ಹಾವೇರಿ ಜಿಲ್ಲೆಯ ಹಾನಗಲ್ ಮಹಾನಗರದಲ್ಲಿ 25 ವರ್ಷಗಳಿಂದ ರೋಶನಿ ಸಮಾಜ ಸೇವಾ ಸಂಸ್ಥೆಯು ನಾನಾ ರೀತಿಯ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದೆ. ಕಳೆದೊಂದು ವರ್ಷದಿಂದ ಈ ಸಂಸ್ಥೆಯನ್ನು ಹತ್ತಿರದಿಂದ ನೋಡುತ್ತಿರುವ ನನಗೆ ರೋಶನಿ ಕುರಿತು ಏನಾದರೂ ಬರೆಯಬೇಕೆಂಬ ಆಸೆ ಒಡಮೂಡಿತು. ಈಗಾಗಲೆ ರಾಜ್ಯಾದ್ಯಾಂತ ಹೆಸರಾಗಿರುವ ರೋಶನಿ ಸಂಸ್ಥೆಯ ಕುರಿತು, ಆ ಸಂಸ್ಥೆ ಮಾಡುತ್ತಿರುವ ಸಮಾಜ ಸೇವೆಗಳ ಕುರಿತು ನಾವು ತಿಳಿದುಕೊಳ್ಳಲೆಬೇಕಿದೆ.
ಜಾತೀಯತೆ, ಲಿಂಗಭೇದ, ವರ್ಣಭೇದಗಳ ಮೆಟ್ಟಿ ಕಾರ್ಮಿಕರ ಹಕ್ಕುಗಳನ್ನು, ಸಾಮಾಜಿಕ ಹಕ್ಕುಗಳಿಂದ ವಂಚಿತರಾದ ಪ.ಜಾತಿ, ಪ.ಪಂ ಮತ್ತು ಹಿಂದುಳಿದ ವರ್ಗಗಳಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ಸು ಗಳಿಸಿದ ರೋಶನಿ ಸಂಸ್ಥೆ, ಮಹಿಳೆ ಸ್ವಾವಲಂಬಿಯಾಗಿ, ಅಬಲೆಯಲ್ಲ ಸಬಲೆಯಂತೆ ಸಮಾಜದಲ್ಲಿ ತಲೆಯೆತ್ತಿ ಬದುಕುವಂತೆ ಹತ್ತು ಹಲವಾರು ಉದ್ಯೋಗ ಮಾಹಿತಿಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರ ಬದುಕಿಗೆ ಆಶಾಕಿರಣವಾಗಿ, ಜನರಲ್ಲಿ ಸಂವಿಧಾನಿಕ ಹಕ್ಕುಗಳ ಕುರಿತು ತಿಳುವಳಿಕೆ ಮೂಡಿಸುವಲ್ಲಿ ಒಂದು ಹೆಜ್ಜೆ ಮುಂದಿರುವ ಮತ್ತು ಸಮಗ್ರವಾಗಿ ಭಾರತದ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ರಾಜ್ಯಕ್ಕೆ ಮಾದರಿ ಆಗಿರುವ ಈ ಸಂಸ್ಥೆಯು ಕುಡಿತಕ್ಕೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿರುವ ಮದ್ಯವ್ಯಸನಿಗಳಿಗೆ ಸಾಮಾಜಿಕ ತಿಳುವಳಿಕೆ, ಜ್ಞಾನವನ್ನು ಕರುಣಿಸಿ ಅವರನ್ನು ಸಂಪೂರ್ಣ ಮನುಷ್ಯರನ್ನಾಗಿ ರೂಪಿಸುವಲ್ಲಿ ಯಶಸ್ಸನ್ನು ಕಂಡಿದೆ.
