ಮುಕ್ಕಣ್ಣೇಶ್ವರ ತೆಂಗಿಗೆ, ತ್ರಿನೇತ್ರಗಳಿಂದ ಅಷ್ಟೇ ಅಲ್ಲ ಮೈಯಲ್ಲಾ ಕಣ್ಣೀರು. "ಕಾಯಿ ಹೊಡೆದು ಕಂಟಕ ಕಳಿ" ಎನ್ನುವ ಮಾತಿದೆ. ಆದರೆ ದಶಕದಿಂದಲೂ ತೆಂಗಿನ ಮರಗಳಿಗೆ ಪರಿಹಾರವೇ ಕಾಣದಂತಹ ಕಂಟಕ. ತೆಂಗು ಶಾಶ್ವತವಾಗಿ ರೋಗ ಮತ್ತು ಕೀಟ ಬಾಧೆಗಳ ಮರಣಶಯ್ಯೆಯ ಮೇಲೆ ಮಲಗತೊಡಗಿದೆ, ಬೆಳೆಗಾರರಿಗೆ ಇನ್ನಿಲ್ಲದ ಕಷ್ಟ ಕೊಡುತ್ತಿದೆ.
ತಗ್ಗಿನ ಪ್ರದೇಶದಲ್ಲಿ ತೆಂಗು ಬಹಳ ಬೇಗ ಬೆಳೆಯುತ್ತದೆ, ಮಳೆ ಬಂದಾಗ ನೀರಿನ ಆಸರೆ ದೊರೆತು, ಬೇಸಿಗೆ ಮುಗಿಯುವವರೆವಿಗೂ ಭೂಮಿಯ ತನುವಾರದೆ ತೋಟ ಉಳಿಯುತ್ತದೆ ಎಂದು ರೈತರು ಆರಂಭದಲ್ಲಿ ತೆಂಗು ನೆಡಲು ಅಂದಾಜಿಸಿದರು. ತಗ್ಗಿನ ತನುವು ತೋಟಗಾರಿಕೆ ಬೆಳೆ ತೆಂಗಿಗೆ ಗಡಿಗೆಯೊಳಗಿನ ಮೊಸರಿದ್ದ ಹಾಗೆ. ಹಾಗಾಗಿ, ದೀರ್ಘಾವದಿ ತೋಟಗಾರಿಕೆ ಬೆಳೆಯನ್ನು ತಗ್ಗಿಗೆ ಹೊಂದಾಣಿಕೆ ಮಾಡಲು ಹೋಗಿ ಹಳ್ಳಗಳನ್ನು ತೆಂಗಿನ ತೋಟಗಳನ್ನಾಗಿ ಮಾರ್ಪಡಿಸಿಕೊಂಡರು ಬೆಳೆಗಾರರು. ಬರುಬರುತ್ತಾ, ತೋಟಗಾರಿಕೆಯ ಭೌಗೋಳಿಕ ಸನ್ನಿವೇಶಗಳೇ ತಾರಾಮಾರಿಯಾದವು. ಒಂದು ಹುಲ್ಲಿನ ಗಿಡ ಬೆಳೆಯುವ ತಾವನ್ನೂ ಬಿಡದೆ ಹುಡುಕಿ ಹುಡುಕಿ ತೆಂಗಿನ ಸಸಿ ನೆಡಲು ಬೆಳೆಗಾರರು ಮುಂದಾದರು. ಈಗ ನಿಸರ್ಗ ತೆಂಗಿನ ಬೆಳೆಯ ವಿರುದ್ದ ತಿರುಗಿಬಿದ್ದಿದೆ.
