ಬಡತನ, ಜಾತಿ, ಧರ್ಮ, ವರ್ಗಗಳೆಂಬ ಹೆಸರಲ್ಲಿ ದಮನಕ್ಕೊಳಗಾಗಿರುವ ಶೋಷಿತ ಜನಸಮುದಾಯದ ಕಣ್ಣೀರು ಒರೆಸಿ ಹಸಿವು, ಬಡತನ, ದಾರಿದ್ರ್ಯದಿಂದ ಅವರನ್ನು ವಿಮುಕ್ತರನ್ನಾಗಿಸಬೇಕು. ಈ ದೇಶವನ್ನು ಉನ್ನತ ಸಮಾಜವನ್ನಾಗಿ ಕಟ್ಟುವ ಭಗತ್ ಸಿಂಗ್, ನೇತಾಜಿ ಅವರ ಕನಸನ್ನು ನನಸಾಗಿಸುವ ಸಂಕಲ್ಪ ನಮ್ಮದಾಗಬೇಕೆಂದು ಎಐಡಿಎಸ್ಓ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೌರವ್ ಘೋಷ್ ಹೇಳಿದರು.
ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಜರುಗಿದ ಎಐಡಿಎಸ್ಓ 8ನೇ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನದಲ್ಲಿ ಅವರು ಮಾತನಾಡಿದರು. “ಎಐಡಿಎಸ್ಓ ಹಾಗೂ ಕರ್ನಾಟಕದ ಜನತೆಯ ಅಭೂತಪೂರ್ವ ಹೋರಾಟದಿಂದಾಗಿ ರಾಜ್ಯ ಸರ್ಕಾರವು ಎನ್‌ಇಪಿ-2020ಅನ್ನು ಹಿಂಪಡೆದಿದೆ. ಈ ಮೂಲಕ ಎನ್‌ಇಪಿ ವಿರುದ್ಧದ ಹೋರಾಟಕ್ಕೆ ಕರ್ನಾಟಕದ ವಿದ್ಯಾರ್ಥಿಗಳು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಈ ಸಮ್ಮೇಳನದಿಂದ ತೆರಳಿದ ಮೇಲೆ ನಿಮ್ಮ ಶಾಲಾ-ಕಾಲೇಜು ಹಾಗೂ ಊರುಗಳಲ್ಲಿ ಹೋರಾಟಗಳನ್ನು ಕಟ್ಟುವ ಮೂಲಕ ಎಐಡಿಎಸ್ಓ ನ್ನು ಬಲಪಡಿಸಬೇಕು” ಎಂದು ಕರೆ ನೀಡಿದರು.
ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ ಉಮಾ ಮಾತನಾಡಿ, “ಎಐಡಿಎಸ್ಓ ಇಂದು ಬಹಳ ಎತ್ತರಕ್ಕೆ ಬೆಳೆದಿದೆ. ಸಂಘಟನೆಯ ಮೂಲ ಸಿದ್ಧಾಂತ ಸತ್ವವಾದರೆ ಸಾವಿರಾರು ವಿದ್ಯಾರ್ಥಿಗಳ ಭಾಗವಹಿಸುವಿಕೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಶಿವದಾಸ್ ಘೋಷರು ಹೇಳಿರುವಂತೆ ʼಎಲ್ಲಾ ಕಾಲಕ್ಕೂ ಸಮಾಜದ ಬದಲಾವಣೆಗೆ ಮುಂಚೂಣಿಯಲ್ಲಿ ನಿಲ್ಲುವುದು ವಿದ್ಯಾರ್ಥಿಗಳು ಮತ್ತು ಯುವಜನರುʼ ಎಂಬುವಂತೆ ಶಿಕ್ಷಣವನ್ನು ಕೆಲವರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿ ಶತಮಾನಗಳಿಂದ ತುಳಿತಕ್ಕೊಳಗಾಗಿರುವ ಶೋಷಿತರ ಗುಡಿಸಲುಗಳಿಗೆ ತಲುಪಿಸುವ ಐತಿಹಾಸಿಕ ಪಾತ್ರವನ್ನು ಇಂದಿನ ಯುವ ಸಮೂಹ ನಿಭಾಯಿಸಬೇಕು” ಎಂದು ಹೇಳಿದರು.
“ಶಿಕ್ಷಣ ಯಾರೋ ಕೆಲವರ ಸ್ವತ್ತಲ್ಲ. ಬದಲಿಗೆ, ಹಲವಾರು ಮಹಾನ್ ವ್ಯಕ್ತಿಗಳ ಅಪಾರ ತ್ಯಾಗ ಹಾಗೂ ಸಾವಿರಾರು ವರ್ಷಗಳ ಅವಿರತ ಪರಿಶ್ರಮದಿಂದ ಮಾನವ ಸಮಾಜವು ಜ್ಞಾನವನ್ನು ಸಂಪಾದಿಸಿದೆ. ಈ ಜ್ಞಾನವನ್ನು ರಕ್ಷಿಸುವ ಮಹಾನ್ ಉದ್ದೇಶದೊಂದಿಗೆ ಎಐಡಿಎಸ್ ಈ ಸಮ್ಮೇಳನವನ್ನು ಸಂಘಟಿಸಿದೆ ಇದನ್ನು ನೆನಪಿನಲ್ಲಿಟ್ಟುಕೊಂಡು ಆ ಮಹನೀಯರಿಗೆ ನೀವು ನಿಜವಾದ ಗೌರವ ಸಲ್ಲಿಸಿ” ಎಂದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಏರ್‌ಲೈನ್ಸ್ ಹಗಲುಗನಸಿನಿಂದ ರಾಜ್ಯ ಸರ್ಕಾರ ಹಿಂದೆ ಸರಿಯಲಿ
ಇದೇ ಸಂದರ್ಭದಲ್ಲಿ ಸಮ್ಮೇಳನದ 395 ಜನರ ಎಐಡಿಎಸ್ಓ ಕರ್ನಾಟಕ ನೂತನ ರಾಜ್ಯ ಕೌನ್ಸಿಲನ್ನು ಚುನಾಯಿಸಲಾಯಿತು. ರಾಜ್ಯ ಅಧ್ಯಕ್ಷರಾಗಿ ಅಶ್ವಿನಿ ಕೆ ಎಸ್, ಕಾರ್ಯದರ್ಶಿಗಳಾಗಿ ಅಜಯ್ ಕಾಮತ್ ಹಾಗೂ ಉಪಾಧ್ಯಕ್ಷರುಗಳಾಗಿ ಹಣಮಂತು, ಅಭಯಾ ದಿವಾಕರ್, ಸ್ನೇಹಾ ಕಟ್ಟಿಮನಿ, ಚಂದ್ರಕಲಾ, ಖಜಾಂಚಿಗಳಾಗಿ ಸುಭಾಷ್ ಬಿ ಜೆ ಹಾಗೂ ಕಚೇರಿ ಕಾರ್ಯದರ್ಶಿಯಾಗಿ ಮಹಾಂತೇಶ ಬಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಚುನಾಯಿಸಲ್ಪಟ್ಟರು.