ಸಾರ್ವಜನಿಕರಲ್ಲಿ ಎಚ್ಐವಿ ಇನ್ನಿತರ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕಾರ್ಯಪ್ರವೃತ್ತವಾದ ರೋಶನಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಅದೆಷ್ಟೊ ಜನ ಜಾಗೃತರಾಗಿದ್ದುಂಟು. ತಮ್ಮ ಕಾಯಕದ ಬಗ್ಗೆ ಮಾತನಾಡಿದ ರೋಶನಿ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜ; ರೋಶನಿ ಸಂಸ್ಥೆಯು ಕಳೆದ 25 ವರ್ಷಗಳಿಂದ ಹಾಗನಲ್, ಹಾವೇರಿ, ಶಿಗ್ಗಾವಿ ತಾಲೂಕುಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಹಾವೇರಿ ಜಿಲ್ಲೆಯ ತಾಲೂಕುಗಳಲ್ಲಿ ಅಷ್ಟೇ ಅಲ್ಲದೆ ಇತರೆ ಜಿಲ್ಲೆಗಳಲ್ಲೂ ರೊಶನಿ ಸಂಸ್ಥೆಯ ಮೂಲಕ ನಮ್ಮ ಸೇವೆಯಲ್ಲಿ ಬಿಂಬಿಸಿಕೊಂಡಿದ್ದೇವೆ ಎಂದಿದ್ದಾರೆ. ಸಮಾಜದ ಹಿತವೆ ನಮ್ಮ ಹಿತ, ದೇಶ ಸೇವೆಯೆ ಈಶ ಸೇವೆ ಎಂಬ ವಾಕ್ಯದಂತೆ ಬಡತನ, ಜಾತೀಯತೆ, ಲಿಂಗಭೇದಗಳನ್ನು ನಿರ್ಮೂಲನೆ ಮಾಡುವ ಪಣತೊಟ್ಟಿದೆ. ಮಂಗಳೂರಿನ ಫಾ. ಮುಲ್ಲರ್ಸ್ ಆಸ್ಪತ್ರೆಯ ಸಹಯೋಗದಲ್ಲಿ 112 ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವಲ್ಲಿ ಮುಂದಾಗಿದ್ದು ಸಾಕ್ಷಿಯಾಗಿದೆ.

ಯಾವುದೇ ರಾಜಕೀಯ ಮುಖಂಡರ ಸಹಾಯ, ಸಹಕಾರವಿಲ್ಲದೆ ತನ್ನ ಸೇವಾ ಕಾರ್ಯದಲ್ಲಿ ಮುನ್ನಡೆದ ರೋಶನಿ ಸಂಸ್ಥೆ ಯಾರ ಮತ್ತು ಯಾವ ಹಂಗೂ ಇಲ್ಲದೆ ಸಾಂವಿಧಾನಿಕ ನೆಲೆಗಟ್ಟಿನ ಮೇಲೆ ಧರ್ಮನಿರಪೇಕ್ಷವಾಗಿ ಸಾಗುತ್ತಿದೆ ಎಂದು ತಿಳಿಸಲು ಸಂತಸವೆನಿಸುತ್ತದೆ. ರೊಶನಿ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರವು ವ್ಯಸನಿಗಳಿಗೆ ಒಂದು ತಿಂಗಳ ಕಾಲ ಪ್ರಾರ್ಥನೆ ಯೋಗ ಮತ್ತು ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಇದುವರೆಗು ಸರಿಸುಮಾರು 4000 ಕ್ಕೂ ಹೆಚ್ಚು ವ್ಯಸನಿಗಳಿಗೆ ಚಿಕಿತ್ಸೆ ಮತ್ತು ಸಮಾಲೋಚನೆ ನಡೆಸಿ ಉತ್ತಮ ಫಲಿತಾಂಶವನ್ನು ಕಂಡಿರುವುದು ಸಾಕ್ಷಿಯಾಗಿ ನಿಂತಿದೆ. ವಿದ್ಯಾಭ್ಯಾಸದಲ್ಲಿ ಹಿಂದುಳಿದ 6 ವರ್ಷದ ಒಳಗಿನ ಮಕ್ಕಳನ್ನು ಗುರುತಿಸಿ ಥೆರಪಿ ನೀಡಿದೆ. ಅವಶ್ಯಕತೆ ಇರುವ ಮಕ್ಕಳಿಗೆ ಉಚಿತವಾಗಿ ಶ್ರವಣ ಸಾಧನ ಇತ್ಯಾದಿ ಸಾಧನಗಳನ್ನು ನೀಡಿ ಅರ್ಥಿಕವಾಗಿ ಹಿಂದುಳಿದವರ ಗುರುತಿಸಿ ಬ್ಯುಸಿನೆಸ್ ಪ್ಲಾನ್ ನೀಡುವುದು, ಡೊಳ್ಳು ಕುಣಿತ ಇತ್ಯಾದಿ ಜಾನಪದ ಕಲೆಗಳನ್ನು ಗುರುತಿಸಿ ಅಂತವರಿಗೆ ಉಚಿತವಾಗಿ ಸಾಮಗ್ರಿಗಳನ್ನು ನೀಡಿ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಕಾನೂನಾತ್ಮಕ ಸಾಮಾಜಿಕ, ಧಾರ್ಮಿಕ, ಆರ್ಥಿಕಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದೆ.
