ಈ ಬಾರಿ ರಾಜ್ಯ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಣೆಯ ವಿಚಾರದಲ್ಲಿ ಮೀನಮೇಷ ಎಣಿಸಿಲ್ಲ. ಆದರೆ ಈ ಕಾಳಜಿ ಸಕ್ರಿಯತೆ ಬರಿ ಘೋಷಣೆಗಷ್ಟೇ ಸೀಮಿತ ಆಗದಿರಲಿ. ಕಷ್ಟ-ನಷ್ಟಕ್ಕೆ ಈಡಾದ ಜನರ ಬದುಕುಗಳನ್ನು ಅಸಲು ಕಾಳಜಿಯಿಂದ ಆತುಕೊಳ್ಳಲಿ.
ಬರಗಾಲ ಘೋಷಣೆ ಕುರಿತು ಸೆ. 4 ರಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನವಾದಂತೆ ರಾಜ್ಯದ 62 ತಾಲೂಕುಗಳು ಬರಪೀಡಿತವೆಂದು ಸರ್ಕಾರ ಘೋಷಿಸಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ ಮೂರು ತಿಂಗಳು ತೀರುವುದರಲ್ಲಿ ಗಂಭೀರ ಬರಗಾಲ ಎದುರಾಗಿದೆ. ಮಳೆ-ಬೆಳೆಯಿಂದ ವಂಚಿತವಾದ ರಾಜ್ಯವನ್ನು ಬರ ಬಿಗಿದಪ್ಪಿದೆ. ಕುಡಿಯುವ ನೀರಿನ ಕೊರತೆ, ಉದ್ಯೋಗಾವಕಾಶಗಳಿಗೆ, ಬೆಲೆ ಏರಿಕೆಯ ಬಿಸಿಗೆ, ಆರ್ಥಿಕ ಮುಗ್ಗಟ್ಟಿಗೆ ನಾಡು ತತ್ತರಿಸತೊಡಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಆರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ. 80ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಅಭಾವ ಉಂಟಾಗಿದೆ. ಕರಾವಳಿ ಭಾಗದಲ್ಲಿ ಶೇ. 72 ರಷ್ಟು, ಮಲೆನಾಡಿನಲ್ಲಿ ಶೇ. 80 ರಷ್ಟು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ. 71 ರಷ್ಟು ಮಳೆ ಕೊರತೆಯಾಗಿದೆ. ಜೂನ್ 1 ರಿಂದ ಸೆಪ್ಟೆಂಬರ್ 4 ರವರೆಗೆ ವಾಡಿಕೆ ಮಳೆ ಪ್ರಮಾಣವು 711 ಮಿ.ಮೀ ಆಗಬೇಕಾದ್ದು, 526 ಮಿ.ಮೀ.ನಷ್ಟು ಮಳೆ ಆಗಿ, ಶೇ. 26 ರಷ್ಟು ಮಳೆ ಕೊರತೆಯಾಗಿದೆ.
ಮುಂಗಾರು ಬಿತ್ತನೆ ಕಾರ್ಯ ಮುಂದಕ್ಕೆ ಹೋಗಿದೆ. ಅಲ್ಪಸ್ವಲ್ಪ ಮಳೆಯಿಂದಾಗಿ ಆರಂಭವಾಗಿದ್ದ ಕೃಷಿ ಚಟುವಟಿಕೆ, ಚಿಗುರೊಡೆದು ನಿಲ್ಲುವಷ್ಟರಲ್ಲಿ ಮಳೆಯ ಕೊರತೆಯಿಂದಾಗಿ ಸೊರಗಿ ಕರಕಾಗಿದೆ. ಕೃಷಿಕರ ಕರುಳಿಗೆ ಬೆಂಕಿ ಬಿದ್ದಿದೆ.
ಬರಗಾಲವೆಂದರೆ ಕೃಷಿ ಮತ್ತು ಸಂಬಂಧಿತ ವಲಯಗಳ ಉತ್ಪಾದನಾ ನಷ್ಟವೆಂದೇ ಅರ್ಥ. ಅರ್ಥವ್ಯವಸ್ಥೆಯ ಮೇಲೆ ದೊಡ್ಡ ಹೊಡೆತ. ನೇರ ನಿರುದ್ಯೋಗ ಸೃಷ್ಟಿ. ವಿಶೇಷವಾಗಿ ಕೃಷಿಯನ್ನು ಅವಲಂಬಿತರು ಮತ್ತು ಗ್ರಾಮೀಣ ವಾಸಿಗಳ ಖರೀದಿ ಶಕ್ತಿಯನ್ನು ಕಿತ್ತುಕೊಳ್ಳುತ್ತದೆ. ವಲಸೆಗೆ ಪ್ರೇರೇಪಿಸುತ್ತದೆ. ಮಕ್ಕಳು ಶಾಲೆಗಳಿಂದ ದೂರ ಉಳಿಯುವ ದುಸ್ಥಿತಿ, ಅಪೌಷ್ಟಿಕತೆ-ಅನಾರೋಗ್ಯ, ಮದುವೆಗಳ ಮುಂದೂಡಿಕೆ, ಸಾಲಸೋಲ, ಅಗ್ಗದ ಬೆಲೆಗೆ ಆಸ್ತಿಪಾಸ್ತಿ ಮಾರಾಟಕ್ಕೆ ಕಾರಣವಾಗುತ್ತದೆ. ಕೌಟುಂಬಿಕ, ಆರ್ಥಿಕ ಮತ್ತು ಸಾಮಾಜಿಕ ಬದುಕು ಅಸ್ತವ್ಯಸ್ತವಾಗುತ್ತದೆ.
ಕೃಷಿ ಪ್ರಧಾನ ದೇಶ, ದೇಶದ ಬೆನ್ನೆಲುಬು ರೈತ, ಕೃಷಿ ಅವಲಂಬಿತ ವಲಯಗಳು ವಿಪರೀತ ಎಂಬುದು ಬರಹಕ್ಕೆ, ಭಾಷಣಕ್ಕೆ ಸೀಮಿತವಾಗಿರುವ; ದೇಶಕ್ಕೆ ಅನ್ನ ನೀಡುವ ರೈತನನ್ನು ನಿಕೃಷ್ಟವಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿರುವ ಈ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೃಷಿಕರ ಪರವಾಗಿದೆ. ಹಾಗೆಯೇ ಕೃಷಿ ಕುಟುಂಬದಿಂದ ಬಂದು ಕಾಯ್ದೆ ಕಾನೂನುಗಳನ್ನು ರೂಪಿಸುವ, ನಿರ್ಣಾಯಕ ಸ್ಥಾನದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ, ಕೃಷಿ ಸಚಿವ ಚಲುವರಾಯಸ್ವಾಮಿ ರೈತರ ಪರವಾಗಿದ್ದಾರೆ. ಜೊತೆಗೆ, ಹೋದಲ್ಲಿ ಬಂದಲ್ಲಿ ರಾಜ್ಯದ ಕೃಷಿಕ ವಲಯ ಬರಗಾಲಕ್ಕೆ ತುತ್ತಾಗಿದೆ, ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ಕೊಡುವ ಮೂಲಕ ತಮ್ಮ ಕಳಕಳಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಕಂದಾಯ ಸಚಿವ ಕೃಷ್ಣಭೈರೇಗೌಡರು ಬರಗಾಲ ಘೋಷಣೆ ಕುರಿತ ಕೇಂದ್ರ ಸರ್ಕಾರದ ಮಾನದಂಡಗಳ ಬಗ್ಗೆ ಪ್ರಸ್ತಾಪಿಸುತ್ತ, ಅದು ಇನ್ನಷ್ಟು ಸಡಿಲವಾದರೆ ನಮ್ಮ ಕೃಷಿಕರಿಗೆ ಅನುಕೂಲವಾಗುತ್ತದೆ ಎಂಬ ಆಶಯದೊಂದಿಗೆ, ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯಾಡಲೂ ಮುಂದಾಗಿದ್ದಾರೆ.
