ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಾಗೂ ಶಿಗ್ಲಿ ಗ್ರಾಮದಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯಗಳ ಸಮಸ್ಯೆಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗಳ ಕುರಿತು ಈದಿನ.ಕಾಮ್, “ನೀರು, ಕರೆಂಟ್ ಕೇಳಿದ್ರ, ನಿಮ್ಜಾಗ ಎಲೈತಿ ಅಂತ ಹೇಳ್ತಾರೆ; ಅಲೆಮಾರಿ ಸಮುದಾಯಗಳ ಗೋಳು ಕೇಳೋರಾರು?” ಎಂದು ವಿಸ್ತೃತ ವರದಿ ಮಾಡಿತ್ತು. ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಶಿಗ್ಲಿ ಗ್ರಾಮ ಮತ್ತು ಲಕ್ಷ್ಮೇಶ್ವರ ಪಟ್ಟಣದ ದೊಡ್ಡೂರು ರಸ್ತೆಯ ಪಕ್ಕದಲ್ಲಿ ವಾಸಿಸುವ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಜನರನ್ನು ಭೇಟಿ ಮಾಡಿರುವ ಅಧಿಕಾರಿಗಳು ಅಲ್ಲಿ ವಾಸಿಸುವವರ ಸಮಸ್ಯೆಗಳ ಕುರಿತು ಆಲಿಸಿದ್ದಾರೆ. ಜೊತೆಗೆ, ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ಬಳಿಕ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಶಿರಹಟ್ಟಿ ತಾಲೂಕು ಸಹಾಯಕ ನಿರ್ದೇಶಕ ಶರಣಯ್ಯ ಕುಲಕರ್ಣಿ, “ಶಿಗ್ಲಿ ಹಾಗೂ ಲಕ್ಷ್ಮೇಶ್ವರ ಪಟ್ಟಣದ ಅಲೆಮಾರಿ ಜನಾಂಗದವರನ್ನು ಭೇಟಿ ಮಾಡಿದ್ದೇನೆ. ಇಲ್ಲಿಯ ಜನರಿಗೆ ಜಾಗ ಇಲ್ಲ, ಮನೆಗಳಿಲ್ಲ. ಅವರೆಲ್ಲರೂ ಗುಡಿಸಲುಗಳಲ್ಲಿದ್ದಾರೆ. ಗಟಾರ ತೊಂದರೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಎಲ್ಲ ಕುಟುಂಬಗಳ ಸರ್ವೆ ಮಾಡಿ, ಅರ್ಹರ ಪಟ್ಟಿ ತಯಾರಿಸಿ, ಅಗತ್ಯ ದಾಖಲಾತಿಗಳನ್ನು ಕೊಟ್ಟರೆ, ಸಮಾಜ ಕಲ್ಯಾಣ ಇಲಾಖೆಗೆ ವರದಿ ಒಪ್ಪಿಸಿ, ಸರ್ಕಾರದಿಂದ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಕೇಶವ ಕಟ್ಟಿಮನಿ, ಅಲೆಮಾರಿ ಸಮುದಾಯಗಳ ಮುಖಂಡ ರಾಘವೆಂದ್ರ, ರಮೇಶ ಹಂಗನಕಟ್ಟಿ, ಸುರೇಶ ಹರದಗಟ್ಟಿ ಸೇರಿದಂತೆ ಇತರರು ಇದ್ದರು.