- ವೈಜ್ಞಾನಿಕ-ವೈಚಾರಿಕ ಶಿಕ್ಷಣ ಸಿಗದೇ ಹೋದರೆ ಸಮಾಜಕ್ಕೆ ಜಡತ್ವ ಬಡಿಯುತ್ತದೆ
- ಶಿವರಾತ್ರಿ ರಾಜೇಂದ್ರ ಸ್ವಾಮಿಗೆ ಸಮಾಜದ ಬಗ್ಗೆ ದೂರದೃಷ್ಟಿ ಇತ್ತು: ಸಿದ್ದರಾಮಯ್ಯ
ಚಾತುರ್ವರ್ಣದ ಕಾರಣದಿಂದ ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯನ್ನು ಸುತ್ತೂರು ಮಠ ಅನ್ನ ಮತ್ತು ಶಿಕ್ಷಣ ದಾಸೋಹದ ಮೂಲಕ ಅಳಿಸುತ್ತಿದೆ, ಗ್ರಾಮೀಣ ಭಾಗದ ಬಡವರು ಮತ್ತು ಅಶಕ್ತರಿಗೆ ಶಿಕ್ಷಣ ಮತ್ತು ಅನ್ನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ಬೆಳೆಸಿದೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುತ್ತೂರು ಮಠ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
“ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಮಾಜದ ಬಗ್ಗೆ ದೂರದೃಷ್ಟಿ ಇತ್ತು. ಈ ಕಾರಣಕ್ಕೇ ಶಿಕ್ಷಣ ಮತ್ತು ಆಧ್ಯಾತ್ಮಿಕ ಸಂಸ್ಕಾರದಲ್ಲಿ ಸುತ್ತೂರು ಮಠ ಹೆಮ್ಮರವಾಗಿ ಬೆಳೆದಿದೆ. ಶಿಕ್ಷಣದ ಮೂಲಕ ಮಕ್ಕಳನ್ನು ಉತ್ತಮ ಮನುಷ್ಯರನ್ನಾಗಿಸುವ, ಉತ್ತಮ ಪ್ರಜೆಯನ್ನಾಗಿಸುವ ಮಹಾನ್ ಕಾರ್ಯವನ್ನು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ತಪಸ್ಸಿನಂತೆ ಮಾಡಿದರು” ಎಂದು ತಿಳಿಸಿದರು.
“ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದರೂ ಕೂಡ ನೂರಕ್ಕೆ 78 ಮಂದಿಗೆ ಮಾತ್ರ ಅಕ್ಷರ ಕಲಿಕೆ ಸಾಧ್ಯವಾಗಿದೆ. ಉಳಿದವರಿಗೆ ಇನ್ನೂ ಸಿಕ್ಕಿಲ್ಲ. ವೈಜ್ಞಾನಿಕ-ವೈಚಾರಿಕ ಶಿಕ್ಷಣ ಸಿಗದೇ ಹೋದರೆ ಸಮಾಜಕ್ಕೆ ಜಡತ್ವ ಬಡಿಯುತ್ತದೆ. ಕುವೆಂಪು ಅವರ ಆಶಯದ ವಿಶ್ವ ಮಾನವ ಪ್ರಜ್ಞೆ ವಿಸ್ತರಿಸಿದಾಗ ಮಾತ್ರ ಸಮಾಜಕ್ಕೆ ಚಲನಶೀಲತೆ ಬರುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ನೀರು ತಮಿಳುನಾಡಿಗೆ ಬಿಡಬೇಡಿ, ಸರ್ಕಾರದೊಂದಿಗೆ ನಾವಿದ್ದೇವೆ: ಯತ್ನಾಳ್
“ಬಸವಾದಿ ಶರಣರ ಆಶಯದಂತೆ ಅಶಕ್ತರಿಗೆ ಶಕ್ತಿ ತುಂಬುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಜಾರಿ ಮಾಡಿದೆ. ಎಲ್ಲ ಜಾತಿ, ಧರ್ಮ ಹಾಗೂ ವರ್ಗದವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಜನರಿಗೆ ಒಪ್ಪಿಸಿದ್ದೇವೆ. ಬಸವಣ್ಣ, ಅಂಬೇಡ್ಕರ್, ಗಾಂಧಿ ಅವರ ಸಾಮಾಜಿಕ ನ್ಯಾಯದ ಆಶಯಗಳು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಕಾಯಕದಲ್ಲಿವೆ. ನಮ್ಮ ಸರ್ಕಾರ ಕೂಡ ಈ ಎಲ್ಲರ ಕಾಯಕ ಶ್ರೇಷ್ಠ ಪ್ರಜ್ಞೆಯಿಂದ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ” ಎಂದು ಹೇಳಿದರು.
ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮಿ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮಿ, ಸಿದ್ಧಗಂಗಾದ ಸಿದ್ಧಗಂಗಾ ಸ್ವಾಮಿ, ಉಡುಪಿಯ ವಿಶ್ವಪ್ರಸನ್ನ ತೀರ್ಥ ಶ್ರೀ, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ, ರವಿವಿಶಂಕರ್, ಗಣೇಶ್ ಪ್ರಸಾದ್, ಶ್ರೀವತ್ಸ, ಅನಿಲ್ ಚಿಕ್ಕಮಾದು ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಎಚ್.ವಿಶ್ವನಾಥ್ ಸೇರಿ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.