ನೂರು ದಿನ ಕಳೆದರೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಒಂದೇ ಒಂದು ಸಾರ್ವಜನಿಕ ಸಭೆ ನಡೆಸಿಲ್ಲ. ಇತ್ತ ಸಾರ್ವಜನಿಕರ ಕೈಗೂ ಸಿಗುತ್ತಿಲ್ಲ. ಅತ್ತ ಉದ್ದಿಮೆದಾರರ ಕೈಗೂ ಸಿಗುತ್ತಿಲ್ಲ. ಕೇವಲ ಹೆಸರಿಗೆ ಸಚಿವರಾಗಿರುವವರನ್ನು ಸಂಪುಟದಲ್ಲಿ ಏಕೆ ಇಟ್ಟುಕೊಂಡಿದ್ದೀರಿ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಮೋಹನ್ ದಾಸರಿ, “ಹಿಂದಿನ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಖಾತೆಯನ್ನೇ ರದ್ದುಪಡಿಸಿದ್ದರೂ, ಆ ಖಾತೆಗೆ ಸಚಿವ ಶರಣಬಸಪ್ಪ ದರ್ಶನಾಪುರ ಅವರನ್ನು ನೇಮಕಗೊಳಿಸಿರುವುದು ಅನುಮಾನಕ್ಕೆ ಆಸ್ಪದ ಕೊಡುವಂತಿದೆ. ವಿಧಾನಸೌಧದಲ್ಲಿನ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಅಧಿಕೃತ ಕೊಠಡಿಯ ಬಾಗಿಲಿಗೆ ಅಳವಡಿಸಿದ್ದ ಫಲಕವು ಗೊಂದಲ ಮೂಡಿಸುವಂತಿದೆ” ಎಂದರು.
“ರಾಜ್ಯ ಸರ್ಕಾರದ ಸಚಿವರುಗಳ ಖಾತೆ ಹಂಚಿಕೆಯ ಸಂಧರ್ಭದಲ್ಲಿ ರಾಜ್ಯಪಾಲರಿಗೆ ಸಲ್ಲಿಸಿದ ಖಾತೆ ಹಂಚಿಕೆಯ ವಿವರಗಳಲ್ಲಿ ಶರಣಬಸಪ್ಪ ದರ್ಶನಾಪುರ ಅವರನ್ನು ಸಾರ್ವಜನಿಕ ಉದ್ದಿಮೆ ಖಾತೆಯ ಸಚಿವರಾಗಿ ನೇಮಿಸಿ ಪಟ್ಟಿ ಕಳಿಸಿದ್ದು, ಈ ಬಗ್ಗೆ ರಾಜ್ಯಪಾಲರು ಸರ್ಕಾರದ ಸಚಿವರ ಖಾತೆ ಹಂಚಿಕೆಯ ಅಧಿಸೂಚನೆ ಹೊರಡಿಸಿದ್ದಾರೆ. ವಾಸ್ತವವಾಗಿ ಹಿಂದಿನ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಖಾತೆಯನ್ನೇ ರದ್ದುಪಡಿಸಿದ್ದಾರೆ ಎಂಬ ವಿಷಯವನ್ನು ಮರೆಮಾಚಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಾಜ್ಯಪಾಲರನ್ನು ತಪ್ಪು ದಾರಿಗೆ ಎಳೆದಿದ್ದಾರೆಯೇ?” ಎಂದು ಪ್ರಶ್ನಿಸಿದರು.
ಈ ನಡುವೆ ಸಚಿವರಾದ ಶರಣ ಬಸಪ್ಪ ದರ್ಶನಾಪುರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸಾರ್ವಜನಿಕ ಉದ್ದಿಮೆ ಖಾತೆಯನ್ನು ಹಣಕಾಸು ಖಾತೆಯೊಂದಿಗೆ ವಿಲೀನ ಮಾಡಿರುವುದಾಗಿ, ಆದುದರಿಂದ ನಾನು ಈ ಖಾತೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗಳ ಸಭೆಯನ್ನು ಕರೆಯಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆ. 25ರಂದು ಹಲವೆಡೆ ವಿದ್ಯುತ್ ವ್ಯತ್ಯಯ
“ಇದರಿಂದ ಸಾರ್ವಜನಿಕ ಉದ್ದಿಮೆ ಖಾತೆಯು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಯವರಿಗೆ ಸೇರಿದ್ದಾಗಿರುತ್ತದೆ. ಸಾರ್ವಜನಿಕರಲ್ಲಿ ಈ ವಿಷಯದ ಬಗ್ಗೆ ಗೊಂದಲವಿದ್ದು, ಸಾರ್ವಜನಿಕ ಉದ್ದಿಮೆಗಳ ಖಾತೆಯು ಸರ್ಕಾರದಲ್ಲಿ ಇದೆಯೋ? ಅಥವಾ ರದ್ದಾಗಿದೆಯೋ? ಅಥವಾ ಹಣಕಾಸು ಇಲಾಖೆಯೊಂದಿಗೆ ವಿಲೀನವಾಗಿದೆಯೋ? ಎಂಬುದು ಗೊಂದಲಮಯವಾಗಿದೆ. ತಕ್ಷಣ ಸಾರ್ವಜನಿಕ ಉದ್ದಿಮೆಗಳ ಖಾತೆಯ ಸಚಿವರಾಗಿ ಶರಣಬಸಪ್ಪ ದರ್ಶನಾಪುರ ಅವರ ನೇಮಕ ವಿಚಾರವಾಗಿ ಗೊಂದಲ ಪರಿಹರಿಸಬೇಕು” ಎಂದು ಮೋಹನ್ ದಾಸರಿ ಆಗ್ರಹಿಸಿದರು.