ಭಾರತದಲ್ಲಿ ರಾಕೇಟ್ ಉಡಾವಣೆಗಳ ಸಮಯದ ‘ಕೌಂಟ್ಡೌನ್’ಗೆ ಧ್ವನಿಯಾಗಿದ್ದ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಎನ್ ವಲರಮತಿ ನಿಧನರಾಗಿದ್ದಾರೆ.
ತಮಿಳುನಾಡಿನ ಅರಿಯಲೂರು ಮೂಲದ ವಲರ್ಮತಿ ಅವರು ಶನಿವಾರ ಸಂಜೆ ಹೃದಯಾಘಾತದಿಂದ ಚೆನ್ನೈನಲ್ಲಿ ಸಾವನ್ನಪ್ಪಿದ್ದಾರೆ. ಜುಲೈ 14ರಂದು ಉಡಾವಣೆಯಾದ ಯಶಸ್ವಿ ಚಂದ್ರಯಾನ-3 ಅವರ ಕಡೆಯ ಸಂತಸದ ಕ್ಷಣ ಮತ್ತು ಸಾಧನೆಯಾಗಿದೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ವಿಜ್ಞಾನಿ ವಲರ್ಮತಿ ಅವರು ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಭಾನುವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಇಸ್ರೋದ ಮಾಜಿ ನಿರ್ದೇಶಕ ಡಾ.ಪಿ.ವಿ ವೆಂಕಟಕೃಷ್ಣನ್, “ಶ್ರೀಹರಿಕೋಟಾದಿಂದ ಉಡಾವಣೆಯಾಗುವ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳ ಕ್ಷಣಗಣನೆಗೆ ವಲರಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಆಕೆಯ ಅಂತಿಮ ಕ್ಷಣಗಣನೆಯ ಧ್ವನಿಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
2059ರ ಜುಲೈ 31ರಂದು ಜನಿಸಿದ ವಲರ್ಮತಿ ಅವರು 1984ರಲ್ಲಿ ಇಸ್ರೋಗೆ ಸೇರಿದ್ದರು. ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಅವರು RISAT-1ರ ಯೋಜನಾ ನಿರ್ದೇಶಕರಾಗಿದ್ದರು. ಭಾರತದಲ್ಲಿ ಸ್ಥಳೀಯವಾಗಿ ಮೊದಲಿಗೆ ಅಭಿವೃದ್ಧಿಪಡಿಸಿದ ರಾಡಾರ್ ಇಮೇಜಿಂಗ್ ಉಪಗ್ರಹ (RIS) ಮತ್ತು ದೇಶದ ಎರಡನೇ ಅಂತಹ ಉಪಗ್ರಹಗಳ ನಿರ್ಮಾಣದಲ್ಲಿ ಅವರು ಪಾತ್ರ ವಹಿಸಿದ್ದರು.
2012ರ ಏಪ್ರಿಲ್ನಲ್ಲಿ RISAT-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.