ಈ ಸುದ್ದಿ ಓದಿದ್ದೀರಾ?: 62 ತಾಲೂಕು ಬರ ಘೋಷಣೆಗೆ ಅರ್ಹ, 529 ಕೋಟಿ ಅನುದಾನ ಎತ್ತಿಡಲಾಗಿದೆ : ಸಚಿವ ಕೃಷ್ಣಭೈರೇಗೌಡ
ಜಿಲ್ಲೆಯ ಚುಣಾಯಿತ ಪ್ರತಿನಿಧಿಗಳಿಗೆ ಪ್ರಗತಿಪರ ಚಿಂತಕರ ಸಮ್ಮುಖದಲ್ಲಿ ಅವರ ಜವಾಬ್ದಾರಿಗಳನ್ನು ನಿಸ್ವಾರ್ಥವಾಗಿ ನಿಭಾಯಿಸುವ ಬಗ್ಗೆ ಚರ್ಚೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿತ್ತಿರುವ ರೋಶನಿ ಸಂಸ್ಥೆ ಸಮುದಾಯ ಸಂಘಟಕರ ನೇತೃತ್ವದಲ್ಲಿ ಅಂಬೇಡ್ಕರ್ ಜಯಂತಿ, ಸಂವಿಧಾನ ದಿನ, ಆಚರಣೆ, ಮೆರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ, ಅಸಂಘಟಿತ ಸಂಘಟನೆಗಳೊಂದಿಗೆ ಸಭೆಗಳನ್ನು ನಡೆಸಿ, ಮಕ್ಕಳ ಹಕ್ಕುಗಳು, ಮಾನವ ಹಕ್ಕುಗಳ ಕುರಿತು ಮಾಹಿತಿ, ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಆಂದೋಲನಗಳ ನಡೆಸುತ್ತಿದೆ. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತ ಹೆಣ್ಣು ಜನಿಸಿದ ಮನೆಗೆ ಸಸಿ ನೀಡಿ, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆಯನ್ನು ನೀಡಿ ಮಹಿಳಾ ಸಬಲೀಕರಣ ಅಡಿಯಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗಿಗಳಾಗಲು ಹೊಲಿಗೆ ಇನ್ನಿತರ ತರಭೇತಿಗಳನ್ನು ನೀಡುವಲ್ಲಿ ಕಾರ್ಯಪ್ರವೃತ್ತವಾಗಿದೆ. ಅಸಂಘಟಿತ ಯುವಕರನ್ನು ಗುರುತಿಸಿ ಅರಿವು ಕಾರ್ಯಕ್ರಮ, ಮಹಿಳಾ ದಿನಾಚರಣೆಗಳ ಮೂಲಕ ಮಹಿಳೆಯನ್ನು ಸಮಾಜದ ಮುನ್ನೆಲೆಗೆ ತರುವಲ್ಲಿ ಯಶಸ್ಸನ್ನು ಕಂಡಿದೆ. ಹೀಗೆ ಹಲವು ಆಯಾಮಗಳ ಮೂಲಕ ಸೇವೆಯಲ್ಲಿಯೆ ತನ್ನನ್ನು ತಾನು ತೊಡಗಿಸಿಕೊಂಡ ಹಾನಗಲ್ ತಾಲೂಕಿನ ರೋಶನಿ ಸಂಸ್ಥೆಯು ಇನ್ನಿತರ ಸಂಘಸಂಸ್ಥೆಗಳಿಗೂ ಮಾದರಿಯಾಗಿ ನಿಲ್ಲುವುದರಲ್ಲಿ ಸಂಶಯವಿಲ್ಲ.