ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿದ್ದು, ರಾಜ್ಯ ಸರ್ಕಾರ ರೈತರ ಹಿತಾಕಾಯುವಲ್ಲಿ ವಿಫಲವಾಗಿದೆ. ಇನ್ನೂ ಬರ ಪ್ರದೇಶಗಳ ಘೊಷಣೆಯಾಗಿಲ್ಲ. ಕೂಡಲೇ ಬರ ಘೋಷಣೆ ಮಾಡಬೇಕು. ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೆಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಸೆ.8 ರಂದು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ್ ನೆಲಹಾಳ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. “ಮಳೆ ಅಭಾವದಿಂದ ಬರ ಪರಸ್ಥಿತಿಯಿದೆ ಎಂದು ಹೇಳುವ ಸರ್ಕಾರ, ಬರ ಪ್ರದೇಶಗಳ ಘೋಷಣೆಗೆ ಮೀನಾಮೇಷ ಎಣಿಸುತ್ತಿದೆ. ಜಲಾಶಯಗಳು ಖಾಲಿಯಾಗಿ ನೀರಾವರಿ ಯೋಜನೆಗಳಿಗೂ ಸಮರ್ಪಕ ನೀರು ಪೂರೈಸುತ್ತಿಲ್ಲ. ವಿದ್ಯುತ್ ಕೊರತೆಯಿಂದ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗುತ್ತಿದೆ. ತುಂಗಭದ್ರ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರೂ, ಇಂದಿಗೂ ಕೊನೆ ಭಾಗಕ್ಕೆ ನೀರು ಹರಿಸುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ಹಿಡಿದು ನೂರು ದಿನ ಕಳೆಯುವಷ್ಟರಲ್ಲಿಯೇ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ, ಸರ್ಕಾರ ಸ್ಪಂದಸುತ್ತಿಲ್ಲ” ಎಂದು ಆರೋಪಿಸಿದ್ದಾರೆ.
“ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ 4 ಸಾವಿರ ರೂ. ಪ್ರೋತ್ಸಾಹ ಧನವನ್ನೂ ನಿಲ್ಲಿಸಲಾಗಿದೆ. ರೈತರ ಮಕ್ಕಳಿಗೆ ಪ್ರೋತ್ಸಾಹಿಸಲು ಪ್ರಾರಂಭಿಸಲಾಗಿದ್ದ ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆಯ ಪ್ರೋತ್ಸಾಹ ಧನವೂ ಸ್ಥಗಿತಗೊಂಡಿದೆ. ಬೆಳೆ ಕೊಯ್ಲು ಮಾಡಲು ಬಿಜೆಪಿ ಸರ್ಕಾರ ನೂರು ಕೋಟಿ ರೂ. ಅನುದಾನ ನೀಡಿದ್ದ ರೈತಸಂಪದ ಯೋಜನೆಯನ್ನು ನಿಲ್ಲಿಸಲಾಗಿದೆ. ರೈತರ ಅಭಿವೃದ್ದಿಯನ್ನು ಮರೆತು ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೂಡಿಕೆ ಮಾಡಲಾಗಿದೆ” ಎಂದು ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಲೋಚನಾ ಆಲ್ಕೂರು, ವಿಷ್ಣುವರ್ಧನರೆಡ್ಡಿ ಉಪಸ್ಥಿತರಿದ್ದರು.
ವರದಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್, ರಾಯಚೂರು