ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಜೀವನ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್‌ಗಳ ಮೊರೆ ಹೋಗುತ್ತಿರುವುದು ಹೆಚ್ಚಳವಾಗಿದೆ. ಗುರುತು ಇಲ್ಲದವರ ಜತೆಗೆ ಸಲುಗೆ ಬೆಳೆಸಿ, ಹಣವನ್ನು ಕಳೆದುಕೊಳ್ಳುವಂತಹ ಪ್ರಕರಣಗಳು ಕೆಲವು ದಿನಗಳ ಹಿಂದಿನಿಂದ ಅಧಿಕವಾಗಿವೆ. ಇದೀಗ ಇಬ್ಬರು ಆರೋಪಿಗಳು ಹುಡುಗಿ ಹೆಸರಿನಲ್ಲಿ ಕರೆ ಮಾಡಿ ವಂಚನೆ ಎಸಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಲೊಕ್ಯಾಂಟೋ ಆ್ಯಪ್ ಮೂಲಕ ಇಬ್ಬರು ಆರೋಪಿಗಳು ಹುಡುಗಿಯ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅಪರಿಚಿತ ಯುವತಿಯ ಫೋಟೋ ಹಾಕುತ್ತಿದ್ದರು. ಈ ಫೇಕ್ ಅಕೌಂಟ್‌ನಿಂದ ಹುಡುಗರಿಗೆ ಮೆಸೇಜ್ ಮಾಡಿ ಸಲುಗೆ ಬೆಳೆಸುತ್ತಿದ್ದರು. ಹುಡುಗರು ಮರುಳಾಗುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅವರಿಗೆ ಭೇಟಿ ಆಗುವಂತೆ ತಿಳಿಸಿ ಲೋಕೇಶನ್ ಕಳಿಸುತ್ತಿದ್ದರು.
ತಾವು ಕಳಿಸಿದ ಲೊಕೇಶನ್‌ಗೆ ಬಂದ ವ್ಯಕ್ತಿ ಲೊಕ್ಯಾಂಟೋ ಆ್ಯಪ್ ಮೂಲಕ ಪರಿಚಿತನಾದವನಾ ಎಂಬ ಬಗ್ಗೆ ಖಾತ್ರಿ ಪಡಿಸಿಕೊಂಡು ಬಳಿಕ ಚಾಕು ತೋರಿಸಿ ಆಟೋದಲ್ಲಿ ಕಿಡ್ನಾಪ್ ಮಾಡುತ್ತಿದ್ದರು. ಅವರಿಂದ ಹಣ ಚಿನ್ನಾಭರಣ ಸುಲಿಗೆ ಮಾಡುವ ಜತೆಗೆ ಗೂಗಲ್ ಪೇ ಮತ್ತು ಪೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಇವರ ಬಳಿ ಹಣ ಇಲ್ಲದಿದ್ದರೆ ಸ್ನೇಹಿತರಿಗೆ ಕರೆ ಮಾಡಿಸಿ ಅವರಿಂದ ಗೂಗಲ್ ಪೇ, ಫೋನ್ ಪೇ ಕೂಡ ಮಾಡಿಸಿಕೊಳ್ಳುತ್ತಿದ್ದರು. ರಾತ್ರಿಯಿಡಿ ಬಂಧನದಲ್ಲಿ ಇರಿಸುತ್ತಿದ್ದರು. ಈ ಆರೋಪಿಗಳು 15ಕ್ಕೂ ಹೆಚ್ಚು ಜನರಿಗೆ ಹುಡುಗಿ ಹೆಸರಲ್ಲಿ ಮೆಸೇಜ್ ಮಾಡಿ ಅವರನ್ನು ನಿಗದಿತ ಸ್ಥಳಕ್ಕೆ ಕರೆಸಿ ಸುಲಿಗೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಖ್ಯಾತ ಕವಿ, ಪದ್ಮಶ್ರೀ ಪುರಸ್ಕೃತ ಜಯಂತ ಮಹಾಪಾತ್ರ ಇನ್ನಿಲ್ಲ
ಇತ್ತೀಚೆಗೆ ಹೆಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಈ ಆರೋಪಿಗಳು ವ್ಯಕ್ತಿಯೊಬ್ಬನನ್ನು ಕರೆಸಿ 60 ಸಾವಿರ ಹಣ ಸುಲಿಗೆ ಮಾಡಿದ್ದರು. ಘಟನೆ ಸಂಬಂಧ ವಂಚನೆಗೊಳಗಾದವರು ದೂರು ನೀಡಿದ ಹಿನ್ನೆಲೆ, ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.