- ಕಳೆದ ಒಂದು ವರ್ಷದಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆ 24
- ಎರಡು ತಿಂಗಳವರೆಗೆ ಪರೀಕ್ಷೆಗಳನ್ನು ನಡೆಸಲು ಅನುಮತಿಸುವುದಿಲ್ಲ ಎಂದ ಜಿಲ್ಲಾಡಳಿತ
‘ಕೋಚಿಂಗ್ ಹಬ್’ ಆಗಿ ಗುರುತಿಸಿಕೊಂಡಿರುವ ರಾಜಸ್ಥಾನದ ‘ಕೋಟಾ’ದಲ್ಲಿ ಮತ್ತೆ ನೀಟ್ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೇಶದ ಮಹತ್ವಾಕಾಂಕ್ಷಿ ಕೋರ್ಸ್ಗಳಾದ ಎಂಜಿನಿಯರ್, ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಮತ್ತು ನಾಗರಿಕ ಸೇವೆಗಳ ಪರೀಕ್ಷೆಗಳ ತರಬೇತಿಯ ಕೇಂದ್ರವಾದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ.
ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನೀಟ್ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ಆವಿಷ್ಕಾರ್ ಸಂಭಾಜಿ ಕಾಸ್ಲೆ (17) ಮತ್ತು ಬಿಹಾರದ ವಿದ್ಯಾರ್ಥಿ ಆದರ್ಶ್ ರಾಜ್ (18) ಎಂಬ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಆ ಮೂಲಕ ಕಳೆದ ಒಂದು ವರ್ಷದಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಆವಿಷ್ಕಾರ್ ಮಹಾರಾಷ್ಟ್ರ ಮೂಲದವರಾಗಿದ್ದು, ಕೋಟಾದಲ್ಲಿ ತನ್ನ ಅಜ್ಜಿಯೊಂದಿಗೆ ನೆಲೆಸಿದ್ದರು. ಪರೀಕ್ಷೆ ಬರೆದ ಬಳಿಕ ಕೋಚಿಂಗ್ ಇನ್ಸ್ಟಿಟ್ಯೂಟ್ನ ಆರನೇ ಮಹಡಿಯಿಂದ ಜಿಗಿದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ, ಭಾನುವಾರ ಸಂಜೆ ಕೋಟಾದ ಕುಣಡ್ಡಿಯಲ್ಲಿ ಬಿಹಾರ ಮೂಲದ ವಿದ್ಯಾರ್ಥಿ ಆದರ್ಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ಈ ವರ್ಷ 24ಕ್ಕೆ ಏರಿಕೆಯಾಗಿದೆ.
ಕಳೆದ ವಾರ ಜ್ವರದ 15 ಮಾತ್ರೆಗಳನ್ನು ಸೇವಿಸಿದ ನಂತರ ವಿದ್ಯಾರ್ಥಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದನು. ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ನಂತರ ಆತ ಖಿನ್ನತೆಗೆ ಒಳಗಾಗಿದ್ದ ಎಂದು ಅವರ ಸ್ನೇಹಿತರು ಮಾಹಿತಿ ನೀಡಿದ್ದರು.
ಕೋಟಾದಲ್ಲಿನ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಬಾಲ್ಕನಿಗಳಲ್ಲಿ ಬಲೆಗಳನ್ನು ಅಳವಡಿಸಲಾಗುತ್ತಿದೆ. ಸೀಲಿಂಗ್ ಫ್ಯಾನ್ಗಳಿಗೆ ಸ್ಪ್ರಿಂಗ್ ಅಳವಡಿಸಲಾಗುತ್ತಿದೆ. ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾ ಇಡುವ ಜೊತೆಗೆ ಕೌನ್ಸೆಲಿಂಗ್ ಕೂಡ ಮಾಡಲಾಗುತ್ತಿದೆ. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಆತ್ಮಹತ್ಯೆ ಪ್ರಕರಣ ಹೆಚ್ಚಳವಾಗುತ್ತಲೇ ಇದೆ. ಇದು ಅಲ್ಲಿನ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಭಾನುವಾರ ಪರೀಕ್ಷೆ ನಡೆಸಬಾರದು ಎಂದು ಕೋಚಿಂಗ್ ಆಪರೇಟರ್ಗಳು ಮತ್ತು ಸೆಂಟರ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಆಗಸ್ಟ್ 12 ರಂದು ಕೋಟಾ ಜಿಲ್ಲಾಧಿಕಾರಿ ಒ.ಪಿ ಬಂಕರ್ ಮಾರ್ಗಸೂಚಿ ಹೊರಡಿಸಿದ್ದರು. ಇದರ ಹೊರತಾಗಿಯೂ ಭಾನುವಾರ ಪರೀಕ್ಷೆ ನಡೆದ ಬಳಿಕ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮತ್ತೆ ಹೊಸ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ, ಯಾವುದೇ ಕೋಚಿಂಗ್ ಸಂಸ್ಥೆ ಮುಂದಿನ ಎರಡು ತಿಂಗಳವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಅನುಮತಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.