ಹೊಸಪೇಟೆ ನಗರಸಭೆಯ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ನಗರಸಭೆಯ ಐವರು ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಅವರು ಆದೇಶ ಹೊರಡಿಸಿದ್ದಾರೆ.
ನಗರಸಭೆಯ ಕಚೇರಿ ವ್ಯವಸ್ಥಾಪಕ ಬಿ.ಕೃಷ್ಣಮೂರ್ತಿ ಅವರು ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಮಯಾವಳಿಗೆ ಒಳಪಡುತ್ತಾರೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಗಳು ಹೇಳಿದ್ದಾರೆ. ಅಲ್ಲದೆ, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಗ್ರೂಪ್ ಸಿ ದರ್ಜೆಯ ನಾಕರರಾದ ಪ್ರಭಾರ ಅಭಿಲೇಖಾಲಯದ ವಿಷಯ ನಿರ್ವಾಹಕ ಸುರೇಶಬಾಬು ಡಿ.ಎಚ್, ದ್ವಿತೀಯ ದರ್ಜೆ ಸಹಾಯಕ ಎಸ್ ಸುರೇಶ್, ನೈರ್ಮಲ್ಯ ಮೇಸ್ತ್ರಿ, ಪ್ರಭಾರ ಕರವಸೂಲಿಕಾರ ಎನ್ ಯಲ್ಲಪ್ಪ ಹಾಗೂ ಪೌರಕಾರ್ಮಿಕ ಮತ್ತು ಪ್ರಭಾರ ಕರವಸೂಲಿಗಾರ ಎಚ್ ಶಂಕರ್ ಅವರನ್ನೂ ಅಮಾನತುಗೊಳಿಸಲಾಗಿದೆ.
ಅಮಾನತು ಮತ್ತು ತನಿಖೆ ಕುರಿತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಜಿಲ್ಲಾಧಿಕಾರಿ ದಿವಾಕರ್ ಪತ್ರ ಬರೆದಿದ್ದಾರೆ. “ಆರೋಪಿತ ಐವರು ಸಿಬ್ಬಂದಿಗಳು ನಗರಸಭೆ ಅಭಿಲೇಖಾಲಯದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ಡಿಮ್ಯಾಂಡ್ ರಿಜಿಸ್ಟರ್‌ಗಳು, ಕೆಎಂಎಫ್-24 ರಿಜಿಸ್ಟರ್‌ಗಳು ಅಭಿಲೇಖಾಲಯದಲ್ಲಿ ಲಭ್ಯವಿಲ್ಲವೆಂದು ಅವರು ಮಾಹಿತಿ ನೀಡಿದ್ದರು. ಪುನಃ ಆಗಸ್ಟ್ 22ರಂದು ಈ ಎಲ್ಲ ದಾಖಲೆಗಳು ಅಭಿಲೇಖಾಲಯದಲ್ಲಿಯೇ ಪತ್ತೆಯಾಗಿವೆ. ದಾಖಲೆಗಳಿದ್ದರೂ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಐವರು ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿಸಿದ್ದು, ಸಿಬ್ಬಂದಿ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ವಹಿಸಬೇಕು” ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಳ್ಳಾರಿ | ಐದು ಮಂದಿ ಅಲ್ಲ, ಕ್ಷೇತ್ರದ ಪ್ರತಿಯೊಬ್ಬರೂ ಶಾಸಕರೇ; ಕೆಆರ್‌ಪಿಪಿಗೆ ಕಾಂಗ್ರೆಸ್ ಮುಖಂಡ ತಿರುಗೇಟು
“ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಮಂದಿಗೆ ನೋಟಿಸ್ ನೀಡಲಾಗಿತ್ತು. ಈ ಪೈಕಿ ಬಿ.ಕೃಷ್ಣಮೂರ್ತಿ, ಎನ್.ಯಲ್ಲಪ್ಪ ಮತ್ತು ಎಚ್.ಶಂಕರ್ ಉತ್ತರ ನೀಡಿದ್ದಾರೆ. ವೈಯಕ್ತಿಕ ವಿಚಾರದಲ್ಲಿ ತಮ್ಮನ್ನು ಈ ಪ್ರಕರಣದಲ್ಲಿ ಭಾಗಿ ಮಾಡಲಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಕರಣವೇನು?
“ನಗರಸಭೆಯಿಂದ ಆರೇಳು ತಿಂಗಳ ಹಿಂದೆಯೇ 49 ಕಡತಗಳನ್ನು ಮಾಜಿ ಸಚಿವ ಆನಂದ್ ಸಿಂಗ್, ಅವರ ಅಳಿಯ ಸಂದೀಪ್ ಸಿಂಗ್, ಹಾಲಿ ಸದಸ್ಯರು, ಮಾಜಿ ಸದಸ್ಯ ವೇಣುಗೋಪಾಲ್ ಹಾಗೂ ಕೆಲವು ಅಧಿಕಾರಿಗಳು, ಸಿಬ್ಬಂದಿಗಳು ಒಗ್ಗೂಡಿ ಕಚೇರಿಯಿಂದ ತೆಗೆದುಕೊಂಡು ಹೋಗಿದ್ದಾರೆ. ಕೃತ್ಯ ಎಸಗುವಾಗ ಸಿಸಿ ಟಿ.ವಿ ಕ್ಯಾಮೆರಾ ಬಂದ್ ಮಾಡಿಸಿದ್ದರು. ಆ ಕಡತಗಳನ್ನು ಇದೂವರೆಗೂ ಮರಳಿಸಿಲ್ಲ” ಎಂದು ನಗರಸಭೆ ಸಿಬ್ಬಂದಿ ಸುರೇಶ್ ಬಾಬು ಡಿ.ಎಚ್ ಹೆಸರಿನಲ್ಲಿ ಆಗಸ್ಟ್ 10ರಂದು ಮುಂಖ್ಯಮಂತ್ರಿ ಮತ್ತು ಹಲವರಿಗೆ ದೂರು ಸಲ್ಲಿಸಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆಗೂ ಪತ್ರ ಬರೆಯಲಾಗಿತ್ತು.
ಆ ಬಳಿಕ, ಕರ್ನಾಟಕ ರಕ್ಷಣಾ ಪಡೆಯ ಕಾರ್ಯಕರ್ತರು ಕಡತಗಳನ್ನು ಸಾರ್ವಜನಿಕವಾಗಿ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದರು. ಸಂಘಟಕರ ಒತ್ತಾಯದ ಮೇರೆಗೆ, ಕಡತಗಳನ್ನು ಒದಗಿಸುವಂತೆ ಆಗಸ್ಟ್ 22ರಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಕಡತೆಗಳು ಕಣ್ಮರೆಯಾಗಿವೆ ಎಂದು ಸಿಬ್ಬಂದಿಗಳು ಹೇಳಿದ್ದರು. ಆ ನಂತರ ಆಗಸ್ಟ್ 25ರಂದು ಕಡತಗಳು ನಾಪತ್ತೆಯಾಗಿಲ್ಲ, ಕಚೇರಿಯಲ್ಲಿಏ ಇವೆಯೆಂದು ಸಿಬ್ಬಂದಿಗಳು ಹೇಳಿದ್ದರು.
ವರದಿ: ಶಂಕರ್ ಕೂಡ್ಲಿಗಿ, ಸಿಟಿಜನ್ ಜರ್ನಲಿಸ್ಟ್