ಅಷ್ಟೇ ಅಲ್ಲ, ಬರಪೀಡಿತ ತಾಲ್ಲೂಕು ಘೋಷಣೆ ಆಗುತ್ತಿದ್ದಂತೆ ಕುಡಿಯುವ ನೀರು ಪೂರೈಕೆಗೆ ತುರ್ತು ವ್ಯವಸ್ಥೆ ಮಾಡುವುದು; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲು ಅನುದಾನ; ಬೆಳೆ ಹಾನಿ ಪರಿಹಾರ ಕೊಡಿಸುವ ಕಾರ್ಯಕ್ಕೆ ಚಾಲನೆ ನೀಡಿಕೆ; ನರೇಗಾ ಯೋಜನೆಯ ಮೂಲಕ ಜನರಿಗೆ ಉದ್ಯೋಗ ನೀಡುವುದು; ಎನ್ಡಿಆರ್ಎಫ್ ಮಾನದಂಡ ಪ್ರಕಾರ ರಾಜ್ಯಕ್ಕೆ ದೊರೆಯಬೇಕಾದ ಪರಿಹಾರ ಪಡೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೂಡ ಕಂದಾಯ ಸಚಿವರು ಹೇಳಿದ್ದಾರೆ.
ಇದೆಲ್ಲವೂ ಜವಾಬ್ದಾರಿಯುತ ಸರ್ಕಾರ ಮಾಡಲೇಬೇಕಾದ ಕನಿಷ್ಠ ಕರ್ತವ್ಯ. ಆದರೆ ಅದನ್ನು ಜಾರಿಗೆ ತರುವ, ಪೀಡಿತರಿಗೆ ಸಲೀಸಾಗಿ ಪರಿಹಾರ ತಲುಪಿಸುವ ಅಧಿಕಾರಿವರ್ಗ ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಸರ್ಕಾರ ಚಾಟಿ ಬೀಸಬೇಕಿದೆ.
ಈ ಹಿಂದೆಯೂ ರಾಜ್ಯ ಬರಕ್ಕೆ ತುತ್ತಾಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿತ್ತು. ನಾಲ್ಕಾರು ಜನರ ಕೈಗೆ ಚೆಕ್ ಕೊಟ್ಟು ಕಣ್ಣೊರೆಸಿ, ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ನಾಟಕ ನಡೆದಿತ್ತು. ಹಾಗೆಯೇ ಕಣ್ಮುಚ್ಚಿ ಬಿಡುವುದರೊಳಗೆ ಕೋಟಿಗಟ್ಟಲೆ ಹಣ ಕಣ್ಮರೆಯೂ ಆಗಿತ್ತು. ಇದು ಪ್ರತಿ ಸಲ ನಡೆಯುವ ಸರ್ಕಾರಿ ಕೃಪಾಪೋಷಿತ ನಾಟಕ.
ಈ ಬಾರಿ ರಾಜ್ಯ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಣೆಯ ವಿಚಾರದಲ್ಲಿ ಮೀನಮೇಷ ಎಣಿಸಿಲ್ಲ. ಆದರೆ ಈ ಕಾಳಜಿ ಸಕ್ರಿಯತೆ ಬರಿ ಘೋಷಣೆಗಷ್ಟೇ ಸೀಮಿತ ಆಗದಿರಲಿ. ಕಷ್ಟ-ನಷ್ಟಕ್ಕೆ ಈಡಾದ ಜನರ ಬದುಕುಗಳನ್ನು ಅಸಲು ಕಾಳಜಿಯಿಂದ ಆತುಕೊಳ್ಳಲಿ. ಅದನ್ನು ಬಿಟ್ಟು, ಇಲ್ಲಿ ಕಾಂಗ್ರೆಸ್ ಅಲ್ಲಿ ಬಿಜೆಪಿ ಎಂದು ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿ ಕಾಲಹರಣ ಮಾಡಿದರೆ, ಪರಿಹಾರವನ್ನು ಪೀಡಿತರಿಗೆ ತಲುಪಿಸದೆ ನುಂಗಿ ನೀರು ಕುಡಿದರೆ, ಇದಕ್ಕಿಂತ ಕೆಟ್ಟ ಕೊಳಕು ಸರ್ಕಾರ ಮತ್ತೊಂದಿಲ್ಲ ಎಂಬ ತೀರ್ಮಾನಕ್ಕೆ ನಾಡಿನ ಜನತೆ ಬರುತ್ತಾರೆ. ಸರ್ಕಾರ ಅಂತಹ ಜನಾಕ್ರೋಶವನ್ನು ಆಹ್ವಾನಿಸದಿರಲಿ.
