- ಜಿಲ್ಲೆಯಲ್ಲಿ ಕಳೆದ ವರ್ಷ 332, ಪ್ರಸಕ್ತ ವರ್ಷ 210 ಜನ ರಸ್ತೆ ಅಪಘಾತದಲ್ಲಿ ಮರಣ
- ಪ್ರತಿ ಕುಟುಂಬದ ಸದಸ್ಯರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸಲಹೆ
ಬೀದರ ಜಿಲ್ಲೆಯಲ್ಲಿ ನಡೆಯುತ್ತಿರುವ ರಸ್ತೆ ಅಪಘಾತ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ, ಜನರಿಗೆ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ಪ್ರೇರೆಪಿಸುವ ಉದ್ದೇಶದಿಂದ ಜಿಲ್ಲೆಯ ವಿವಿಧ ಸಂಘ-ಸಂಸ್ತೆಗಳ ಸಹಕಾರದೊಂದಿಗೆ ರಸ್ತೆ ಸುರಕ್ಷತಾ ಓಟ ಏರ್ಪಡಿಸಲಾಗಿದೆ ಎಂದು ಬೀದರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹೇಳಿದರು.
ರವಿವಾರ ಬೀದರ ಐತಿಹಾಸಿಕ ಕೋಟೆ ಆವರಣದಲ್ಲಿ ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಆಯೋಜಿಸಿದ ರಸ್ತೆ ಸುರಕ್ಷತಾ ಓಟ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
“ಜಿಲ್ಲೆಯಲ್ಲಿ ಕಳೆದ ವರ್ಷ 332, ಪ್ರಸಕ್ತ ವರ್ಷ 210 ಜನ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಇವರ ಸಾವಿಗೆ ಕಾರಣ ಕೆದಕಿದಾಗ ಇವರು ರಸ್ತೆ ಸುರಕ್ಷತಾ ನಿಯಮಗಳಾದ ಹೆಲ್ಮೆಟ್ ಧರಿಸದೆ ಇರುವುದು, ಕಾರು ಚಲಾಯಿಸುವಾಗಿ ಸೀಟ್‌ಬೆಲ್ಟ್ ಧರಿಸದೆ ಇರುವುದು ಮುಖ್ಯಕಾರಣ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ರಸ್ತೆ ಸುರಕ್ಷತಾ ಓಟ ಆಯೋಜನೆ ಮಾಡಲಾಗಿದೆ.ಈ ಓಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವದರ ಜೊತೆಗೆ ತಮ್ಮ ಕುಟುಂಬದ ಪ್ರತಿ ಸದಸ್ಯರಿಗೂ ನಿಯಮಗಳನ್ನು ಪಾಲಿಸುವಂತೆ ತಿಳಿಹೇಳಬೇಕು” ಎಂದು ಸಲಹೆ ನೀಡಿದರು.
ಓಟದಲ್ಲಿ 6 ಸಾವಿರಕ್ಕೂ ಅಧಿಕ ಜನ ಭಾಗಿ:
“ಜಿಲ್ಲೆಯ ಸಾರ್ವಜನಿಕರು, ಸಂಘ-ಸಂಸ್ಥೆಯ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 6 ಸಾವಿರಕ್ಕೂ ಹೆಚ್ಚು ಜನ ಇಂದಿನ ರಸ್ತೆ ಸುರಕ್ಷತಾ ಓಟದಲ್ಲಿ ಭಾಗವಹಿಸಿ ಓಟಕ್ಕೆ ಮೇರಗು ತಂದ ಎಲ್ಲರಿಗೂ ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆಗಳು ಸಲ್ಲಿಸಿದರು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವದರೊಂದಿಗೆ ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳುವದರ ಜೊತೆಗೆ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು” ಕೋರಿದರು.

ಓಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ:
ಈ ರಸ್ತೆ ಸುರಕ್ಷಾತ ಓಟವು 2.5 ಕಿ.ಮಿ., 5 ಕಿ.ಮಿ, ಹಾಗೂ 10 ಕಿ.ಮಿ ವಿಧಗಳಲ್ಲಿ ನಡೆಯಿತು. ಓಟವು ಬೀದರನ ಐತಿಹಾಸಿಕ ಕೋಟೆಯಿಂದ ಪ್ರಾರಂಭವಾಗಿ ಬೀದರ ನಗರದ ವಿವಿಧ ಬೀದಿಗಳಿಂದ ಸಾಗಿ ಮತ್ತೆ ಕೋಟೆ ಆವರಣಕ್ಕೆ ಬಂದು ತಲುಪಿತು. ಈ ಓಟದಲ್ಲಿ ಪ್ರಥಮ, ದ್ವೀತಿಯ, ತೃತೀಯ ಬಹುಮಾನ ವಿಜೇತರಾದ 10 ಕಿ.ಮಿ ಪರುಷ ವಿಭಾಗದಲ್ಲಿ ಭೀಮಾಶಂಕರ (ಪ್ರಥಮ), ಸದಾನಂದ ಮೇತ್ರೆ (ದ್ವಿತೀಯ), ರಮೇಶ (ತೃತೀಯ), 5 ಕಿ.ಮಿ ಪುರುಷ ವಿಭಾಗದಲ್ಲಿ ಮಲ್ಲಿಕಾರ್ಜುನ ಪುಂಡಲಿಕ್ (ಪ್ರಥಮ), ಮಹೇಶ ಭೀಮು ರಾಠೋಡ್ (ದ್ವೀತಿಯ), ದತ್ತು ಪರಶುರಾಮ (ತೃತೀಯ), 10 ಕಿ.ಮಿ ಮಹಿಳಾ ವಿಭಾಗದಲ್ಲಿ ಅಂಜಲಿ (ಪ್ರಥಮ), 5 ಕಿ.ಮಿ ಮಹಿಳಾ ವಿಭಾದಲ್ಲಿ ಐಶ್ವರ್ಯ, ಪೂಜಾ ಜಾಧವ (ದ್ವೀತಿಯ), ಶೃತಿ ಚಿದ್ರೆ (ತೃತೀಯ) ಇವರಿಗೆ ಬಹುಮಾನ ವಿತರಿಸಲಾಯಿತು.
ಈ ಸುದ್ದಿ ಓದಿದ್ದೀರಾ ? ಬೀದರ್ | ಕಳವು ಪ್ರಕರಣ: 9 ಆರೋಪಿಗಳ ಬಂಧನ; 28 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ
ಈ ರಸ್ತೆ ಸುರಕ್ಷತಾ ಓಟ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ.ಎಂ.ಎಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಬೀದರ ಪೊಲೀಸ ಉಪ-ಅಧೀಕ್ಷರ ಕೆ.ಎಂ ಸತೀಶ, ಗುರುನಾಥ ಕೊಳ್ಳುರ, ಅಬ್ದುಲ್ ಖದಿರ್, ಸೇರಿದಂತೆ ಈ ಓಟ ಕಾರ್ಯಕ್ರಮಕ್ಕೆ ಕೈಜೋಡಿಸಿದ ಬೀದರನ ವಿವಿಧ ಸಂಘ-ಸAಸ್ಥೆಯ ಮುಖ್ಯಸ್ಥರು ಹಾಗೂ ಸದಸ್ಯರು, ಸಾರ್ವಜನಿಕರು, ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.