ಸುಮಲತಾ, ಪಿ ಸಿ ಮೋಹನ್ ಅವರಿಗಾಗಲಿ, ರಾಜ್ಯದ ಬಿಜೆಪಿ ಸಂಸದರಿಗಾಗಲಿ ಕಾವೇರಿ ವಿವಾದದ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಅವರು ಮಾಡಬೇಕಿರುವುದು ಬೀದಿ ಹೋರಾಟವಲ್ಲ; ಸಂಸದರ ನಿಯೋಗದೊಂದಿಗೆ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಜನರ ಪರವಾಗಿ ಮಾತನಾಡುವುದು ಮತ್ತು ವಾಸ್ತವ ಪರಿಸ್ಥಿತಿ ವಿವರಿಸುವುದು. ಇಲ್ಲದಿದ್ದರೆ ಅವರ ಪ್ರತಿಭಟನೆ ಕೇವಲ ಮಂಡ್ಯದ ರೈತರನ್ನು ಮರಳು ಮಾಡುವ ಗಿಮಿಕ್ ಎನ್ನಿಸಿಕೊಳ್ಳುತ್ತದೆ.
ಕಾವೇರಿ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ. ಕಾವೇರಿ ಜಲವಿವಾದ ನ್ಯಾಯಮಂಡಳಿಯ ತೀರ್ಪಿನಂತೆ ಕರ್ನಾಟಕವು ತಮಿಳುನಾಡಿಗೆ ಪ್ರತಿನಿತ್ಯ 24 ಕ್ಯೂಸೆಕ್ ನೀರು ಹರಿಸಲು ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದೆ. ಅದರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಪ್ರತ್ಯೇಕ ಪೀಠ ರಚನೆ ಮಾಡಿದ್ದು, ಆಗಸ್ಟ್ 25ರಂದು ವಿಚಾರಣೆ ನಡೆಯಲಿದೆ.
ವಾಡಿಕೆಯಂತೆ ಮಳೆಯಾದರೆ, ಕಾವೇರಿ ಮತ್ತು ಅದರ ಉಪನದಿಗಳ ಜಲಾನಯನ ಪ್ರದೇಶದಲ್ಲಿ 740 ಟಿಎಂಸಿ ಅಡಿಯಷ್ಟು ನೀರು ಲಭ್ಯವಾಗಲಿದೆ. ಅದರಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿಯು ಕರ್ನಾಟಕಕ್ಕೆ 284.75 ಟಿಎಂಸಿ, ತಮಿಳುನಾಡಿಗೆ 404.25 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ನೀರು ಹಾಗೂ ಪುದುಚೇರಿಗೆ 7 ಟಿಎಂಸಿ ಹಂಚಿಕೆ ಮಾಡಿತ್ತು. ತಮಿಳುನಾಡಿಗೆ ಹಂಚಿಕೆ ಮಾಡಿದ ನೀರಿನ ಪೈಕಿ 227 ಟಿಎಂಸಿ ಅಡಿಯಷ್ಟು ನೀರು ತಮಿಳುನಾಡಿನಲ್ಲೇ ಲಭ್ಯವಿರುತ್ತದೆ. ಹಾಗಾಗಿ 177.25 ಟಿಎಂಸಿ ಅಡಿಯಷ್ಟು ನೀರನ್ನು ಕರ್ನಾಟಕ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರ ಉಸ್ತುವಾರಿ ನೋಡಿಕೊಳ್ಳಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸಿತ್ತು.
ಕರ್ನಾಟಕವು ತಮಿಳುನಾಡಿಗೆ ಬಿಳಿಗುಂಡ್ಲು ಮೂಲಕ 177.25 ಟಿಎಂಸಿ ನೀರು ಬಿಡಬೇಕು. ಅದರ ಪೈಕಿ 123.14 ಟಿಎಂಸಿ ನೀರನ್ನು ಜೂನ್ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಬಿಡಬೇಕು ಎನ್ನುವುದು ನಿಯಮ. 2018ರಿಂದ 2022ರವರೆಗೆ ನಿಗದಿಗಿಂತ ಹೆಚ್ಚಿನ ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿದಿದೆ. ಆದರೆ, ಈ ಬಾರಿ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ.
