ಬೆಂಗಳೂರಿನಲ್ಲಿ ನಾಯಿ ಬೊಗಳಿದ್ದಕ್ಕೆ ವೃದ್ಧನೊಬ್ಬನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಲ್ಲೇಶ್ವರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಾಜು (57) ಬಂಧಿತ ಆರೋಪಿ. ಬಾಲಸುಬ್ರಹ್ಮಣ್ಯ (62) ಹಲ್ಲೆಗೊಳಗಾದವರು.
ಆ.21ರಂದು ರಾತ್ರಿ 8ರ ಸುಮಾರಿಗೆ ಮಲ್ಲೇಶ್ವರದ ಗಣೇಶ ದೇವಸ್ಥಾನದ ಬಳಿ ರಾಜು ನಡೆದುಕೊಂಡು ಹೋಗುತ್ತಿದ್ದಾಗ ಬೀದಿನಾಯಿ ಬೊಗಳಿದೆ. ಈ ವೇಳೆ ಅಟ್ಟಿಸಿಕೊಂಡು ಸ್ವಲ್ಪ ದೂರ ಹಿಂಬಾಲಿಸಿದೆ. ಬಳಿಕ, ಆ ನಾಯಿ ರಸ್ತೆಯ ಇನ್ನೊಂದು ಬದಿಯ ಪಾದಚಾರಿ ಮಾರ್ಗದತ್ತ ಓಡಿ ಕಣ್ಮರೆಯಾಗಿದೆ. ಈ ವೇಳೆ, ರಾಜು ಹಿಂದೆ ಬರುತ್ತಿದ್ದ ಬಾಲಸುಬ್ರಹ್ಮಣ್ಯ ಅವರೇ ನಾಯಿ ಮಾಲೀಕ ಹಾಗೂ ಆತನೇ ನಾಯಿಯನ್ನು ಕಚ್ಚುವಂತೆ ಛೂ ಬಿಟ್ಟದ್ದಾನೆ ಎಂದು ಭಾವಿಸಿ ಏಕಾಏಕಿ ವೃದ್ಧನ ಜತೆಗೆ ಜಗಳ ಪ್ರಾರಂಭಿಸಿದ್ದಾನೆ.
ಈ ವೇಳೆ, ವೃದ್ಧನಿಗೆ ಮಾತನಾಡಲು ಅವಕಾಶ ಮಾಡಿಕೊಡದ ಆರೋಪಿ ರಾಜು ತನ್ನ ಬಳಿ ಇದ್ದ ಚಾಕು ತೆಗೆದು ವೃದ್ಧನ ಕುತ್ತಿಗೆಗೆ ಇರಿಯಲು ಮುಂದಾದಾಗ ಅದು ಆತನ ದವಡೆಗೆ ಚುಚ್ಚಿದೆ. ಮತ್ತೊಮ್ಮೆ ಇರಿಯಲು ಮುಂದಾದಾಗ ಬಾಲಸುಬ್ರಹ್ಮಣ್ಯ ಬಲಗೈ ಅಡ್ಡ ಹಿಡಿದಿದ್ದಾರೆ. ಆಗ ಕೈ ಬೆರಳಿಗೆ ಗಾಯವಾಗಿದೆ.
ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಕ್ಕೆ 1.5 ಲಕ್ಷಕ್ಕೂ ಹೆಚ್ಚು ಮಂದಿ ಸಾವು: ಎಂ ಎ ಸಲೀಂ
ಈ ಗಲಾಟೆ ಆರಂಭವಾದಾಗ ಬಾಲಸುಬ್ರಹ್ಮಣ್ಯ ಸಹಾಯಕ್ಕಾಗಿ ಕಿರುಚಾಡಿದ ಪರಿಣಾಮ ದಾರಿಹೋಕರು ವೃದ್ಧನನ್ನು ರಕ್ಷಿಸಲು ಮುಂದಾದಾಗ ಗಾಬರಿಗೊಂಡ ಆರೋಪಿ ರಾಜು ಪರಾರಿಯಾಗಿದ್ದಾನೆ.
ಹಲ್ಲೆಯಿಂದ ಗಾಯಗೊಂಡಿದ್ದ ವೃದ್ಧನನ್ನು ಸ್ಥಳೀಯರು ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ, ಘಟನೆ ಬಗ್ಗೆ ವೃದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ರಾಜುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.