ತೋಟಗಳ ಬೇಲಿಯ ವನಸಿರಿ ಮತ್ತು ವನ್ಯಜೀವಿ ಸಂಪತ್ತನ್ನು ಒಕ್ಕಲೆಬ್ಬಿಸಿ ತಂತಿ ಬೇಲಿ ಹಾಕಿ ಬೇಲಿಯ ಜಾಗವನ್ನೇ ಕಬಳಿಸಿ ತೆಂಗು ಕಟ್ಟಿದ್ದುದ್ದರ ಫಲವಾಗಿ, ಬೇಲಿಯ ಮೇಲಿದ್ದ ನುಸಿ ಕ್ರಮ ಕ್ರಮವಾಗಿ ತೆಂಗಿನ ಹರಳು, ಕುರುಬು, ಕಾಯಿ ತಿನ್ನಲಾರಂಭಿಸಿತು. ನೈಸರ್ಗಿಕ ಬೇಲಿಯ ಸನಿವಾಸಿಗಳಾಗಿದ್ದ ಹಾವು, ಆಮೆ, ಪಕ್ಷಿಗಳು ತೋಟಗಳನ್ನು ತೊರೆದು ವಲಸೆ ಹೋದವು. ಇಲಿ, ಅಳಿಲುಗಳು ತೆಂಗಿನ ಮರಗಳನ್ನೇ ಆಹಾರ ವಸತಿಗಾಗಿ ಆಶ್ರಯಿಸುವಂತಾಯಿತು. ತೋಟಗಾರರು ಅವರ ಬೇಲಿ ಜಾಗವನ್ನು ಅವರೇ ಕಬಳಿಸಿ ಅಲ್ಲಿಯ ಸನಿವಾಸಿ ಜೀವಿಗಳನ್ನು ಓಡಿಸಿ ತೆಂಗಿಗೆ ಜಾಗ ಕೊಡಲಾಗಿ ತೆಂಗು ವರ್ಷೊಂಭತ್ತು ಕಾಲ ಗೋಳೋ ಎಂದು ಗೋಗರೆದು ಕಣ್ಣೇರಿಡುವಂತಾಯಿತು.
ಇದನ್ನು ಓದಿದ್ದೀರಾ?: ನಮ್ ಜನ | ಕೋಲೆ ಬಸವನೊಂದಿಗೆ ಬೀದಿಯಲ್ಲಿ ಬದುಕುವ ನೆಲೆ ಇಲ್ಲದ ಅಲೆಮಾರಿಗಳು
ಕೋಡಿಹಳ್ಳ, ತೊರೆಸಾಲು, ಈಚಲು ಹಳ್ಳ, ಕೇದಿಗೆ ಹಳ್ಳ, ಹದ್ದಿನ ಹಳ್ಳ, ಕಣಿವೆ ಹಳ್ಳ, ಹೂವಿನ ಹಳ್ಳ, ಗೂಬೆಹಳ್ಳ, ಗಿಡಗನ ಹಳ್ಳ, ಕಾಗೆ ಹಳ್ಳ, ತಾಳೆ ಮಂಡಿಗೆ ಹಳ್ಳ, ಕೆಂಗುದುರಿನ ಹಳ್ಳ, ಚಿರತೆಕಲ್ಲಿನ ಹಳ್ಳ, ಆಲದ ಹಳ್ಳ, ಹರಳೀಮರದ ಹಳ್ಳ, ಕೆರೆ ಹಳ್ಳ, ಮಡ್ಡಿ ಹಳ್ಳ, ನೇರಲ ಹಳ್ಳ, ಇವೇ ಮೊದಲಾದ ಹಳ್ಳಗಳ ಅಸ್ಥಿಗಳನ್ನು ಮುರಿದು ಅವುಗಳ ಎದೆಗಳ ಮೇಲೆ ಗಜಗುಂಡಿಗಳನ್ನು ತೋಡಿ ತೆಂಗು ನೆಡಲಾಯಿತು. ಇದರಿಂದ ಹಳ್ಳಗಳಲ್ಲಿ ವಾಸಿಸುವ ರೈತ ಸ್ನೇಹಿ ವನ್ಯಜೀವಿ ಪರಿಸರವೇ ಸರ್ವನಾಶವಾಯಿತು.