ಜೂನ್ 1 ಮತ್ತು ಆಗಸ್ಟ್ 17ರ ನಡುವೆ ರಾಜ್ಯದಲ್ಲಿ 587.9ಮಿಮೀನಷ್ಟು ಸರಾಸರಿ ಮಳೆ ಬೀಳಬೇಕಿತ್ತು. ಆದರೆ, ಈ ಅವಧಿಯಲ್ಲಿ ಬಿದ್ದಿರುವುದು ಕೇವಲ 499.4 ಮಿಮೀ ಮಳೆ ಮಾತ್ರ. ಅಂದರೆ ಶೇ.15ರಷ್ಟು ಮಳೆಯ ಕೊರತೆ. ರಾಜ್ಯದಲ್ಲಿ ಆಗಸ್ಟ್ನಲ್ಲಿ ಬೀಳಬೇಕಿದ್ದ ಸರಾಸರಿ ಮಳೆಯ ಪ್ರಮಾಣ 134.8 ಮಿಮೀ. ಆದರೆ, ಬಿದ್ದಿರುವುದು ಕೇವಲ 29.6 ಮಿಮೀ ಮಾತ್ರ. ಈ ಅವಧಿಯ ಮಳೆ ಕೊರತೆಯ ಪ್ರಮಾಣ ಶೇ.78. ಕರ್ನಾಟಕಕ್ಕೆ ಹೋಲಿಸಿದರೆ, ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಉತ್ತಮ ಮಳೆಯಾಗಿದೆ.
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪರೂಪವಾಗಿದ್ದ ತೀವ್ರ ಬರಗಾಲದ ಸೂಚನೆಯನ್ನು ತಜ್ಞರು ನೀಡಿದ್ದಾರೆ. 16ಕ್ಕೂ ಹೆಚ್ಚು ಜಿಲ್ಲೆಗಳ ಸುಮಾರು 120 ತಾಲ್ಲೂಕುಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ. ಇಂಥ ಸಂಕಷ್ಟದ ಸ್ಥಿತಿಯಲ್ಲಿ ನಿಗದಿತ ಪ್ರಮಾಣದಷ್ಟೇ ನೀರು ಬಿಡಲು ಹೇಗೆ ಸಾಧ್ಯ ಎನ್ನುವುದು ರಾಜ್ಯದ ಪ್ರಶ್ನೆ.
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಳೆ ಕೊರತೆಯಾದರೆ ಏನು ಮಾಡಬೇಕು ಎನ್ನುವುದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿವೇಚನೆಯ ಮೇರೆಗೆ ತೀರ್ಮಾನವಾಗಬೇಕೇ ಹೊರತು ಅದಕ್ಕೆ ನ್ಯಾಯಮಂಡಳಿ ಯಾವುದೇ ಸಂಕಷ್ಟ ಸೂತ್ರವನ್ನು ನೀಡಿಲ್ಲ. ಇದು ಈಗ ಕರ್ನಾಟಕದ ಪಾಲಿಗೆ ಸಂಕಷ್ಟ ತಂದೊಡ್ಡಿದೆ.
