ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪರಿಹಾರ ಮೊತ್ತ ನೀಡಲು ಭಿಕ್ಷಾಟನೆ ಅಭಿಯಾನ ನಡೆಸುತ್ತಿದ್ದ ರೈತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ.
ರೈತ ಮುಖಂಡ ಯಲ್ಲಪ್ಪ ಹೆಗಡೆ ಹಲ್ಲೆಗೆ ತುತ್ತಾಗಿರುವ ರೈತ. ಅವರು ತಾಲೂಕಿನ ಇಂಗಳಗಿ ಕ್ರಾಸ್ ಬಳಿ ತೆರಳುತ್ತಿದ್ದಾಗ ಐವರು ಮುಸುಕುಧಾರಿಗಳು ಏಕಾಏಕಿ ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಅವರ ತಲೆಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗಿದೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ, ಯಲ್ಲಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಮುರುಗೇಶ್ ನಿರಾಣಿ ಆರೋಪಿಸಿದ್ದರು. ಅಲ್ಲದೆ, ಯಲ್ಲಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮಾನನಷ್ಟಕ್ಕೆ ಪರಿಹಾನವಾಗಿ ಐದು ಕೋಟಿ ರೂ. ನೀಡಬೇಕೆಂದು ಲೀಗಲ್ ನೋಟೀಸ್ ಕಳಿಸಿದ್ದರು.
ನಿರಾಣಿ ಅವರಿಗೆ ಭಿಕ್ಷಾಟನೆ ಅಭಿಯಾನ ಮಾಡಿ ಪರಿಹಾರ ಮೊತ್ತ ನೀಡುತ್ತೇನೆ ಎಂದಿದ್ದ ಯಲ್ಲಪ್ಪ, ಬಾಗಲಕೋಟೆ ಜಿಲ್ಲೆಯಲ್ಲಿ ಭಿಕ್ಷಾಟನೆ ನಡೆಸುತ್ತಿದ್ದರು. ಸೋಮವಾರ ಬೀಳಗಿಯಲ್ಲಿ ಭಿಕ್ಷಾಟನೆ ಅಭಿಯಾನ ನಡೆಸಲು ನಿರ್ಧರಿಸಿದ್ದರು. ಹೀಗಾಗಿ, ಅವರು ಬೀಳಗಿಗೆ ತೆರಳುವಾಗ ಇಂಗಳಗಿ ಕ್ರಾಸ್ ಬಳಿ ಅವರ ಮೇಲೆ ಐವರ ಗುಂಪು ಹಲ್ಲೆ ಮಾಡಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮುಧೋಳದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.