ಬೆಳೆಗಾರರು ನೈಸರ್ಗಿಕ ಬೇಲಿಗಳ ಜಾಗ ಖಾಲಿ ಮಾಡಿಸಿ, ತಂತಿ ಬೇಲಿ ಕಂಬಗಳ ಮೊರೆ ಹೋಗಿದ್ದುದ್ದರಿಂದ, ಆಹಾರದ ಪಾಡಿಗೆ ಬೇಲಿ ಆಸರೆ ಪಡೆದು ಬದುಕುತಿದ್ದ ವನ್ಯಜೀವಿಗಳು ತೆಂಗಿನ “ಕಾಯಿ ಕೊರಕ”ಗಳಾಗಿ ಮಾರ್ಪಟ್ಟವು. ನೈಸರ್ಗಿಕ ಬೇಲಿಗಳ ಆಸರೆ ಇನ್ನಿಲ್ಲವಾಗಿ ತೆಂಗಿನ ತೋಟಗಳು ಬಿಸಿಲು ಮಳೆ ತಡೆಯದಾದವು. ಬೇಲಿ ಮರೆಯ ತೆಂಗು, ಬಾರೆ ಮೇಲೆ ಬೆಳೆಯುವುದು ಕಷ್ಟಸಾಧ್ಯವಾಯಿತು. ವಿವಿಧ ಮರವಳಿಗಳ ನೈಸರ್ಗಿಕ ತೋಟದ ಬೇಲಿಗಳು ನಿರ್ನಾಮವಾಗಿ ತೆಂಗಿಗೆ ತಾನು ಒಬ್ಬಂಟಿ ಎನಿಸಿತೇನೋ? ಅದರ ಮನೋ ವಿಕಾಸ ಕುಗ್ಗಿರಬಹುದು? ಒಟ್ಟಾರೆ ತೆಂಗಿನ ತೋಟಗಳನ್ನು ರೋಗಗಳು ನಡುಗಿಸತೊಡಗಿವೆ.
ತಡೆ ಅಣೆಗಳನ್ನು ಹಳ್ಳಗಳಿಗೆ ಹಾಕಲಾಗಿ ಹಳ್ಳಗಳ ಪರಿಸರದಲ್ಲಿ ನೀರು ಹರಿಯಲು ತಾವಿಲ್ಲದೆ, ತೆಂಗಿನ ತೋಟಗಳಲ್ಲಿ ತಿಂಗಳಾನುಗಟ್ಟಲೆ ನೀರು ನಿಲ್ಲುವಂತಾಯಿತು. ಹಳ್ಳಗಳಿಗೆ ಹೊರಮಣ್ಣು ತುಂಬಿ ಅವುಗಳ ಒಳ ಹರಿವುಗಳನ್ನು ಮುಚ್ಚಿ ಸಮತಟ್ಟು ಮಾಡಲಾಯಿತು. ಹಳ್ಳಗಳು ತೆಂಗಿನ ತೋಟಗಳ ಮೈದಾನಗಳಾದವು. ಹೊಳೆ ಬಾಗಿಲುಗಳಿಲ್ಲದ ಉದಿ ಬದುಗಳು ತೆಂಗಿನ ಮರಗಳನ್ನು ಸುತ್ತುವರಿದು ನಿಂತವು. ಕೆರೆಗೆ ಬಿದ್ದವರು ನೀರು ಕುಡಿದು ಉಸಿರುಕಟ್ಟಿ ಸಾಯುವ ಹಾಗೆ, ಸಾಲು ಸಾಲು ತೆಂಗಿನ ತೋಪುಗಳು ಉಸಿರುಕಟ್ಟಿ ಮರಣ ಹೊಂದುತ್ತಿವೆ, ನೀರು ಹರಿಯಲು ಜಾಗವಿಲ್ಲದೆ. ತೆಂಗಿನ ಮರಗಳ ಸುಳಿ ಬೀಳುವಂತಹ ರೋಗ ಮತ್ತು ಕೀಟ ಬಾಧೆಗಳು ತೆಂಗಿನ ಮೈ ಉಂಡುಕೊಂಡಿವೆ. ಮರಗಳು ಸಾಯುವಾಗ ವರ್ಷಾನುಗಟ್ಟಲೆ ದುಃಖ ಕೊಡುತ್ತವೆ. ಗೆದ್ದಲಿಡಿದು ಗರಿಗಳು ಜೋತು ಬಿದ್ದು ವಿಕಾರಗೊಳ್ಳುತ್ತವೆ. ಕ್ರಮೇಣ ಶಿರಶ್ಚೇದನಗೊಂಡು ಅವುಗಳ ಕೊರಳು ಮುರಿದು ಉದ್ದನೆಯ ಗೂಟಗಳಾಗಿ ನಿಲ್ಲುತ್ತವೆ. ಮೈಯಲ್ಲಾ ಅಲ್ಲಲ್ಲೆ ತಾತಾ ತೂತಾಗಿ ರಸ ಸೋರಿಸುತ್ತವೆ.

ತೆಂಗನ್ನು ಮುಕ್ಕಣ್ಣೇಶ್ವರ ಎಂದು ಕರೆಯಲಾಗುತ್ತದೆ. ಅಂತಹ ಮುಕ್ಕಣ್ಣೇಶ್ವರ ತೆಂಗಿಗೆ, ತ್ರಿನೇತ್ರಗಳಿಂದ ಅಷ್ಟೇ ಅಲ್ಲ ಮೈಯಲ್ಲಾ ಕಣ್ಣೀರು. “ಕಾಯಿ ಹೊಡೆದು ಕಂಟಕ ಕಳಿ” ಎನ್ನುವ ಮಾತಿದೆ. ಆದರೆ ದಶಕದಿಂದಲೂ ತೆಂಗಿನ ಮರಗಳಿಗೆ ಪರಿಹಾರವೇ ಕಾಣದಂತಹ ಕಂಟಕ. “ತಲೆಯ ಮೇಲೆ ಹೋಗುವುದು ಒಂದು ಎಲೆಯ ಮೇಲೆ ಹೋಗಲಿ” ಎಂಬ ಮಾತಿದೆ. ಆದರೆ ತೆಂಗು ಶಾಶ್ವತವಾಗಿ ರೋಗ ಮತ್ತು ಕೀಟ ಬಾಧೆಗಳ ಮರಣಶಯ್ಯೆಯ ಮೇಲೆ ಮಲಗತೊಡಗಿದೆ, ಬೆಳೆಗಾರರಿಗೆ ಇನ್ನಿಲ್ಲದ ಕಷ್ಟ ಕೊಡುತ್ತಿದೆ.
ಹಲ್ಲುಳ್ಳವರಿಗೆ ಕೊಬ್ಬರಿ ತಿನ್ನಲು ಒಣ ಹಣ್ಣು. ಸಾರಿಗೆ ಒಳ್ಳೆ ತುರಿಗಾಯಿ ತೆಂಗು. ಆರೋಗ್ಯವರ್ಧಕ ಮತ್ತು ಸೌಂದರ್ಯವರ್ಧಕ. ಬಹುಪಯೋಗಿ ತೆಂಗು ಕಲ್ಫವೃಕ್ಷ. ಆಹಾರ ತಯಾರಿ ಜೊತೆಗಿನ ರುಚಿವರ್ಧಕ. ಅಡುಗೆ ಮನೆಯ ಬಹುಪಯೋಗಿ ತೆಂಗಿಗೆ ಈಗ ಇನ್ನಿಲ್ಲದ ಕಷ್ಟ.

ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