- ಜಿಲ್ಲೆಗೆ ಆಗಸ್ಟ್ ತಿಂಗಳಲ್ಲಿ ನೇರ ನಗದು ವರ್ಗಾವಣೆ 17.35 ಕೋಟಿ ಅನುದಾನ ಸ್ವೀಕೃತವಾಗಿದೆ.
- ಬೀದರ ಜಿಲ್ಲೆಯ 42,273 ಪಡಿತರ ಚೀಟಿ ಸದಸ್ಯರುಗಳ ಇ-ಕೆವೈಸಿ ಮಾಡಿಸಿಕೊಂಡಿಲ್ಲ.
ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಒಟ್ಟು 10 ಕೆ.ಜಿ. ಅಕ್ಕಿ ಆಹಾರಧಾನ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಿತರಿಸಲಾಗುವ 05 ಕೆ.ಜಿ. ಅಕ್ಕಿ ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 05 ಕೆ.ಜಿ. ಅಕ್ಕಿ ಆಹಾರಧಾನ್ಯ ವಿತರಿಸಲು ಉದ್ದೇಶಿಸಿದ್ದು, ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಾಗಿ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
“ಬೀದರ ಜಿಲ್ಲೆಗೆ ಸರ್ಕಾರದಿಂದ ಆಗಸ್ಟ್ ತಿಂಗಳಲ್ಲಿ ನೇರ ನಗದು ವರ್ಗಾವಣೆ ಸಂಬಂಧ ಒಟ್ಟು ರೂ.17.35 ಕೋಟಿ ಅನುದಾನ ಸ್ವೀಕೃತವಾಗಿದ್ದು. ಆಗಸ್ಟ್ ತಿಂಗಳಿಗೆ 2,82,221 ಪಡಿತರ ಚೀಟಿಗಳ 1,063,965 ಫಲಾನುಭವಿಗಳು ಡಿ.ಬಿ.ಟಿ ಪಾವತಿ ಅರ್ಹವಾಗಿದ್ದು, ಇದರಲ್ಲಿ 2,09,195 ಪಡಿತರ ಚೀಟಿಗಳ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಒಟ್ಟು 12,92,35,020ರೂ.ಗಳನ್ನು ಡಿ.ಬಿ.ಟಿ ಮೂಲಕ ಹಣ ವರ್ಗಾಯಿಸಲಾಗಿದೆ. ಇದರಿಂದ 7,86,068 ಫಲಾನುಭವಿಗಳು ಲಾಭ ಪಡೆದಿರುತ್ತಾರೆ ಮತ್ತು ಈಗಾಗಲೇ ಪಡಿತರ ಚೀಟಿ ಮುಖ್ಯಸ್ಥರ ಫಲಾನುಭವಿಗಳ ಖಾತೆಗೆ ಹಣ ಕೂಡ ಜಮೆಯಾಗಿವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಜಿಲ್ಲೆಯಲ್ಲಿ ಇನ್ನು 73,026 ಪಡಿತರ ಚೀಟಿಗಳ 2,77,897 ಫಲಾನುಭವಿಗಳ ಖಾತೆಗೆ ಹಣ ಪಾವತಿ ಮಾಡುವುದು ಪ್ರಗತಿಯಲ್ಲಿದೆ. ಪಡಿತರ ಚೀಟಿಗಳ ಕುಟುಂಬದ ಮುಖ್ಯಸ್ಥರ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳು, ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಮಾಡದೇ ಇರುವವರು, ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳು ಇಲ್ಲದೇ ಇರುವವರು, ಬ್ಯಾಂಕ್ ಖಾತೆಗಳು ಎನ್‌ಪಿಸಿಐ ಆ್ಯಕ್ಟಿವ್ ಮಾಡಿಸಿಕೊಳ್ಳದವರು, ಪಡಿತರ ಚೀಟಿಗಳಲ್ಲಿ ಇ-ಕೆವೈಸಿ ಮಾಡಿಸದೇ ಇರುವವರು, ಅಂತಹ ಪಡಿತರ ಚೀಟಿ ಫಲಾನುಭವಿಗಳು ಡಿ.ಬಿ.ಟಿ ಹಣ ಪಾವತಿಗೆ ಅರ್ಹರಾಗಿರುವುದಿಲ್ಲ” ಎಂದಿದ್ದಾರೆ.
