ರಸ್ತೆಯುದ್ದಕ್ಕೂ ತೆಗ್ಗು, ಗುಂಡಿಗಳು ಎರಡೂ ಬದಿ ತಲೆಯೆತ್ತರಕ್ಕೆ ಬೆಳೆದು ನಿಂತಿರುವ ಜಾಲಿ ಗಿಡಗಳು, ಇನ್ನು ಸ್ವಲ್ಪ ಮಳೆಯಾದರೆ ಕೆರೆಯಂತಾಗುವ ಈ ರಸ್ತೆ ಮೇಲೆ ಒಂದು ಸಲ ಸಂಚರಿಸಿ ನರಕಯಾತನೆಯ ಅನುಭವಿಸಿದವರು ಮತ್ತೊಮ್ಮೆ ಇತ್ತ ತಿರುಗಿಯೂ ನೋಡುವುದಿಲ್ಲ. ಆದರೆ ಈ ಕಿತ್ತುಹೋದ ರಸ್ತೆ ಮೇಲೆಯೇ ದಿನನಿತ್ಯ ಸಂಚರಿಸುವ ಸಂಕಟ ಮಾತ್ರ ಈ ಗ್ರಾಮದ ಜನರಿಗೆ ಅನಿವಾರ್ಯ.
ಹೌದು, ಇದು ಬೀದರ್ ಜಿಲ್ಲೆ ಬೀದರ್ ತಾಲ್ಲೂಕಿನ ಇಸ್ಲಾಂಪುರ ಗ್ರಾಮದಿಂದ ಕೌಠಾ(ಬಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ, ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಹಿಡಿಶಾಪ ಹಾಕುತ್ತಿದ್ದಾರೆ.
ಬೀದರ-ಔರಾದ ರಾಷ್ಟ್ರೀಯ ಹೆದ್ದಾರಿಯ ಕೌಠಾ(ಬಿ) ಬ್ರಿಡ್ಜ್ ದಿಂದ 2 ಕಿ.ಮೀ. ದೂರವಿರುವ ಇಸ್ಲಾಂಪುರ ಗ್ರಾಮದಲ್ಲಿ ಸುಮಾರು 300 ಕ್ಕೂ ಅಧಿಕ ಮನೆಗಳಿದ್ದು, 1,200 ಮತದಾರರಿದ್ದಾರೆ. ಆದರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ದಶಕಗಳೇ ಉರಳಿದರೂ ಕನಿಷ್ಠ ದುರಸ್ತಿ ಕಾಣದೇ ಇರುವುದು ದೌರ್ಭಾಗ್ಯವೇ ಸರಿ.
ಗ್ರಾಮದಿಂದ ಜಿಲ್ಲಾ ಕೇಂದ್ರ ಬೀದರ್ ಹಾಗೂ ಔರಾದ ತಾಲೂಕಿಗೆ ತೆರಳು, ರೈತರು ಜಮೀನುಗಳಿಗೆ ತೆರಳಲು ಈ ರಸ್ತೆಯೇ ಗತಿ. ಎರಡೂ ಬದಿಗೆ ಮುಳ್ಳು ಗಿಡಗಳು ಬೆಳೆದಿದ್ದು, ಎದುರಿಗೆ ಬರುವ ವಾಹನಗಳು ಕಾಣಿಸುವುದಿಲ್ಲ. ಇನ್ನು ದ್ವಿಚಕ್ರ ವಾಹನ ಸವಾರರ ಪ್ರಯಾಣವಂತೂ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ನಿತ್ಯ ಸರ್ಕಸ್ ಮಾಡುತ್ತ ಈ ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರ ಗೋಳು ಕೇಳೊರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗೂ ಏನು ಸಂಬಂಧವಿಲ್ಲ ಎಂಬಂತೇ ವರ್ತಿಸುತ್ತಿರುವುದು ಗ್ರಾಮಸ್ಥರ ಕಂಗೆಣ್ಣಿಗೆ ಗುರಿಯಾಗಿದೆ.
ಕೋಟಿಗಟ್ಟಲೆ ಅನುದಾನವಿದ್ದರೂ ಅನುಷ್ಠಾನವಿಲ್ಲ:
ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಸೇರಿದಂತೆ ರಸ್ತೆ ಕಾಮಗಾರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳು ಜಾರಿಗೊಳಿಸಿವೆ. ಆದರೆ ʼದೇವರು ಕೊಟ್ಟರೂ ಪೂಜಾರಿ ಕೊಡಲ್ಲʼ ಎಂಬಂತೆ ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆ, ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಸರ್ಕಾರದ ಅನೇಕ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದೇ ಇರುವ ಕಾರಣ ಜನರು ನಿತ್ಯ ಸಂಕಟ ಅನುಭವಿಸುವುದು ಸರ್ವೇಸಾಮನ್ಯವಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ವಾಗೀಣ ಅಭಿವೃದ್ಧಿ ರಾಜ್ಯ ಸರ್ಕಾರ 5 ಸಾವಿರ ಕೋಟಿ ರೂ. ಅನುದಾನ ಮೀಸಲಿಡುತ್ತದೆ. ಆದರೆ ಜನಪ್ರತಿನಿಧಿಗಳು ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮೀಣ ಪ್ರದೇಶದ ಬಹುತೇಕ ಸಮಸ್ಯೆಗಳಿಗೆ ಇತಿಶ್ರೀ ಹೇಳಬಹುದು. ಆದರೆ ಐದು ಸಾವಿರ ಕೋಟಿ ಅನುದಾನದಲ್ಲಿ ಕಳೆದ ಅವಧಿ ಸರ್ಕಾರದ ಜನಪ್ರತಿನಿಧಿಗಳು ಎರಡು ಸಾವಿರ ಕೋಟಿ ಅನುದಾನ ಬಳಕೆ ಮಾಡದೇ ಉಳಿಸಿದ್ದಾರೆ. ಇದು ಆಡಳಿತ ವ್ಯವಸ್ಥೆಯ ಇಚ್ಚಾ ಶಕ್ತಿ ಕೊರತೆ ಅಲ್ಲದೆ ಮತ್ತೇನಲ್ಲ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.
