- ‘ವೈಜ್ಞಾನಿಕ ನೆಲಗಟ್ಟಲ್ಲಿ ಕಾಂಗ್ರೆಸ್ ಅಚಲ ನಂಬಿಕೆ ಇಟ್ಟುಕೊಂಡಿದೆ’
- ‘ಬಿಜೆಪಿಯವರ ತರಹ ಮೂಢನಂಬಿಕೆ ಇಟ್ಟುಕೊಂಡ ಪಕ್ಷ ನಮ್ಮದಲ್ಲ’
ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಗೆ ಸ್ಥಳ ನೀಡಿದ್ದೇ ಕಾಂಗ್ರೆಸ್ ಸರ್ಕಾರ. ಆದರೆ, ನಾವು ಬಿತ್ತಿರುವ ಬೀಜದ ಮರದ ಹಣ್ಣನ್ನು ಬಿಜೆಪಿಯವರು ತಿನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಕಿಡಿಕಾರಿದರು.
ಖಾಸಗಿ ಕಾರ್ಯಕ್ರಮದ ನಿಮ್ಮಿತ್ತ ಕಲಬುರಗಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ವೈಜ್ಞಾನಿಕ ನೆಲಗಟ್ಟಲ್ಲಿ ಕಾಂಗ್ರೆಸ್ ಅಚಲ ನಂಬಿಕೆ ಇಟ್ಟುಕೊಂಡಿದೆ. ಬಿಜೆಪಿಯವರ ತರಹ ಮೂಢನಂಬಿಕೆ ಇಟ್ಟುಕೊಂಡ ಪಕ್ಷ ನಮ್ಮದಲ್ಲ” ಎಂದರು.
“ಚಂದ್ರಯಾನ-3ರಲ್ಲಿ ಕಾರ್ಯನಿರ್ವಹಿಸಿದ್ದ ಬಹುತೇಕ ವಿಜ್ಞಾನಿಗಳು ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬುದು ಗಮನಾರ್ಹ ಸಂಗತಿ” ಎಂದು ಹರಿಪ್ರಸಾದ್ ಹೇಳಿದರು.
“ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಘೋಷಣೆಗಳಿಗೇನು ಕಮ್ಮಿ ಇಲ್ಲ. ಬಿಜೆಪಿಯು ರಾಷ್ಟ್ರದ ವೈವಿಧ್ಯತೆ ಹಾಳು ಮಾಡುತ್ತಿದ್ದು, ವಿವೇಕಾನಂದರ ಆಶಯದ ವಿರುದ್ಧ ಬಿಜೆಪಿ ನಿರ್ಧಾರ ಕೈಗೊಳ್ಳುತ್ತಿದೆ. ಒನ್ ನೇಷನ್ ಒನ್ ಲೀಡರ್ ಅಂದರು ಅನ್ನಬಹುದು, ದೇಶದಲ್ಲಿ ಇಡಿ ಮತ್ತು ಸಿಬಿಐ ಬಳಸದೇ ಚುನಾವಣೆ ನಡೆಸಬೇಕಾಗಿದೆ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಲಿತ ಪ್ರಾಧ್ಯಾಪಕಿಯ ಮೇಲೆ ಸಹೋದ್ಯೋಗಿಗಳು- ವಿದ್ಯಾರ್ಥಿಗಳಿಂದ ಹಲ್ಲೆ; ಎತ್ತ ಸಾಗುತ್ತಿದೆ ಭಾರತ?
“ಸಚಿವ ಸ್ಥಾನ ಸಿಗದಿರುವುದಕ್ಕೆ ನಾನು ಮುನಿಸಿಕೊಂಡಿಲ್ಲ. ನಾನು ಪಕ್ಕಾ ಕಾಂಗ್ರೆಸ್ಸಿನವನು. ನನ್ನ ಹೋರಾಟ ಮಂತ್ರಿ ಸ್ಥಾನಕ್ಕಲ್ಲ, ಸಣ್ಣ ಸಮುದಾಯಗಳಿಗೆ ಅವಕಾಶ ಸಿಗಬೇಕು ಎಂಬುದು. ಈ ವಿಚಾರದಲ್ಲಿ ನಾನು ಬೀದಿಗಿಳಿದು ಹೋರಾಟ ಮಾಡಲು ಸಿದ್ಧ” ಎಂದರು.
“ಜವಾನನಿಂದ ಹಿಡಿದು ದಿವಾನನವರೆಗೆ ಒಂದೇ ಜಾತಿಯವರನ್ನು ಹಾಕಿಕೊಳ್ಳಲು ಆಗಲ್ಲ. ಎಲ್ಲ ವರ್ಗದವರಿಗೂ ಅವಕಾಶ ಕೊಡಬೇಕು ಎಂಬುದನ್ನು ಇಂದಿರಾ ಗಾಂಧಿಯವರನ್ನು ನೋಡಿ ಇಂದಿನವರು ಕಲಿಯಬೇಕು” ಎಂದು ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೇ ಕುಟುಕಿದರು.