ಡೇ ನಲ್ಮ್ ಯೋಜನೆ ಅಡಿ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಪಾಲಿಕೆಯ ಸಮುದಾಯ ಭವನ ಕಟ್ಟಡದಲ್ಲಿ ಕಚ್ಛಾ ಬಟ್ಟೆ ಪಡೆದು, ಜೀನ್ಸ್ ಬಟ್ಟೆ ತಯಾರಿಸಲು ಗಾರ್ಮೆಂಟ್ಸ್ ಯೂನಿಟ್ ಪ್ರಾರಂಭಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಜೀನ್ಸ್ ಬಟ್ಟೆಗೆ ಅಗತ್ಯವಿದ್ದ ಕಚ್ಚಾ ಬಟ್ಟೆ ದೊರೆಯದ ಕಾರಣ, ಯೋಜನೆ ಅನುಷ್ಠಾನಗೊಂಡಿಲ್ಲ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಖಲೀಲ್ ಸಾಬ್ ಹೇಳಿದ್ದಾರೆ.
ಬಳ್ಳಾರಿಯ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಜಂಟಿಯಾಗಿ ನಡೆದ ದಿಶಾ ಸಭೆ ಹಾಗೂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. “ಡೇ ನಲ್ಮ್ ಯೋಜನೆಯಡಿ ತೆರೆದಿರುವ ಗಾರ್ಮೆಂಟ್‌ಗೆ ನಗರದ ವಿವಿಧ ಭಾಗಗಳಿಂದ ಬಂದು ಕೆಲಸ ಮಾಡಲು ಮಹಿಳೆಯರು ನಿರಾಸಕ್ತಿ ಹೊಂದಿದ್ದಾರೆ” ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, “ನಗರದಲ್ಲಿ ಮತ್ತು ಜಿಲ್ಲೆಯಲ್ಲಿ ಎಷ್ಟು ನಿರುದ್ಯೋಗಿಗಳು ಇದ್ದಾರೆ ಎಂಬ ವರದಿ ಮಾಡಬೇಕು. ಅವರಿಗೆ ಸರ್ಕಾರದ ವಿವಿಧ ಕೌಶಲ್ಯ ಅಭಿವೃದ್ದಿ ಯೋಜನೆ ಅಡಿಯಲ್ಲಿ ತರಬೇತಿ ನೀಡಬೇಕು” ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ, ಸಿಇಒ ರಾಹುಲ್ ಸಂಕನೂರ್, ಎಂಎಲ್‌ಸಿ ವೈ.ಎಂ ಸತೀಶ್, ಮೇಯರ್ ತ್ರಿವೇಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ವರದಿ: ರಾಧಾಕೃಷ್ಣ, ಸಿಟಿಜನ್ ಜರ್ನಲಿಸ್ಟ್