- ‘ಆಪರೇಷನ್ ಹಸ್ತ ಎಂದು ಕರೆಯುವುದು ಸರಿಯಲ್ಲ’
- ‘ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರುತ್ತಿದ್ದಾರೆ’
ಆಪರೇಷನ್ ಎಂಬ ಕೆಟ್ಟ ಶಬ್ದ ಬಂದಿದ್ದು ಬಿಜೆಪಿಯಿಂದ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಅನೇಕರು ಪಕ್ಷಕ್ಕೆ ಸೇರ್ಪಡೆಯಾಗಲು ಮುಂದೆ ಬರುತ್ತಿದ್ದಾರೆ. ಇದನ್ನು ಆಪರೇಷನ್ ಹಸ್ತ ಎಂದು ಕರೆಯುವುದು ಸರಿಯಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಹೇಳಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆಪರೇಷನ್ ಹಸ್ತ ಪದ ಬಳಕೆ ನಾವು ಮಾಡಲ್ಲ, ಆಪರೇಷನ್ ಎಂಬ ಕೆಟ್ಟ ಶಬ್ದ ಬಂದಿದ್ದು ಬಿಜೆಪಿಯಿಂದ. ಹಲವು ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದೆ” ಎಂದು ಟೀಕಿಸಿದರು.
“ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಹಲವರು ಮುಂದೆ ಬರುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ನಾಯಕರು ಕೂಡ ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲರೂ ಕಾಂಗ್ರೆಸ್ ತತ್ವ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಲು ಮುಂದೆ ಬರುತ್ತಿದ್ದಾರೆ” ಎಂದರು.
“ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಂತ್ರಗಾರಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ರಾಷ್ಟ್ರೀಯ ನಾಯಕರು ಈಗಾಗಲೇ ಸಭೆ ನಡೆಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ” ಎಂದು ಹೇಳಿದರು.
“ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ ನಡೆದಿದ್ದು, ಇಂದಿಗೂ ಬಿಜೆಪಿ ಪರಿಸ್ಥಿತಿ ಬದಲಾಗಿಲ್ಲ” ಎಂದು ಇದೇ ವೇಳೆ ವ್ಯಂಗ್ಯವಾಡಿದರು.