ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಯೊಬ್ಬರು ಕೆಲಸಕ್ಕೆ ತೆರಳುತ್ತಿದ್ದ ವೇಳೆ, ರಸ್ತೆಯ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ದಾಳಿ ಮಾಡಿದ್ದು, ಸದ್ಯ ಘಟನೆಗೆ ಸಂಬಂಧಿಸಿದಂತೆ ಜೆಬಿ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
ಆಗಸ್ಟ್ 29ರಂದು ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಇತ್ತೀಚೆಗೆ ನಿರ್ಮಿಸಲಾದ ಎಚ್‌ಎಎಲ್ ಅಂಡರ್‌ಪಾಸ್ ಬಳಿ ಈ ಘಟನೆ ಸಂಭವಿಸಿದೆ.
ಇಸ್ರೋ ವಿಜ್ಞಾನಿ ಆಶಿಶ್ ಲಂಬಾ ಅವರು ಎಕ್ಸ್ (ಟ್ವಿಟರ್)ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದು, “ಇಸ್ರೋ ಕಚೇರಿಗೆ ತೆರಳುತ್ತಿದ್ದಾಗ, ಹೆಲ್ಮೆಟ್ ಧರಿಸದೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದರು. ನಮ್ಮ ಕಾರಿನ ಮುಂದೆ ಇದ್ದಕ್ಕಿದ್ದಂತೆ ಬಂದಾಗ, ನಾನು ಸಡನ್ ಬ್ರೇಕ್ ಹಾಕಿದೆ. ಬಳಿಕ ಸ್ಕೂಟರ್ ಸವಾರ ನನ್ನ ಕಾರಿನ ಮುಂದೆ ವಾಹನ ನಿಲ್ಲಿಸಿದನು” ಎಂದು ಬರೆದುಕೊಂಡಿದ್ದಾರೆ.
“ವಾಹನ ಸವಾರ ಕಾರಿನ ಮುಂದೆ ಬಂದು ಜಗಳವಾಡಲು ಪ್ರಾರಂಭಿಸಿದರು. ಅವರು ನನ್ನ ಕಾರನ್ನು ಎರಡು ಬಾರಿ ಒದ್ದರು. ದಯವಿಟ್ಟು ಅಗತ್ಯ ಕ್ರಮ ಕೈಗೊಳ್ಳಿ” ಎಂದು ನಗರ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಆಶಿಶ್ ಅವರು ತಮ್ಮ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಹಿಡಿದ ವಿಡಿಯೊ ತುಣುಕನ್ನು ಮತ್ತು ಚಿತ್ರಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಟ್ಟಡದಿಂದ ಬಿದ್ದು ಉದ್ಯಮಿ ಅನುಮಾನಾಸ್ಪದ ಸಾವು
ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂತಹ ವರ್ತನೆಯ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
“ಈ ಘಟನೆಗೆ ಸಂಬಂಧಿಸಿದಂತೆ ಜೆಬಿ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ” ಎಂದು ಬೆಂಗಳೂರು ನಗರ ಪೊಲೀಸ್ ಟ್ವೀಟ್ ಮಾಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ತ್ವರಿತವಾಗಿ ಕ್ರಮ ಕೈಗೊಂಡಿದ್ದಕ್ಕೆ ಇಸ್ರೋ ವಿಜ್ಞಾನಿ ಬೆಂಗಳೂರು ಪೊಲೀಸರಿಗೆ ಧನ್ಯವಾದ ತಿಳಿಸಿದರು.