ತಮಿಳುನಾಡು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ತಲೆ ಕಡಿದು ತಂದವರಿಗೆ 10 ಕೋಟಿ ಬಹುಮಾನ ನೀಡುತ್ತೇನೆ ಎಂದು ಅಯೋಧ್ಯೆಯ ಸ್ವಾಮೀಜಿ ಪರಮಹಂಸ ಆಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಒಂದು ಕೈಯಲ್ಲಿ ಉದಯನಿಧಿಯ ಪೋಸ್ಟರ್, ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡು ಉದಯನಿಧಿ ಅವರ ಶಿರಚ್ಛೇದನವನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ಗೆ ಬೆಂಕಿ ಹಚ್ಚುವ ದೃಶ್ಯವನ್ನೂ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಅಯೋಧ್ಯೆಯ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಉದಯನಿಧಿ ಸ್ಟಾಲಿನ್, ಸ್ವಾಮೀಜಿಯೊಬ್ಬರು ನನ್ನ ತಲೆಗೆ 10 ಕೋಟಿ ರೂ. ಬೆಲೆ ಕಟ್ಟಿದ್ದಾರೆ. ಅವರು ನಿಜವಾದ ಸಂತನೋ ಅಥವಾ ನಕಲಿ ಸಂತನೋ? ನನ್ನ ತಲೆಯನ್ನ ಏಕೆ ಅಷ್ಟು ಇಷ್ಟಪಡುತ್ತೀರಿ? ನಿಮಗೆ ಇಷ್ಟು ಹಣ ಎಲ್ಲಿಂದ ಬರುತ್ತದೆ? ನನ್ನ ತಲೆ ಕೂದಲು ಬಾಚುವುದಕ್ಕೆ ಏಕೆ 10 ಕೋಟಿ ರೂ. ಘೋಷಣೆ ಮಾಡಿದ್ದೀರಿ? 10 ರೂಪಾಯಿ ಬಾಚಣಿಗೆ ಕೊಟ್ಟರೆ ನಾನೇ ಬಾಚಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಲೇಖಕರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ‘ಇಂಡಿಯಾ’ ಗೆಲ್ಲದಿದ್ದರೆ ಮಣಿಪುರ, ಹರಿಯಾಣದಂತೆ ದೇಶ ಬದಲು: ಎಂ ಕೆ ಸ್ಟಾಲಿನ್
ಈ ಹೇಳಿಕೆಗೆ ವಿರೋಧ ವ್ಯಕ್ತವಾದಾಗ ಉದಯನಿಧಿ ಸ್ಟಾಲಿನ್, ತನ್ನ ಹೇಳಿಕೆಗೆ ಬದ್ಧವಾಗಿದ್ದೇನೆ, ಈ ಬಗ್ಗೆ ಕಾನೂನಾತ್ಮಕವಾಗಿ ಯಾವುದೇ ಪ್ರಕರಣಗಳನ್ನು ಎದುರಿಸಲು ಸಿದ್ಧವಿದ್ದೇನೆ ಎಂದು ಹೇಳಿದ್ದರು. ನಾನು ಸನಾತನ ಧರ್ಮವನ್ನು ಮಾತ್ರ ಟೀಕಿಸಿದ್ದೇನೆ ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದೇನೆ ಎಂದು ಪುನರುಚ್ಚರಿಸುತ್ತಿದ್ದೇನೆ. ಇವು ಎಲ್ಲ ಧರ್ಮಗಳಲ್ಲೂ ಇವೆ. ಇದನ್ನು ನಾನು ನಿರಂತರವಾಗಿ ಹೇಳುತ್ತೇನೆ” ಎಂದಿದ್ದರು.
ಈ ನಡುವೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತಾಗಿ ಭಾಷಣ ಮಾಡಿದ್ದಕ್ಕಾಗಿ ಕಾನೂನು ಹಕ್ಕುಗಳ ವೀಕ್ಷಣಾಲಯ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಸೋಮವಾರ ಚೆನ್ನೈನ ಪೊಲೀಸ್ ಕಮಿಷನರ್‌ಗೆ ಲೀಗಲ್ ನೋಟಿಸ್ ಕಳುಹಿಸಿದೆ. ದೆಹಲಿ ಹಾಗೂ ಬಿಹಾರದಲ್ಲೂ ಪ್ರಕರಣ ದಾಖಲಾಗಿದೆ.