- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಿಯೋಗ ಭೇಟಿ
- ಮರು ತನಿಖೆಗೆ ಒಳಪಡಿಸಲು ಸರ್ಕಾರಕ್ಕೆ ಅವಕಾಶವಿಲ್ಲ ಎಂದ ಸಿದ್ದರಾಮಯ್ಯ
ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿರುವ ಸೌಜನ್ಯ ಹತ್ಯೆ ಪ್ರಕರಣದ ಬಗ್ಗೆ ಮರು ತನಿಖೆ ಆಗಬೇಕು ಎಂದು ಪೋಷಕರಿಂದ ಹಿಡಿದು ಹಲವಾರು ಸಂಘಟನೆಗಳು ಆಗ್ರಹಿಸಿವೆ. ಈ ಒತ್ತಾಯದ ಬೆನ್ನಲ್ಲೇ ಬಿಜೆಪಿ ನಿಯೋಗ ಕೂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲಟ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸೌಜನ್ಯ ಹತ್ಯಾ ಪ್ರಕರಣದ ಮರು ತನಿಖೆಗೆ ಆಗ್ರಹಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ವಿ.ಸುನಿಲ್‌ಕುಮಾರ್, ಶಾಸಕರಾದ ಹರೀಶ್ ಪೂಂಜ, ಭರತ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಅಶ್ವತ್ಥನಾರಾಯಣ ಅವರನ್ನು ಒಳಗೊಂಡ ನಿಯೋಗ ಈ ಮನವಿ ಸಲ್ಲಿಸಿದೆ.
ಸೌಜನ್ಯ ಪ್ರಕರಣದ ಬಗ್ಗೆ ಮರುತನಿಖೆಗೆ ಅವಕಾಶವಿದ್ದರೆ ಪರಿಶೀಲನೆ ನಡೆಸುತ್ತೇನೆ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಭೇಟಿ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರ ಘೋಷಣೆಯಲ್ಲ, ಪೀಡಿತರಿಗೆ ಪರಿಹಾರ ಮುಟ್ಟಿಸುವುದು ಮುಖ್ಯ
ಈ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವೇಳೆ ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು, “ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಲು ರಾಜ್ಯ ಸರ್ಕಾರಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ವಿಷಯವನ್ನು ಸೌಜನ್ಯ ಪೋಷಕರಿಗೆ ತಿಳಿಸಿದ್ದೇನೆ. ಕಾನೂನು ಸಲಹೆ ಪಡೆದು ಸೌಜನ್ಯಳ ಪೋಷಕರು ಮೇಲ್ಮನವಿ ಸಲ್ಲಿಸಬಹುದು ಅಥವಾ ಸಿಬಿಐಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ” ಎಂದಿದ್ದಾರೆ.
ಕೊಲೆಯಾದ ಸೌಜನ್ಯ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಹೋರಾಟ ಸಮಿತಿ ಮುಖಂಡರು ಕೂಡ ನ್ಯಾಯ ಕೋರಿ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ಸೌಜನ್ಯ ಕುಟುಂಬಸ್ಥರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮರು ತನಿಖೆಗೆ ಆಗ್ರಹಿಸಿದ್ದನ್ನು ಇಲ್ಲಿ ನೆನೆಯಬಹುದು.