ಕ್ಷೀರಭಾಗ್ಯ ಯೋಜನೆಯ ಹಾಲಿನಲ್ಲಿ ಜಿರಳೆ ಬಿದ್ದು, ಅದೇ ಹಾಲು ಸೇವಿಸಿದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ರಾಯಚೂರು ತಾಲೂಕಿನ ತಲಮಾರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
ಜಿರಳೆ ಬಿದ್ದ ಹಾಲನ್ನು ಸೇವಿಸಿ ಮಕ್ಕಳು ಅಸ್ವಸ್ಥಗೊಂಡ ಘಟನೆ ತಿಳಿದ ತಕ್ಷಣವೇ ತಾಲೂಕ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಹತ್ತಿರದ ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಪ್ಯಾಕ್ ಮಾಡಿದ ಹಾಲಿನ ಪುಡಿಯಲ್ಲಿ ಜಿರಳೆ ಇತ್ತೊ ಅಥವಾ ಹಾಲಿನ ಪಾತ್ರೆಯಲ್ಲಿ ಜಿರಳೆ ಬಂದಿದೆಯೋ ಎಂಬುದು ನಿಖರವಾಗಿ ಗೊತ್ತಿಲ್ಲ. ಶಾಲೆಯ ಆಡಳಿತ ಮಂಡಳಿ ಹಾಗೂ ಅಡುಗೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಘಟನೆ ಜರುಗಿದೆ ಎಂದು ಪೋಷಕರು ಅಸಮಾಧಾನ ಹೊರಹಾಕಿದರು. ನಂತರ ಜಿಲ್ಲಾ ಪಂಚಾಯತ ಸಿಇಒ ರಾಹುಲ್ ತುಕಾರಾಂ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲಿಸಿದರು.