- ‘ಬರಗಾಲ ಘೋಷಿಸಲು ಕೇಂದ್ರದ ಕೆಲವು ಮಾರ್ಗಸೂಚಿ ಅಡ್ಡ ಬರುತ್ತಿವೆ’
- ‘ಅನೇಕ ಡ್ಯಾಂಗಳು ಭರ್ತಿಯಾಗದೇ ಬತ್ತಿ ಹೋಗುವ ಸ್ಥಿತಿಯಲ್ಲಿವೆ’
ಬರಗಾಲ ಎಂದು ಘೋಷಿಸಲು ಮಾರ್ಗಸೂಚಿ ಪಾಲಿಸಬೇಕು. ಆದರೆ, ಕೆಲವು ಮಾರ್ಗಸೂಚಿ ಅಡ್ಡ ಬರುತ್ತಿರುವುದರಿಂದ ಘೋಷಿಸಲಾಗುತ್ತಿಲ್ಲ. ರಾಜ್ಯದಲ್ಲಿ ಬರದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿಯಿದ್ದು, 100 ಕ್ಕೂ ಹೆಚ್ಚು ತಾಲ್ಲೂಕಗಳು ಬರಗಾಲ ವ್ಯಾಪ್ತಿಗೆ ಬರಲಿವೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ರಾಜ್ಯದಲ್ಲಿ ಈ ಬಾರಿ ಹೇಳಿಕೆಯಷ್ಟು ಮುಂಗಾರು ಮಳೆ ಆಗಿಲ್ಲ. ಇದರಿಂದ ಅನೇಕ ಡ್ಯಾಂಗಳು ಭರ್ತಿಯಾಗದೇ ಬತ್ತಿ ಹೋಗುವ ಸ್ಥಿತಿ ತಲುಪಿವೆ” ಎಂದರು.
“ಅನೇಕ ಜಲಾಶಯಗಳು ನೀರಿಲ್ಲದೇ ಖಾಲಿಯಾಗಿದೆ. ಈ ಹಿನ್ನಲೆ ಜಲಾಶಯದ ನೀರನ್ನೇ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದ ರೈತರಿಗೆ ನೀರಿನ ಅಭಾವ ಎದುರಾಗಿದೆ. ನಮ್ಮ ಬಳಿ ಎಲ್ಲ ತರಹದ ಮಾಹಿತಿ ಇದ್ದು, ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಸದ್ಯದಲ್ಲೇ ಘೋಷಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾವೇರಿ ವಿವಾದ, ಬರಗಾಲದಲ್ಲಾದರೂ ರಾಜ್ಯದ ಜನರ ಹಿತ ಕಾಯುವರೇ ಬಿಜೆಪಿ ಸಂಸದರು?
“ಮೋಡ ಬಿತ್ತನೆ ಬಗ್ಗೆ ಚಿಂತನೆಯಿಲ್ಲ. ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಪ್ರಯೋಜನವಾಗಿರಲಿಲ್ಲ. ಕಳಪೆ ಬಿತ್ತನೆ ಬೀಜದ ಬಗ್ಗೆ ಎರಡು ಮೂರು ಕಡೆ ಮಾತ್ರ ದೂರು ಬಂದಿದೆ. ಈ ಕುರಿತು ಪ್ರಕರಣ ದಾಖಲು ಮಾಡಿದ್ದೇವೆ, ಜೊತೆಗೆ ತನಿಖೆ ಕೂಡ ನಡೆಯುತ್ತಿದೆ” ಎಂದರು.
ಇದೇ ವೇಳೆ ಸಿಎಂ ಡಿಸಿಎಂ ಪೈಪೋಟಿ ವಿಚಾರ ಕುರಿತು ಪ್ರತಿಕ್ರಿಯಿಸಿ, “ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೊಂದಾಣಿಕೆ ಇಲ್ಲ ಅಂತ ಹೇಳಿಕೊಂಡು, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರುತ್ತೆಂದು ಅಂದುಕೊಂಡಿದ್ದರು. ನಾವೆಲ್ಲರೂ ಒಟ್ಟಿಗೆ ಹೋಗಿ 136 ಸ್ಥಾನ ಗೆದ್ದಿದ್ದೀವಿ. ಈಗಲೂ ಹಾಗೆ ಅಂದುಕೊಂಡಿರಲಿ, ನಾವು ಒಟ್ಟೊಟ್ಟಿಗೆ ಇರುತ್ತೇವೆ” ಎಂದು ಪ್ರತಿಪಕ್ಷಗಳ ನಾಯಕರನ್ನು ಪರೋಕ್ಷವಾಗಿ ಕುಟುಕಿದರು.