ಕೇಂದ್ರ ಸರ್ಕಾರದ ಕೆಲ ನಡೆಗಳನ್ನು ನೇರವಾಗಿ ಖಂಡಿಸುತ್ತಿರುವ ಬಹುಭಾಷಾ ನಟ, ಕಿಶೋರ್ ಕುಮಾರ್ ಅವರು, ‘ಮೋದಿ ಹೈ ತೊ ಏ ಸಬ್ ಮುಮ್ಕಿನ್ ಹೈ’ ಎಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.
ಕಾರಣ ಇಷ್ಟೇ. ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ಹಂಚಿಕೊಂಡಿದ್ದ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್ ನಿಯಮ ಉಲ್ಲಂಘನೆ ಎಂದು ಉಲ್ಲೇಖಿಸಿ ಅಳಿಸಿ ಹಾಕಿದೆ.
ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಟಾಂಗ್ ನೀಡಿರುವ ನಟ ಕಿಶೋರ್, ‘ಮೋದಿಯವರಿದ್ದರೆ ಇದೆಲ್ಲವೂ ಸಾಧ್ಯ’ ಎಂದು ಹೇಳಿ, ಇನ್‌ಸ್ಟಾಗ್ರಾಮ್ ಖಾತೆ ಬ್ಲಾಕ್ ಮಾಡಿರುವ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಆ ಬಳಿಕದ ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವರವಾಗಿ ಬರೆದುಕೊಂಡಿರುವ ಬಹುಭಾಷಾ ನಟ, ‘ಇನ್‌ಸ್ಟಾಗ್ರಾಮ್‌ನ ಈ ನಿಯಮಗಳು ನನ್ನ ನೊಂದು ಬೆಂದ ಮಣಿಪುರಕ್ಕೆ , ಕಾಶ್ಮೀರಕ್ಕೆ , ಗುಜರಾತಿಗೆ, ನೂಹ್‌ಗೆ, ಹಾಥರಸ್‌ಗೆ, ಸಿಂಘು ಬಾರ್ಡರಿಗೆ, ಲಖೀಮ್ ಪುರ್ ಖೇರಿಗೆ , ಧರ್ಮಸ್ಥಳಕ್ಕೆ, ದೇಶದ ಉದ್ದಗಲಕ್ಕೆ ಅನ್ವಯಿಸಿಬಿಟ್ಟಿದ್ದರೆ ಎಷ್ಟು ಚೆಂದ. ಇವರು ಹೇಳುವ ADULT SEXUAL EXPLOITATION ಅನ್ನು ನನ್ನ ದೇಶದ ಮನಃಪಟಲದಿಂದ ನನ್ನ ಪೋಸ್ಟಿನ ಹಾಗೆ ಅಳಿಸಿಬಿಡಲು ಸಾಧ್ಯವಿದ್ದಿದ್ದರೆ ಎಷ್ಟು ಚೆಂದ’ ಎಂದು ಬರೆದುಕೊಂಡಿದ್ದಾರೆ.
‘ನಾನೋ, ನಾನು ಹಾಕುವ ಪೋಸ್ಟೊ, ಮೋದಿಯೋ, ಗೋದಿಯೋ ಮುಖ್ಯವೇ ಅಲ್ಲ . ಈ ದೇಶವನ್ನು , ಕುವೆಂಪು ಗಾಂಧಿ ಅಂಬೇಡ್ಕರ್ ಬುದ್ಧ ಬಸವರ ಕನಸಿನ ಸರ್ವ ಸಮಾನತೆಯ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳುತ್ತೇವೆಯಾ ಎನ್ನುವುದಷ್ಟೇ ಮುಖ್ಯ’ ಎಂದು ತನ್ನ ಆಗ್ರಹವನ್ನು ಬಹುಭಾಷಾ ನಟ ಕಿಶೋರ್ ಕುಮಾರ್ ತಿಳಿಸಿದ್ದಾರೆ.