ಮಂಗಳವಾರ ನಗರದ ಚರ್ಚ್ ಸ್ಟ್ರೀಟ್ ಕಚೇರಿವೊಂದಕ್ಕೆ ಏಕಾಏಕಿ ಪ್ರವೇಶಿಸಿದ ಕಾಮುಕನೊಬ್ಬ ಕಚೇರಿಯಲ್ಲಿದ್ದ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಯುವಕನೊಬ್ಬ ಕಚೇರಿ ಪ್ರವೇಶಿಸಿ ಉದ್ಯೋಗಿಗೆ ನೇರವಾಗಿ ಲೈಂಗಿಕ ಚಟುವಟಿಕೆಗೆ ಬರಬೇಕೆಂದು ಪೀಡಿಸಿದ ಪ್ರಸಂಗ ನಿಜಕ್ಕೂ ಬೆಂಗಳೂರಿನ ಖ್ಯಾತಿಗೆ ಮಸಿ ಬೆಳೆಯುವಂತಿದೆ ಎಂದು ಎಎಪಿ ಆರೋಪಿಸಿದೆ.
ಈ ಪ್ರಕರಣವನ್ನು ಬೆಳಕಿಗೆ ತಂದ ಆಮ್ ಆದ್ಮಿ ಪಕ್ಷದ ಬೆಂಗಳೂರು ಮಾಧ್ಯಮ ಸಂಚಾಲಕ ಅನಿಲ್ ನಾಚಪ್ಪ ವಿಡಿಯೋ ಮತ್ತು ಆಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಘಟನೆ ನಡೆದ ತಕ್ಷಣವೇ ಹತ್ತಿರದ ಕಬ್ಬನ್ ಪಾರ್ಕ್ ಪೊಲೀಸರಿಗೆ ಕರೆ ಮಾಡಿದರು ಸಹ, ದೂರನ್ನು ನೀಡಿದರು ಸಹ ಪೊಲೀಸರು ತಕ್ಷಣ ಸಹಕರಿಸದೆ ಕೈ ಚೆಲ್ಲಿ ಕುಳಿತರು. ಸೂಕ್ತ ಸಮಯದಲ್ಲಿ ಸ್ಥಳಕ್ಕೆ ಆಗಮಿಸದೆ ನಂತರ ಒತ್ತಡ ಬಂದಾಗ ನಾಮ್ ಕೆ ವಾಸ್ತೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ಕಾರ್ಯವನ್ನು ಕೈಗೊಂಡರು. ಹತ್ತಿರದ ರಸ್ತೆಯಲ್ಲಿ ಇದ್ದ ಸಿಸಿ ಕ್ಯಾಮರಾಗಳು ಕಾರ್ಯ ನಿರ್ವಹಣೆ ಮಾಡುತ್ತಿಲ್ಲವೆಂದು, ಆರೋಪಿಯನ್ನು ಹಿಡಿಯಲು ಸಾಕಷ್ಟು ಕಷ್ಟವಾಗುತ್ತದೆ ಎಂದು ತಿಳಿಸಿದ ವಿಚಾರ ಬೆಂಗಳೂರು ಪೊಲೀಸರು ಮಹಿಳಾ ಸುರಕ್ಷತೆಯ ವಿಚಾರದಲ್ಲಿ ಸಾಕಷ್ಟು ಬೇಜವಾಬ್ದಾರಿಯನ್ನು ಹೊಂದಿದ್ದಾರೆ ಎಂಬುದು ಸಾಬೀತಾಗುತ್ತದೆ ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಒಂದು ವಾರ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ
“ಬೆಂಗಳೂರಿನ ಅನೇಕ ಪ್ರಮುಖ ರಸ್ತೆಗಳಲ್ಲಿ ಸುರಕ್ಷತೆಗಾಗಿ ಹಾಕಿರುವ ಸಿಸಿ ಕ್ಯಾಮೆರಾಗಳು ಸಂಪೂರ್ಣ ನಿಷ್ಕ್ರಿಯವಾಗಿರುವ ವಿಚಾರ ಪೊಲೀಸರಿಂದಲೇ ಬೆಳಕಿಗೆ ಬಂದಿದೆ. ಠಾಣೆಯಲ್ಲಿ ಯಾವುದೇ ದೂರು ನೀಡಿದರು ಸಿ ಸಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲವೆಂಬ ಉತ್ತರ ಸಿಗುತ್ತದೆ. ಇದು ನಿಜಕ್ಕೂ ಬೆಂಗಳೂರಿನ ಘನತೆಗೆ ಗೌರವ ತರುವಂತದ್ದಲ್ಲ, ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ನಗರ ಸುರಕ್ಷತೆಗೆ ಹಾಕಿರುವ ಸಿಸಿ ಕ್ಯಾಮೆರಾಗಳು ನಿಷ್ಕ್ರಿಯಗೊಂಡಿವೆ. ಹಾಗಾಗಲು ಸ್ಥಳೀಯ ರಾಜಕಾರಣಿಗಳ, ಅಧಿಕಾರಿಗಳ ಪಾಲೂ ಇದೆ. ಬೆಂಗಳೂರಿನ ಜನತೆಗೆ ಈ ಕ್ಯಾಮೆರಾಗಳಿಂದ ಯಾವುದೇ ಸುರಕ್ಷತೆ, ರಕ್ಷಣೆ ಲಭ್ಯವಿಲ್ಲದಂತಾಗಿದೆ. ಕೂಡಲೇ ಗೃಹ ಸಚಿವರು ತನಿಖೆಯನ್ನು ನಡೆಸಿ ಸಿಸಿ ಕ್ಯಾಮೆರಾಗಳ ಕಾರ್ಯ ಶೈಲಿಯನ್ನು ಪರಿಶೀಲಿಸಿ ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.