ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಭರತ್ ರೆಡ್ಡಿ ಸೇರಿ ಐದು ಮಂದಿ ಎಂಎಲ್‌ಎಗಳು ಮಾತ್ರ ಇಲ್ಲ. ಕ್ಷೇತ್ರದ 2ಲಕ್ಷ 40 ಸಾವಿರ ಜನರೂ ಎಂಎಲ್‌ಎಗಳೇ ಎಂದು ಕೆಆರ್‌ಪಿಪಿಗೆ ಕಾಂಗ್ರೆಸ್ ಮುಖಂಡ ಚಾನಳ್ ಶೇಖರ್ ತಿರುಗೇಟು ನೀಡಿದ್ದಾರೆ.
ಬಳ್ಳಾರಿ ನಗರಕ್ಕೆ ಚುನಾಯಿತ ಶಾಸಕ ಭರತ್ ರೆಡ್ಡಿ ಮಾತ್ರವಲ್ಲ. ಅವರ ಕುಟಂಬಸ್ಥರೂ ಸೇರಿ ಐವರು ಶಾಸಕರಿದ್ದಾರೆಂದು ಕೆಆರ್‌ಪಿಪಿ ಮುಖಂಡ ಕಿಡಿಕಾರಿದ್ದರು. ಅವರ ಮಾತಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಚಾವಳ್ ಶೇಖರ್, ಕ್ಷೇತ್ರದ ಪ್ರತಿಯೊಬ್ಬರೂ ಶಾಸಕರೇ ಆಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
“ಜನಾರ್ಧನ ರೆಡ್ಡಿ ಗಂಗಾವತಿಯಲ್ಲಿ ಶಾಸಕನಾಗಿದ್ದಾರೆ. ಅವರು ಅಲ್ಲಿನ ಅಭಿವೃದ್ಧಿ ಮಾಡುವುದರ ಬಗ್ಗೆ ಚಿಂತಿಸಬೇಕು. ಅವರಿಗೆ ಬಳ್ಳಾರಿ ಅಭಿವೃದ್ಧಿ ಬಗ್ಗೆ ಏಕೆ ಚಿಂತೆ” ಎಂದು ಶಾಸಕ ಭರತ್ ರೆಡ್ಡಿ ಬೆಂಬಲಿಗರು ವಾಗ್ದಾಳಿ ನಡೆಸಿದರು.
“ಮೂರು ತಿಂಗಳಲ್ಲಿ ನಗರದಲ್ಲಿ ಸಾಕಷ್ಠು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದಕ್ಕೆ ಶಾಸಕರು ಮತ್ತು ಅವರ ಕುಟುಂಬ ಶ್ರಮಿಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಭರತ್ ರೆಡ್ಡಿ ಅವರಿಗೆ ಟಿಕೆಟ್ ತಪ್ಪಿಸಲು ನೀವು ಯಾರ ಹತ್ತಿರ ಹೋಗಿ ಬಕೆಟ್ ಹಿಡಿಯುವ ಕೆಲಸ ಮಾಡಿದ್ದೀರಿ ಎಂಬುದು ನಮಗೆ ಗೊತ್ತಿದೆ. ನಿಮ್ಮಂಥವರು ನಮ್ಮ ನಾಯಕನ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ” ಎಂದು ತಿರುಗೇಟು ನೀಡಿದರು.
“ಗಣಿ ಸಂಪತ್ತು ಲೂಟಿ ಮಾಡಿದ ಜನಾರ್ಧನ ರೆಡ್ಡಿಗೆ ನಮ್ಮ ಶಾಸಕ ನಾರಾ ಭರತ್ ರೆಡ್ಡಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ನಿಮ್ಮ ಅಧಿಕಾರದ ಅವಧಿಯಲ್ಲಿನ ಆಡಳಿತ ಮತ್ತು ಅಕ್ರಮ ಗಣಿಗಾರಿಕೆ ನೋಡಿ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಹೆಸರು ಇಟ್ಟಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರಣೆಯಲ್ಲಿ ಜನಾರ್ಧನ್ ರೆಡ್ಡಿ ಅವರನ್ನು ಉಚ್ಛ ನ್ಯಾಯಾಲಯ ಗಡಿಪಾರು ಮಾಡಿದೆ” ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡ ಸತೀಶ್ ರೆಡ್ಡಿ ಮಾತನಾಡಿ, “ಜನಾರ್ಧನ ರೆಡ್ಡಿ ಅವರು ಹಿಂಬಾಗಿಲ ರಾಜಕಾರಣ ಮಾಡಿದವರು. ಅವರು ಜನರ ಸೇವೆ ಮಾಡಲಿಲ್ಲ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಂತ ಹೆಸರಿಟ್ಟಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕರ್ನಾಟಕ ಮತ್ತು ಆಂಧ್ರದ ಗಡಿ ಒತ್ತುವರಿ ಮಾಡಿದ ಬಗ್ಗೆ ಸಂತೋಷ್ ಹೆಗ್ಡೆ ಅವರು ವಿವರವಾಗಿ ವರದಿ ನೀಡಿದ್ದಾರೆ” ಎಂದರು.
“ಶಾಸಕ ಭರತ್ ರೆಡ್ಡಿ ಅವರು ಯಾವುದೋ ಅದೃಷ್ಟದಿಂದ ಎಂಎಲ್‌ಎ ಆಗಿಲ್ಲ. ಜನರು ಆರಿಸಿರುವ ಜನನಾಯಕನಾಗಿ ಎಂಎಲ್‌ಎ ಆಗಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಗಾಂಜಾ ಗಿರಾಕಿ ಎಂದು ನೀವು ಹೇಳಿದರೆ, ಅವರು ಜಿಲ್ಲೆಯಲ್ಲಿ ಗಾಂಜಾ, ಮಟ್ಕಾ, ಕ್ಲಬ್ ನಿಷೇಧ ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ನಗರಕ್ಕೆ ಐವರು ಶಾಸಕರಿದ್ದಾರೆ; ಕೆಆರ್‌ಪಿಪಿ ಮುಖಂಡ ಕಿಡಿ
“ದೇವಿ ರೆಡ್ದಿ ಮೃತಪಟ್ಟ 22 ವರ್ಷದ ಬಳಿಕ ದೂರು ದಾಖಲಿಸಿದ್ದಾರೆ. ಪ್ರಕರಣ ಸದ್ಯ ಕೋರ್ಟ್‌ನಲ್ಲಿದೆ ಅಪರಾಧಿಗಳು ಯಾರು ಎಂಬುದನ್ನು ಕೋಟ್ ನಿರ್ಧರಿಸಲಿದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಭಿಲಾಶ್ ಬಯೋಪಾಟಿ ವಿಷ್ಣು, ನಂದೀಶ್, ಮಿಂಚು ಸೀನಾ, ಜಗನ್, ರಾಮಾಂಜನೇಯ, ಪೆರಂ ವಿವೇಕ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇದ್ದರು.