- ಪ್ರಧಾನಿ ಮೋದಿ ಬೆಂಗಳೂರು ಭೇಟಿ, ಶಿಷ್ಟಾಚಾರ ಪಾಲನೆ ವಿಚಾರ ವಾಗ್ವಾದ
- ಬಿಜೆಪಿ ನಾಯಕರ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ತೀಕ್ಷ್ಣ ತಿರುಗೇಟು
ಯಾರಿಗೆ ಎಷ್ಟು ಗೌರವ ಕೋಡಬೇಕು ಎಂಬುದನ್ನು ಬಿಜೆಪಿಯಿಂದ ಕಲಿಯಬೇಕಿಲ್ಲ. ನಮಗೂ ಗೊತ್ತಿದೆ. ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ಇದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀಕ್ಷ್ಣವಾಗಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂಬ ಬಿಜೆಪಿ ನಾಯಕರ ಮಾತಿಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ಪ್ರಧಾನಮಂತ್ರಿ ಕಚೇರಿಯಿಂದ ನಮಗೆ ಕರೆ ಬಂದಿತ್ತು. ಪ್ರಧಾನಿಯವರ ಸ್ವಾಗತಕ್ಕೆ ಬರುವುದು ಬೇಡ ಎಂದು ಕೇಂದ್ರ ಸರ್ಕಾರವೇ ನಮಗೆ ಹೇಳಿತ್ತು. ಹಾಗಾಗಿ ಸರ್ಕಾರದ ವತಿಯಿಂದ ಪ್ರಧಾನಿ ಮೋದಿ ಅವರ ಸ್ವಾಗತ ಮಾಡಿಸಿದ್ದೇವೆ” ಎಂದರು.
“ಅಶೋಕ್ ಅವರಿಗೆ ಸ್ವಲ್ಪ ಸಮಸ್ಯೆ ಇದ್ದಂತಿದೆ. ಬೇಕಾಬಿಟ್ಟಿ ಮಾತನಾಡುತ್ತಾರೆ. ಬೇರೆ ರಾಜ್ಯಗಳ ರೀತಿ ಅಲ್ಲ ನಮ್ಮ ಸಂಸ್ಕೃತಿ. ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಪ್ರಧಾನಿ ಅವರಿಗೆ ಗೌರವ ಕೊಡುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಿಜೆಪಿ ನಾಯಕರನ್ನು ಬೀದಿಯಲ್ಲಿ ನಿಲ್ಲಿಸಿದ ಪ್ರಧಾನಿ ಮೋದಿ : ಟ್ವೀಟ್ ಮೂಲಕ ಕಾಲೆಳೆದ ಕಾಂಗ್ರೆಸ್
ಅಥೆನ್ಸ್ನಿಂದ ಮೋದಿ ಬರುವ ಕಾರಣ ನಿಖರವಾಗಿ ಇಂತಿಷ್ಟೇ ಹೊತ್ತಿಗೆ ಬೆಂಗಳೂರಿಗೆ ತಲುಪಬಹುದು ಎಂಬ ಖಚಿತತೆ ಇರಲಿಲ್ಲ. ತಮ್ಮ ಸ್ವಾಗತಕ್ಕೆ ಮುಖ್ಯಮಂತ್ರಿ, ರಾಜ್ಯಪಾಲರು ಬಂದು ತಾಸುಗಟ್ಟಲೆ ಕಾಯುವುದು ಬೇಡ ಎಂಬ ಕಾರಣಕ್ಕೆ ಅಧಿಕಾರಿಗಳನ್ನಷ್ಟೇ ಕಳುಹಿಸಿದರೆ ಸಾಕು ಎಂದು ಮೋದಿ ಹೇಳಿದ್ದರು ಎನ್ನಲಾಗಿದೆ.

ಅತ್ತ ಮೋದಿ ಕೂಡ ಹೆಚ್ಎಎಲ್ ಏರ್ಪೋರ್ಟ್ ಹೊರಭಾಗದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ವೇಳೆ, “ಪ್ರೋಟೋಕಾಲ್ ಪ್ರಕಾರ (ಶಿಷ್ಟಾಚಾರ) ಇಷ್ಟೊಂದು ಕಡಿಮೆ ಅವಧಿಯಲ್ಲಿ ವ್ಯವಸ್ಥೆ ಮಾಡಿದ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು” ಎಂದು ಹೇಳಿದ್ದರು.