ಗ್ರಾಮಸ್ಥರು ಆಕ್ರೋಶ:
“ಪ್ರತಿ ಸಲ ಚುನಾವಣೆ ವೇಳೆ ಭರವಸೆ ನೀಡುವ ಜನಪ್ರತಿನಿಧಿಗಳು ದಶಕ ಕಳೆದರೂ ಕನಿಷ್ಠ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಈ ಬಗ್ಗೆ ಕ್ಷೇತ್ರದ ಶಾಸಕ, ಸಚಿವ ರಹೀಂ ಖಾನ್, ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ. ಅಧಿಕ ಮಳೆ ಬಂದರೆ ರಸ್ತೆ ಪಕ್ಕದ ಮಾಂಜ್ರಾ ನದಿ ನೀರು ಹರಿದು ರಸ್ತೆ ಮಧ್ಯೆದ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರ ಸ್ಥಗಿತವಾಗುತ್ತದೆ. ಬೇರೆ ದಾರಿಯಿಲ್ಲದೆ ಐದಾರು ಕಿ.ಮೀ. ಜನವಾಡ ಗ್ರಾಮದ ಮಾರ್ಗವಾಗಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಕೂಡಲೇ ಸ್ಥಳೀಯ ಶಾಸಕರು, ಪೌರಾಡಳಿತ ಸಚಿವರು ಆದ ರಹೀಂ ಖಾನ್ ಅವರು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು” ಗ್ರಾ.ಪಂ. ಉಪಾಧ್ಯಕ್ಷ ವೈಜಿನಾಥ ಜೀರ್ಗೆ ಈದಿನ.ಕಾಮ್ ದೊಂದಿಗೆ ಮಾತನಾಡಿ ಒತ್ತಾಯಿಸಿದರು.

“ಈ ಹಿಂದೆ ಭೀಮಣ್ಣ ಖಂಡ್ರೆಯವರು ಶಾಸಕರಾಗಿದ್ದ ವೇಳೆ ಭಾಲ್ಕಿ ಮತಕ್ಷೇತ್ರಕ್ಕೆ ಒಳಪಟ್ಟಿತ್ತು, ಆವಾಗ ಒಂದೆರಡು ಸಲ ರಸ್ತೆ ದುರಸ್ತಿ ಕಂಡಿತ್ತು. ತದನಂತರೆ ಅರ್ಧ ರಸ್ತೆ ದುರಸ್ತಿ ಮಾಡಿದರೆ ಅರ್ಧ ಹಾಗೇ ಉಳಿಸುತ್ತಾರೆ. ಇದೀಗ ಸಂಪೂರ್ಣ ಹದಗೆಟ್ಟು ಹೋಗಿದ್ದು, ಪಾದಚಾರಿಗಳು ನಡೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಈ ರಸೆ ಮೇಲೆ ರಾತ್ರಿ ವೇಳೆ ಯಾರೋಬ್ಬರೂ ಓಡಾಡಲು ಆಗದಂತೆ ರಸ್ತೆ ಉದ್ದಕ್ಕೂ ಮುಳ್ಳಿನ ಗಿಡ ಬೆಳೆದು ನಿಂತಿವೆ. ಊರಿನ ಒಂದು ಕಡೆ ಮಾಂಜ್ರಾ ನದಿ, ಇನ್ನೊಂದು ಕಡೆ ಹಳ್ಳ ಹರಿಯುವ ಕಾರಣದಿಂದ ʼಇಸ್ಲಾಂಪೂರ ಅಂದ್ರೆ ಇಸ್ಲಾಡಕೊತಾ ಇರೋದುʼ ಎಂದು ಮಾಜಿ ಸಚಿವ ಭೀಮಣ್ಣಾ ಖಂಡ್ರೆಯವರು ಹಾಸ್ಯ ಮಾಡುತ್ತಿದ್ದರು. ಇಂದಿಗೂ ಅದೇ ದುಸ್ಥಿತಿಯಲ್ಲಿ ನಮ್ಮೂರಿನ ಜನ ಜೀವನ ನಡೆಸುತ್ತಿದ್ದೇವೆ” ಎಂದು ಈದಿನ.ಕಾಮ್ ದೊಂದಿಗೆ ಮಾತನಾಡಿದ ಗ್ರಾಮಸ್ಥ ರಾಜಕುಮಾರ ಬಿರಾದರ್ ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದೀರಾ? ಬೀದರ್ | ಸೆ. 8, 9 ರಂದು ಬೀದರ್ ಕೊಟೆಯ ಮೇಲೆ ʼಏರ್ ಶೋʼ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಈ ಕುರಿತು ಕ್ಷೇತ್ರದ ಶಾಸಕ ಹಾಗೂ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹಾಗೂಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಈದಿನ.ಕಾಮ್ ಸಂಪರ್ಕಿಸಿದರೆ ಪ್ರತಿಕ್ರಿಯೆ ನೀಡಲಿಲ್ಲ.