ಕಾವೇರಿ ಕರ್ನಾಟಕದಲ್ಲಿ ಹುಟ್ಟಿ, ತಮಿಳುನಾಡಿನಲ್ಲಿ ಹರಿದು, ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ಹುಟ್ಟಿದರೂ ತಮಿಳುನಾಡಿನಲ್ಲಿ ಹೆಚ್ಚು ದೂರು ಹರಿಯುತ್ತದೆ ಎನ್ನುವ ಕಾರಣಕ್ಕೆ ತಮಿಳುನಾಡಿನ ಕಾವೇರಿ ನೀರಿನ ಮೇಲೆ ಹೆಚ್ಚು ಹಕ್ಕು ಸ್ಥಾಪಿಸುತ್ತಿದೆ. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವಂತೆ ಮಾಡಲು ರಾಜ್ಯದಲ್ಲಿ ಸರ್ಕಾರ ನಡೆಸಿದ ಯಾವ ಪಕ್ಷದಿಂದಲೂ ಸಾಧ್ಯವಾಗಲೇ ಇಲ್ಲ. ನೀರಾವರಿಯ ವಿಚಾರದಲ್ಲಿ ನಿಪುಣರೆಂದೇ ಹೆಸರಾಗಿದ್ದ ಎಚ್ ಡಿ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾಗಿ ಅಧಿಕಾರ ನಡೆಸಿದರು. ಕಾವೇರಿ ಸೀಮೆಯ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಅಧಿಕಾರ ನಡೆಸಿದರು. ಅದೇ ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿದ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ಆದರೆ, ಇವರ್ಯಾರಿಂದಲೂ ಕಾವೇರಿ ಕೊಳ್ಳದ ರೈತರಿಗೆ, ರಾಜ್ಯದ ಜನರಿಗೆ ನ್ಯಾಯ ದೊರಕಿಸಲು ಸಾಧ್ಯವಾಗಲೇ ಇಲ್ಲ ಎನ್ನುವುದು ವಿಪರ್ಯಾಸ.
ರಾಜ್ಯದಲ್ಲಿ ಅನೇಕ ಬಾರಿ ಕಾವೇರಿ ವಿವಾದ ಭುಗಿಲೆದ್ದಿದೆ. ಅದರ ಹೆಸರಿನಲ್ಲಿ ಸರ್ಕಾರಗಳು ಪತನಗೊಂಡಿವೆ; ಅದರ ಕಾರಣಕ್ಕೆ ಸಂಸದರು, ಶಾಸಕರು ಗೆದ್ದಿದ್ದಾರೆ. ಹಾಗೆಯೇ ಸೋತಿದ್ದಾರೆ. ಆದರೆ, ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ನಲ್ಲಿ ತನ್ನೆಲ್ಲ ಶಕ್ತಿ ಸಾಮರ್ಥ್ಯಗಳೊಂದಿಗೆ ತನ್ನ ಹಕ್ಕು ಮಂಡನೆಯಲ್ಲಿ ವಿಫಲವಾಗಿದೆ ಎನ್ನುವುದು ವಾಸ್ತವ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಂದೂ ರಾಜ್ಯದ ಹಿತವನ್ನು ಕಾಯ್ದ ಉದಾಹರಣೆಯೇ ಇಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿರಲಿ, ಬಿಜೆಪಿ ಸರ್ಕಾರವಿರಲಿ, ತಮಿಳುನಾಡು ಲಾಬಿ ಮಾಡುವುದರಲ್ಲಿ ಮುಂದಿರುತ್ತದೆ ಮತ್ತು ತಮಿಳುನಾಡಿಗೆ ಹೆಚ್ಚಿನ ಲಾಭವಾಗುತ್ತದೆ.
