- ಸಚಿವರು ಮಾತು ಕೇಳುತ್ತಿಲ್ಲವೆಂದು ಈ ಹಿಂದೆ ಶಾಸಕರು ಪತ್ರ ಬರೆದಿದ್ದರು
- ತಮ್ಮ ಅಧ್ಯಕ್ಷತೆಯಲ್ಲಿ ಜೆಸ್ಕಾಂ ಅಧಿಕಾರಿಗಳ ಸಭೆ ಕರೆಯಿರಿ: ಸಿಎಂಗೆ ಆಗ್ರಹ
ಸಚಿವರು ತಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆಸಿದ್ದ ಶಾಸಕರು ಈಗ ಸಚಿವರಿರಲಿ ಅಧಿಕಾರಿಗಳೇ ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದಿದ್ದು, “ಅಧಿಕಾರಿಗಳು ತಮ್ಮ ಮಾತುಗಳನ್ನು ಕೇಳುತ್ತಿಲ್ಲ” ಎಂದು ಅಲವತ್ತುಕೊಂಡಿದ್ದಾರೆ.
“ಸಿದ್ದರಾಮಯ್ಯ ಅವರು ತಮ್ಮ ಅಧ್ಯಕ್ಷತೆಯಲ್ಲಿ ಜೆಸ್ಕಾಂ ಅಧಿಕಾರಿಗಳ ಸಭೆ ಕರೆಯಬೇಕು. ಜೆಸ್ಕಾಂ ವಿಭಾಗದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಉಪಕರಣಗಳ ಪೂರೈಕೆಯೂ ವಿಳಂಬವಾಗುತ್ತಿದ್ದು, ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಿಎಂ ಸಭೆ ಕರೆಯಬೇಕು” ಎಂದು ಕೋರಿದ್ದರೆ.
”ರೈತರ ಜಮೀನುಗಳ ನೀರಾವರಿ ಪಂಪ್‌ಸೆಟ್‌ಗಳಿಗೆ ಜೆಸ್ಕಾಂ ವಿದ್ಯುತ್ ಸರಬರಾಜು ಮಾಡುತ್ತಿದೆ. ಗಂಗಾ ಕಲ್ಯಾಣ ಯೋಜನೆಯ ರೈತರ ಪಂಪ್‌ಸೆಟ್‌ಗಳು ಕೂಡ ಇವೆ. ಹಿಂದಿನ ಎರಡು ತಿಂಗಳುಗಳಿಂದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಸರಬರಾಜು ಉಪಕರಣಗಳ ಬದಲಾವಣೆಯಾಗಿಲ್ಲ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಲಿತ ಪ್ರಾಧ್ಯಾಪಕಿಯ ಮೇಲೆ ಸಹೋದ್ಯೋಗಿಗಳು- ವಿದ್ಯಾರ್ಥಿಗಳಿಂದ ಹಲ್ಲೆ; ಎತ್ತ ಸಾಗುತ್ತಿದೆ ಭಾರತ?
ಮೊದಲೇ ಮಳೆ ಕೊರತೆಯಿಂದಾಗಿ ಪರದಾಡುತ್ತಿರುವ ರೈತರಿಗೆ ಜೆಸ್ಕಾಂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ರೈತರಿಗೆ ಸಂಕಷ್ಟ ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 25 ಕೆವಿಎ, 63 ಕೆವಿಎ ಮತ್ತು 100 ಕೆವಿಎ ಟ್ರಾನ್ಸ್‌ಫಾರ್ಮ್‌ಗಳ ಅಳವಡಿಕೆ ಮತ್ತು ಬದಲಾವಣೆ ಮಾಡಲು ಆಗಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ರಾಯರೆಡ್ಡಿ ಗಮನ ಸೆಳೆದಿದ್ದಾರೆ.
“‘ಯಲಬುರ್ಗಾ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್ ಗಳು ಸುಟ್ಟು ಹೋಗಿವೆ. ಆದ್ದರಿಂದ ಜೆಸ್ಕಾಂ ವ್ಯಾಪ್ತಿಯ ಅಧಿಕಾರಿಗಳು, ಇಲಾಖೆ ಸಚಿವರನ್ನು ಒಳಗೊಂಡ ಸಭೆ ನಡೆಸಬೇಕು” ಎಂದು ಬಸವರಾಜ ರಾಯರಡ್ಡಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.
ನಿಲ್ಲದ ಪತ್ರ ವ್ಯವಹಾರ
ಕಳೆದ ತಿಂಗಳು ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವು ಹಿರಿಯ ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಚಿವರುಗಳು ತಮ್ಮ ಮಾತು ಕೇಳುತ್ತಿಲ್ಲ, ಶಾಸಕಾಂಗ ಪಕ್ಷ ಸಭೆ ಕರೆಯುವಂತೆ ಮನವಿ ಮಾಡಿದ್ದರು. ಅದರಂತೆ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದು ಸಚಿವರುಗಳು ಶಾಸಕರ ಕೆಲಸ ಮಾಡುವಂತೆ ಸೂಚನೆ ನೀಡಿದ್ದರು.
ಹಾಗೆಯೇ “ಯಾವುದೇ ಶಾಸಕರು ಸಮಸ್ಯೆಗಳಿದ್ದರೆ ನನ್ನನ್ನು ಸಂಪರ್ಕಿಸಿ, ಬಹಿರಂಗವಾಗಿ ಮಾತನಾಡುವುದು ಬೇಡ” ಎಂದು ಹೇಳಿದ್ದರು. ಇಷ್ಟೆಲ್ಲ ಆದರೂ ಮತ್ತೆ ಹಿರಿಯ ಶಾಸಕರಾದ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.