- 2006ರ ನಿಯಮಗಳನ್ನು ಪರಿಷ್ಕರಿಸಲು ಕೆಇಎ ಸಭೆಯಲ್ಲಿ ನಿರ್ಧಾರ
- ಕ್ರೀಡಾ ಕೋಟಾ; ಮುಂದಿನ ಶೈಕ್ಷಣಿಕ ವರ್ಷದಿಂದ ನಿಯಮ ಬದಲಾವಣೆ
ವೃತ್ತಿ ಶಿಕ್ಷಣ ಕೋರ್ಸ್ ಪ್ರವೇಶ ಸಂಬಂಧ ಕ್ರೀಡಾ ಕೋಟಾದ ನಿಯಮದ ಬಗ್ಗೆ ಬದಲಾವಣೆ ತರಲಾಗಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಹೊಸ ನಿಯಮ ಜಾರಿಗೆ ತರಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, 2006ರ ನಿಯಮಗಳನ್ವಯ ಪ್ರಸ್ತುತ ಇರುವ ಕ್ರೀಡಾ ಕೋಟಾದ ನಿಯಮಗಳಲ್ಲಿ ಕೆಲವು ಅಸ್ಪಷ್ಟತೆಯಿದ್ದು, ಅದನ್ನು ಪರಿಷ್ಕರಿಸಲು ನಿರ್ಧರಿಸಲಾಯಿತು.
ರಾಜ್ಯ ಕ್ರೀಡಾ ಇಲಾಖೆ ಈಗಾಗಲೇ ಪರಿಷ್ಕೃತ ಕ್ರೀಡಾ ಕೋಟಾದ ವರದಿಯನ್ನು ನೀಡಿದ್ದು, ಈ ಪ್ರಕಾರ ಅಧಿಕೃತವಾಗಿ ರಾಜ್ಯ ಅಥವಾ ರಾಷ್ಟ್ರವನ್ನು ಪ್ರತಿನಿಧಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ಕ್ರೀಡಾ ಕೋಟಾ ಮೀಸಲಾತಿ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗುತ್ತದೆ.
ಕೆ.ಇ.ಎ ಕಟ್ಟಡದ ಮರುವಿನ್ಯಾಸ ಹಾಗೂ ಹೆಚ್ಚುವರಿ ಕಟ್ಟಡ ನಿರ್ಮಾಣ ಕುರಿತು ಚರ್ಚಿಸಲಾಯಿತು. ಸುಸಜ್ಜಿತ ನೂತನ ಕಟ್ಟಡದ ಅವಶ್ಯಕತೆಯಿರುವುದರಿಂದ ಈ ಬಗ್ಗೆ ಕರ್ನಾಟಕ ಹೌಸಿಂಗ್ ಬೋರ್ಡ್ ಇಂಜಿನಿಯರ್‌ಗಳು ನೀಡಿದ ಪಿಪಿಟಿ ವೀಕ್ಷಿಸಲಾಯಿತು. ಸುಮಾರು 33 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣದ ಕಾರ್ಯವನ್ನು ಕೈಗೊಳ್ಳುವ ಬಗ್ಗೆ ಒಪ್ಪಿಗೆ ನೀಡಲಾಯಿತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಗೆ 9 ವರ್ಷಗಳಿಂದ ಕಾಣದ ಅಕ್ಕತಂಗಿಯರ ಸಂಕಟ ಈಗ ಕಂಡಿದ್ದು ಹೇಗೆ?
ಸಭೆಗೆ ಮುನ್ನ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಸಿಇಟಿ ಕೇಂದ್ರದಲ್ಲಿ ಕೌನ್ಸಿಲಿಂಗ್‌ಗೆ ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕಾಲೇಜುಗಳ ಆಯ್ಕೆ ಸಂಬಂಧ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ತರಬೇತಿ ನೀಡುವ ಕಾರ್ಯವನ್ನು ಮುಂದಿನ ವರ್ಷದಿಂದ ಕೈಗೊಳ್ಳಲು ಸೂಚಿಸಲಾಯಿತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಡಾ. ಶರಣಪ್ರಕಾಶ್ ಪಾಟೀಲ್, ಪ್ರಭಾರ ಕಾರ್ಯದರ್ಶಿ ಉಮಾಶಂಕರ್, ಆಯುಕ್ತರಾದ ಜಗದೀಶ್, ಕೆಇಎ ಕಾರ್ಯನಿರ್ವಾಹ ನಿರ್ದೇಶಕರಾದ ಶ್ರೀಮತಿ ರಮ್ಯ ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.