಗಿದ್ದರಿಂದ ತಾವು ಟೊಮೆಟೊ ಬೆಳೆಯಲು ಮುಂದಾಗಿದ್ದರು. ಹಲವಾರು ರೈತರು ತಮ್ಮ ಜಮೀನಿನಲ್ಲಿ ಟೊಮೆಟೊ ಸಸಿಗಳನ್ನು ನೆಟ್ಟಿದ್ದರು. ಇದೇ ಸಂದರ್ಭದಲ್ಲಿ ಟೊಮೆಟೊ ಬೆಲೆ ಕುಸಿದಿರುವುದು ಅವರೆಲ್ಲರಲ್ಲಿ ಮತ್ತೆ ನಿರಾಸೆ ಮೂಡಿಸಿದೆ.
“ಕಳೆದ ತಿಂಗಳು ಟೊಮೆಟೊ ಬೆಲೆ ಏರಿಕೆಯಾಗಿದ್ದಾಗ, ಇನ್ನೂ ಒಂದೆರಡು ತಿಂಗಳು ಇದೇ ದರ ಇರುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಅದನ್ನು ನಂಬಿ, ನಾವೂ ಟೊಮೆಟೊ ಬೆಳೆ ಬೆಳೆದಿದ್ದೇವೆ. ಆದರೆ, ಇದೀಗ ಬೆಲೆ ಕುಸಿತ ಕಂಡಿದೆ. ಜಮೀನಿನಲ್ಲಿ ಟೊಮೆಟೊ ಕಾಯಿಗಟ್ಟಿ, ಹಣ್ಣಾಗುವ ಹೊತ್ತಿಗೆ ಮತ್ತಷ್ಟು ಬೆಲೆ ಕುಸಿತಕಂಡರೆ, ಹಾಕಿರುವ ಬಂಡವಾಳವೂ ಕೈಸೇರುವುದು ಕಷ್ಟವಿದೆ. ನಷ್ಟ ಆತಂಕ ಎದುರಾಗಿದೆ” ಎಂದು ರಾಮನಗರ ಜಿಲ್ಲೆಯ ರೈತ ಪ್ರಭಾಕರ್ ಆಂತಕ ವ್ಯಕ್ತಪಡಿಸಿದ್ದಾರೆ.
ರೈತರು ಮಿಶ್ರ ಬೆಳೆ ಪದ್ಧತಿ ಅನುಸರಿಸಿದರೆ ಒಳ್ಳೆಯದು