- ‘ನಮ್ಮ ಶಾಸಕರು ಪಕ್ಷ ಬಿಟ್ಟು ಹೋಗಲಿದ್ದಾರೆ ಎಂಬುದು ಊಹಾಪೋಹ‘
- ‘ಸೆಪ್ಟೆಂಬರ್ 10ರಂದು ಸಭೆ, ಎಲ್ಲ ಜಿಲ್ಲೆಗಳ ಕಾರ್ಯಕರ್ತರು ಹಾಜರು‘
ನಮಗೆ ಯಾವ ಪಕ್ಷದ ಮೇಲೂ ದ್ವೇಷ ಇಲ್ಲ. ನಮ್ಮ ಪಕ್ಷ ಸಂಘಟನೆಗೆ ಕೆಲಸ ಮಾಡುತ್ತಿದ್ದೇವೆ. ನಾನು ಕೂಡ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ಯಾವ ಶಾಸಕರೂ ಜೆಡಿಎಸ್ ಬಿಟ್ಟು ಹೋಗುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ನಮ್ಮ ಶಾಸಕರು ಪಕ್ಷ ಬಿಟ್ಟು ಹೋಗಲಿದ್ದಾರೆ ಎಂಬುದು ಬರೀ ಊಹಾಪೋಹ” ಎಂದು ಪಕ್ಷಾಂತರ ವದಂತಿಗೆ ಸ್ಪಷ್ಟನೆ ನೀಡಿದರು.
“ಜೆಡಿಎಸ್ ಸಂಘಟನೆ ದೃಷ್ಟಿಯಿಂದ ಹಲವು ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. ಬಿಜೆಪಿ, ಕಾಂಗ್ರೆಸ್ ನಡುವೆ ನಮ್ಮ ಪಕ್ಷ ಉಳಿಸುವ ಸಂಕಲ್ಪ ಮಾಡಿದ್ದೇವೆ. ಜಿ ಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಮಾಡಿ ರಾಜ್ಯಾದ್ಯಂತ ಪ್ರವಾಸ ಆಯೋಜನೆ ಮಾಡಲಾಗುವುದು” ಎಂದರು.
“ಈ ದೇಶದ ರಾಜಕಾರಣ ಹೇಗೆ ನಡೆಯುತ್ತಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಸೆಪ್ಟೆಂಬರ್ 10 ರಂದು ಜೆಡಿಎಸ್ ಸಭೆ ನಡೆಸುತ್ತೇನೆ. ಅದಕ್ಕೆ ಎಲ್ಲ ಜಿಲ್ಲೆಗಳಿಂದ ಕಾರ್ಯಕರ್ತರು ಹಾಜರಾಗಲಿದ್ದಾರೆ. ನನ್ನ ಕೈಬಿಡಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿಕೊಳ್ಳುವೆ” ಎಂದು ವಿನಂತಿಸಿಕೊಂಡರು.
ಮೆಡಿಕಲ್ ಕಾಲೇಜು ಸ್ಥಳಾಂತರ ಬೇಡ
ರಾಮನಗರದಿಂದ ಕನಕಪುರಕ್ಕೆ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರವಾಗಿ ಪ್ರತಿಕ್ರಿಯಿಸಿ, “ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಕನಕಪುರ ಮನೆ ಇದ್ದ ಹಾಗೆ, ಆದರೆ ರಾಮನಗರ ಸೆಂಟರ್. ಮೆಡಿಕಲ್ ಕಾಲೇಜಿನ ವಿಚಾರದಲ್ಲೂ ರಾಜಕೀಯ ಮಾಡಬಾರದು. ಅವರದ್ದೇ ಸರ್ಕಾರವಿದೆ, ಕನಕಪುರಕ್ಕೆ ಇನ್ನೊಂದು ಕಾಲೇಜು ಮಾಡಿಕೊಳ್ಳಲಿ” ಎಂದರು.
ಈ ಸುದ್ದಿ ಓದಿದ್ದೀರಾ? ನೂರು ದಿನದಲ್ಲಿ ಸರ್ಕಾರ ಎಡವಿದ್ದೇ ಹೆಚ್ಚು, ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ನಿಂತು ಹೋಗಿದೆ: ಮಾಜಿ ಸಿಎಂ ಬೊಮ್ಮಾಯಿ ಟೀಕೆ
ಕುಮಾರಸ್ವಾಮಿ ಬಗ್ಗೆ ಲಘು ಮಾತು ಬೇಡ
“ಸರ್ಕಾರದ ಮೇಲೆ ಹೆಚ್ ಡಿ ಕುಮಾರಸ್ವಾಮಿ ಯಾವುದೇ ದ್ವೇಷದಿಂದ ಮಾತನಾಡುತ್ತಿಲ್ಲ. ಮನೆಯಲ್ಲಿ ಕುಳಿತುಕೊಂಡು ಎಲ್ಲವನ್ನೂ ನೋಡುತ್ತಿದ್ದೇನೆ. ಕುಮಾರಸ್ವಾಮಿ ಪೆನ್ ಡ್ರೈವ್ ವಾದ ವಿವಾದ ನೋಡಿದ್ದೇನೆ. ಅವರು ಅಷ್ಟು ಸುಲಭವಾಗಿ ಮಾತಾಡಲ್ಲ. ಅದ್ದರಿಂದ ಅವರ ಬಗ್ಗೆ ಲಘುವಾಗಿ ಮಾತನಾಡಬೇಡಿ” ಎಂದು ಹೇಳಿದರು.
ಚಂದ್ರಯಾಣ-3 ಸಾಧನೆಗೆ ಪ್ರಶಂಸೆ
“ಚಂದ್ರಯಾನ-3 ರ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳ ಸಾಧನೆಗೆ ದೇವೇಗೌಡರು ಪ್ರಶಂಸೆ ವ್ಯಕ್ತಪಡಿಸಿ, “ವಿಜ್ಞಾನಿಗಳು ಚಂದ್ರಯಾನ 3 ಯಶಸ್ವಿಗೊಳಿಸಿ ಇಡೀ ವಿಶ್ವ ಭಾತರದ ಕಡೆ ನೋಡುವಂತೆ ಮಾಡಿದ್ದಾರೆ. ದೇಶದ ಘನತೆ ಮತ್ತು ಗೌರವ ಹೆಚ್ಚಿಸಿದ್ದಾರೆ. ವಿಜ್ಞಾನಿಗಳ ಈ ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ”ಎಂದರು.