- ಬ್ಯಾರಿಕೇಡ್ ಆಚೆ ನಿಂತು ಕೈಬೀಸಿದ ಬಿಜೆಪಿ ನಾಯಕರು: ಫೋಟೋ ವೈರಲ್
- ‘ಬಿಜೆಪಿಯ ದಂಡ ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ’ ಎಂದ ಕಾಂಗ್ರೆಸ್
ಚಂದ್ರಯಾನ 3 ಯಶಸ್ಸಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಿದ್ದರು.
ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಭೇಟಿಗೆ ಬಿಜೆಪಿ ನಾಯಕರಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹೊರಗಡೆ ಸಾರ್ವಜನಿಕರಂತೆ ನಿಂತು ಮೋದಿಗೆ ಕೈಬೀಸುತ್ತಿರುವ ಫೋಟೋವೊಂದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಈ ನಡುವೆ ಟ್ವೀಟ್ ಮಾಡಿ ಬಿಜೆಪಿ ನಾಯಕರ ಕಾಲೆಳೆದು ವ್ಯಂಗ್ಯವಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರದ್ದು ಎಂತಹ ದುಸ್ಥಿತಿ. ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ. ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೆ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ?’ ಎಂದು ಬರೆದುಕೊಂಡಿದೆ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಮುನಿರತ್ನ, ಕೆ. ಗೋಪಾಲಯ್ಯ, ಆರ್ ಅಶೋಕ್ ಕಾಣಿಸಿಕೊಂಡಿದ್ದಾರೆ.
ನಾಲ್ವರು ಮುಖಂಡರು ಬ್ಯಾರಿಕೇಡ್ ಆಚೆ ನಿಂತು ಪ್ರಧಾನಿ ಮೋದಿಗೆ ಕೈ ಬೀಸಿದ್ದು, ಅದರಲ್ಲೂ ಮುನಿರತ್ನ ಬ್ಯಾರಿಕೇಡ್ ಮೇಲೆ ಹೆಜ್ಜೆ ಇಟ್ಟು ಪ್ರಧಾನಿಗೆ ಕೈ ಬೀಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಂಡಿದ್ದು, ಬಿಜೆಪಿ ನಾಯಕರ ಯೋಗ್ಯತೆ ಏನು ಎಂಬುದನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ ಎಂದು ಹಲವರು ಬರೆದುಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಕಂಡಿರುವ ಹೀನಾಯ ಸೋಲಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಈ ರೀತಿಯ ಬೆಳವಣಿಗೆಯು ರಾಜ್ಯದ ಬಿಜೆಪಿ ನಾಯಕರನ್ನು ಮುಜುಗರಕ್ಕೀಡು ಮಾಡಿದೆ.
ರಾಜ್ಯದಲ್ಲಿ ಬಿಜೆಪಿಯ ಹೀನಾಯ ಸೋಲಿನ ನಂತರ, ಪ್ರತಿಪಕ್ಷ ನಾಯಕರ ಆಯ್ಕೆಯೂ ಆಗಿಲ್ಲ. ಈ ಸಂದರ್ಭದಲ್ಲಿಯೇ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಂದರೂ, ರಾಜ್ಯ ಬಿಜೆಪಿ ನಾಯಕರ ಭೇಟಿಗೆ ಅವಕಾಶ ಕೊಡದೆ ಇರುವುದು ರಾಜ್ಯ ರಾಜಕೀಯ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಸ್ತುವಾಗಿದೆ. ಮೋದಿಯವರು ತೆರೆದ ಕಾರಿನಲ್ಲಿ ತೆರಳುತ್ತಿದ್ದಾಗ ಬೀದಿಯಲ್ಲಿ ನಿಂತು ಕೈ ಬೀಸಿದ ನಾಯಕರ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.