42,273 ಪಡಿತರ ಚೀಟಿ ಸದಸ್ಯರುಗಳ ಇ-ಕೆವೈಸಿ ಇಲ್ಲ:
ಇಲ್ಲಿಯವರೆಗೆ ಜಿಲ್ಲೆಯಲ್ಲಿ 42,273 ಪಡಿತರ ಚೀಟಿ ಸದಸ್ಯರುಗಳ ಇ-ಕೆವೈಸಿ ಮಾಡಿಸಿಕೊಂಡಿರುವುದಿಲ್ಲ.ಅಂತಹವರು ಕೂಡಲೇ ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡುಗಳ ಸದಸ್ಯರ ಇ-ಕೆವೈಸಿ ಮಾಡಿಸಿಕೊಳ್ಳವಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
“ಡಿ.ಬಿ.ಟಿ ಹಣ ಪಾವತಿಯನ್ನು ಪಡೆಯದೇ ಇರುವವರು ತಕ್ಷಣವೇ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದ್ದನ್ನು ಸಕ್ರಿಯ ಮಾಡಿಸಿಕೊಳ್ಳುವುದು, ಆಧಾರ್ ಜೋಡಣೆ ಮಾಡದೇ ಇದ್ದವರು ತಮ್ಮ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳುವುದು, ಬ್ಯಾಂಕ್ ಖಾತೆಗಳು ಎನ್‌ಪಿಸಿಐ ಆ್ಯಕ್ಟಿವ್ ಮಾಡಿಸಿಕೊಳ್ಳತಕ್ಕದ್ದು, ಬ್ಯಾಂಕ್ ಖಾತೆಗಳು ಹೊಂದದೇ ಇರುವವರು ಅಂಚೆ ಕಛೇರಿ ಬ್ಯಾಂಕ್‌ಗಳಲ್ಲಿ (ಐಪಿಪಿಬಿ) ಅಡಿ ಅಥವಾ ಇತರೆ ಯಾವುದೇ ಬ್ಯಾಂಕ್‌ಗಳಲ್ಲಿ ಹೊಸ ಖಾತೆಗಳನ್ನು ತೆರೆಯಲು ತಿಳಿಸಲಾಗಿದೆ. ಇಂತಹ ಸಮಸ್ಯೆಗಳು ಕೂಡಲೇ ಬಗೆಹರಿಸಿಕೊಂಡಿದ್ದಲ್ಲಿ ಮುಂದಿನ ತಿಂಗಳ ಸೆಪ್ಟೆಂಬರ್ ತಿಂಗಳ ನಗದು ಹಣ ವರ್ಗಾವಣೆಗೆ ಅರ್ಹರಾಗುವರು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಸೀಲ್ದಾರರ ಕಛೇರಿ (ಆಹಾರ ಶಾಖೆ)ಗಳಲ್ಲಿ, ನ್ಯಾಯಬೆಲೆ ಅಂಗಡಿಗಳ ಮುಂದೆ ಬ್ಯಾಂಕ್ ಖಾತೆಗಳ ಸಮಸ್ಯೆಗಳನ್ನು ಹೊಂದಿರುವ ಫಲಾನುಭವಿಗಳ ಪಟ್ಟಿಯನ್ನು ಪ್ರದರ್ಶಿಸಲಾಗಿದೆ. ಅಂತಹ ಪಡಿತರ ಚೀಟಿ ಫಲಾನುಭವಿಗಳು ಕೂಡಲೇ ತಮ್ಮ ಬ್ಯಾಂಕ್ ಖಾತೆಗಳನ್ನು ಸಕ್ರೀಯಗೊಳಿಸುವುದು, ಆಧಾರ್ ಜೋಡಣೆ ಮಾಡಿಸಬೇಕು” ಎಂದು ಮನವಿ ಮಾಡಿದ್ದಾರೆ.