ಸದ್ಯ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ರಾಜ್ಯದಲ್ಲಿ 28 ಸಂಸದರ ಪೈಕಿ 25 ಮಂದಿ ಬಿಜೆಪಿಯವರೇ ಇದ್ದಾರೆ. ಮಂಡ್ಯದ ಸುಮಲತಾ ಬಿಜೆಪಿ ಬೆಂಬಲಿತ ಸಂಸದೆ. ಆದರೆ, ಸಂಸದರಾದ ಸುಮಲತಾ, ಪಿ ಸಿ ಮೋಹನ್ ಮಂಡ್ಯದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡುವ ನಾಟಕ ಮಾಡಿದ್ದಾರೆ. ಕಾವೇರಿ ವಿಚಾರದಲ್ಲಿ ಮಂಡ್ಯದ ಜನರನ್ನು ಸುಲಭವಾಗಿ ಕೆರಳಿಸಬಹುದು ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಬಹುದು ಎಂದು ಅವರಿಬ್ಬರು ಭಾವಿಸಿದಂತಿದೆ. ಈ ವಿಚಾರದಲ್ಲಿ ನಿಜಕ್ಕೂ ಸುಮಲತಾ ಅವರಿಗಾಗಲಿ, ಬಿಜೆಪಿ ಸಂಸದರಿಗಾಗಲಿ ನಿಜವಾದ ಕಾಳಜಿ ಇದ್ದರೆ, ಅವರು ಮಾಡಬೇಕಿರುವುದು ಬೀದಿ ಹೋರಾಟವಲ್ಲ; ಸಂಸದರ ನಿಯೋಗದೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಜನರ ಪರವಾಗಿ ಮಾತನಾಡುವುದು ಮತ್ತು ವಾಸ್ತವ ಪರಿಸ್ಥಿತಿ ವಿವರಿಸುವುದು. ಇಲ್ಲದಿದ್ದರೆ ಅವರ ಪ್ರತಿಭಟನೆ ಕೇವಲ ಮಂಡ್ಯದ ರೈತರನ್ನು ಮರಳು ಮಾಡುವ ಗಿಮಿಕ್ ಎನ್ನಿಸಿಕೊಳ್ಳುತ್ತದೆ. ಆದರೆ, ಮೋದಿಯವರ ಮುಂದೆ ಎಂದೂ ಧೈರ್ಯವಾಗಿ ಮಾತಾಡಿ ಅಭ್ಯಾಸವೇ ಇಲ್ಲದ ನಮ್ಮ ರಾಜ್ಯದ 25 ಸಂಸದರಿಂದ ಈ ಕೆಲಸ ಆಗುವುದೇ? ಓಟು ಹಾಕಿ ಗೆಲ್ಲಿಸಿದ ರಾಜ್ಯದ ಜನರ ನೆರವಿಗೆ ನಿಲ್ಲುವರೇ ಬಿಜೆಪಿಯ 25 ಸಂಸದರು?
ಇನ್ನು ಈ ವಿಚಾರವಾಗಿ ಬುಧವಾರ ಸರ್ವಪಕ್ಷ ಸಭೆ ಕರೆಯಲಾಗಿತ್ತು. ಅದರಲ್ಲಿ ಪ್ರಧಾನಿ ಮೋದಿ ಬಳಿಗೆ ಸರ್ವಪಕ್ಷ ನಿಯೋಗ ಒಯ್ಯಲು ಹಾಗೂ ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ಮುಂದುವರೆಸಲು ತೀರ್ಮಾನಿಸಲಾಗಿದೆ.
ಸದ್ಯದ ಕೇಂದ್ರ ಸರ್ಕಾರದ ಮಟ್ಟಿಗೆ ತಮಿಳುನಾಡು ಮತ್ತು ಕರ್ನಾಟಕದ ಆಡಳಿತ ಪಕ್ಷಗಳು ವಿರೋಧಿ ಬಣದಲ್ಲಿ ಗುರುತಿಸಿಕೊಂಡಿವೆ. ಅದೇನೇ ಇದ್ದರೂ ಅಂತರ ರಾಜ್ಯ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕಾದುದು ಒಕ್ಕೂಟ ಸರ್ಕಾರದ ಜವಾಬ್ದಾರಿ. ಅದರ ಜೊತೆ ಜೊತೆಗೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಅಂಕಿಅಂಶ, ವಾಸ್ತವಾಂಶ ಸಮೇತ ವಾದ ಮಂಡಿಸಿ ರಾಜ್ಯದ ಜನರ ಹಿತ ಕಾಯಬೇಕಾಗಿದೆ. ಸದ್ಯಕ್ಕೆ ಕರ್ನಾಟಕ್ಕೆ ಇರುವುದು ಇವೆರಡೇ ದಾರಿ. ಮಂಡ್ಯ ಭಾಗದ ರೈತರ ಬೇಸಾಯ ಹಾಗೂ ಬೆಂಗಳೂರಿನ ಜನರ ಕುಡಿಯುವ ನೀರಿನ ದೃಷ್ಟಿಯಿಂದ ರಾಜ್ಯದ ಪಾಲಿಗೆ ಇದು ನಿರ್ಣಾಯಕ ಹೋರಾಟವಾಗಿದೆ.
